Source: http://kannadavishnusahasranama.blogspot.com/
Reference: Pravachanas of Sri Bannanje Govindacharya
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಪೀಠಿಕೆ
ಮಹಾಭಾರತ ಯುದ್ಧ ಮುಗಿದಿದೆ. ಭೀಷ್ಮಾಚಾರ್ಯರು ಶರಶಯ್ಯದಲ್ಲಿದ್ದಾರೆ. ಇತ್ತ ಧರ್ಮರಾಯನ ಪಟ್ಟಾಭಿಷೇಕ ಶ್ರೀಕೃಷ್ಣ ಮತ್ತು ವ್ಯಾಸರ ಸಮ್ಮುಖದಲ್ಲಿ ನಡೆದಿದೆ. ಒತ್ತಾಯದಲ್ಲಿ ಪಟ್ಟಾಭಿಷೇಕಕ್ಕೆ ಒಪ್ಪಿದ್ದ ಯುಧಿಷ್ಠಿರನ ಮನಸ್ಸಿಗೆ ಕಿಂಚಿತ್ತೂ ಸಮಾಧಾನವಿಲ್ಲ. ಎಲ್ಲಾ ವೀರರು, ಹಿರಿಯರು, ಲಕ್ಷ-ಲಕ್ಷ ಮಂದಿ ಸೈನಿಕರ ನಾಶದ ನಂತರ, ಸಿಂಹಾಸನವೇರಿದ ಆತನಿಗೆ ಪಾಪ ಪ್ರಜ್ಞೆ ಕಾಡುತ್ತಿರುತ್ತದೆ. ಇಂತಹ ಸ್ಥಿತಿಯಲ್ಲಿದ್ದ ಧರ್ಮರಾಯನನ್ನು ಶ್ರೀಕೃಷ್ಣ ಭೀಷ್ಮಾಚಾರ್ಯರ ಬಳಿಗೆ ಕರೆತಂದು, ಆತನಿಗೆ ಧರ್ಮ ಪಾಠವನ್ನು ಬೋಧಿಸುವಂತೆ ಕೇಳಿಕೊಳ್ಳುತ್ತಾನೆ.
ಧರ್ಮದ ಪರ ಹೋರಾಡಿ ಗೆದ್ದ ಧರ್ಮರಾಯನನ್ನು ಕೊಂಡಾಡಿದ ಭೀಷ್ಮಾಚಾರ್ಯರು, "ಒಂದು ವೇಳೆ ನೀನು ಅನ್ಯಾಯದ ವಿರುದ್ಧದ ಈ ಯುದ್ಧದಲ್ಲಿ ಹೋರಾಡದೆ ಇದ್ದಿದ್ದರೆ, ನಿನ್ನನ್ನು ಹೇಡಿ ಎನ್ನುತ್ತಿದ್ದೆ" ಎನ್ನುತ್ತಾರೆ. ಈ ಮಾತಿನಿಂದ ಧರ್ಮರಾಯನಲ್ಲಿದ್ದ ಪಾಪ ಪ್ರಜ್ಞೆ ಹೊರಟುಹೋಗಿ, 'ತನಗೆ ಧರ್ಮೋಪದೇಶ ಮಾಡಬೇಕೆಂದು' ಭೀಷ್ಮಾಚಾರ್ಯರಲ್ಲಿ ಕೇಳಿಕೊಳ್ಳುತ್ತಾನೆ.
ಈ ರೀತಿ ಭೀಷ್ಮಾಚಾರ್ಯರು ಧರ್ಮರಾಯನಿಗೆ ಧರ್ಮೋಪದೇಶ ಮಾಡಿದ ಮಹಾಭಾರತದ ಅನುಶಾಸನ ಪರ್ವದ ಕೊನೆಯ ಅಪೂರ್ವ ಉಪದೇಶ ಈ ವಿಷ್ಣು ಸಹಸ್ರನಾಮ. ವ್ಯಾಸ ಮಹರ್ಷಿಗಳು ಈ ಸಾವಿರ ನಾಮವನ್ನು ಸ್ತೋತ್ರ ರೂಪದಲ್ಲಿ ನಮಗೆ ಕಾಣಿಕೆಯಾಗಿ ನೀಡಿದ್ದಾರೆ.
ವಿಷ್ಣು ಸಹಸ್ರನಾಮದಲ್ಲಿ ಬರುವ ಸಾವಿರ ನಾಮಗಳು ಭಗವಂತನ ಗುಣವಾಚಕ ನಾಮಗಳಾಗಿವೆ. ನಮಗೆ ಇರುವ ಹೆಸರು ಗುಣವಾಚಕವಲ್ಲ ಅದು ಕರೆದಾಗ ಓಗೊಡಲು ಇಟ್ಟ ಹೆಸರು. ಆದರೆ ಭಗವಂತನ ಪ್ರತೀ ನಾಮ ಆತನ ಗುಣವನ್ನು ವರ್ಣಿಸುತ್ತದೆ. ನಮ್ಮಲ್ಲಿ ಅನೇಕ ಸಹಸ್ರನಾಮಗಳಿವೆ. ಬಹಳ ಪ್ರಸಿದ್ಧವಾದ ಲಲಿತ ಸಹಸ್ರನಾಮ, ಶಿವ ಸಹಸ್ರನಾಮ, ಗಣೇಶ ಸಹಸ್ರನಾಮ, ನರಸಿಂಹ ಸಹಸ್ರನಾಮ ಇತ್ಯಾದಿ. ಈ ಎಲ್ಲಾ ಸಹಸ್ರನಾಮಗಳಿಗಿಂತ ಹೆಚ್ಚು ವ್ಯಾಖ್ಯಾನವಿರುವ, ಹೆಚ್ಚು ಮಂದಿ ವಿದ್ವಾಂಸರು ಭಾಷ್ಯ ಬರೆದಿರುವ, ಮಹಾಭಾರತದ ಭಾಗವಾಗಿರುವ, ಸುಪ್ರಸಿದ್ಧ ಸಹಸ್ರನಾಮ-ವಿಷ್ಣು ಸಹಸ್ರನಾಮ. ಪದ್ಮ ಪುರಾಣದಲ್ಲಿ ಒಂದು ವಿಷ್ಣು ಸಹಸ್ರನಾಮವನ್ನು ಕಾಣುತ್ತೇವೆ. ಆದರೆ ಅದು ಅಷ್ಟೊಂದು ಪ್ರಚಲಿತದಲ್ಲಿಲ್ಲ.
ವಿಷ್ಣು ಸಹಸ್ರನಾಮದಲ್ಲಿ ಕೆಲವೊಂದು ನಾಮಗಳು ಒಂದಕ್ಕಿಂತ ಹೆಚ್ಚು ಭಾರಿ ಪುನರಾವರ್ತನೆ ಆಗಿರುವುದನ್ನು ನಾವು ಕಾಣುತ್ತೇವೆ. ಇಲ್ಲಿ ಬರುವ ಒಂದೊಂದು ನಾಮಕ್ಕೂ ನೂರು ಅರ್ಥವಿದೆಯಂತೆ. ಒಂದು ವೇಳೆ ಒಂದು ನಾಮ ಎರಡು ಬಾರಿ ಬಂದರೆ ಆ ನಾಮಕ್ಕೆ ಇನ್ನೂರು ಅರ್ಥಗಳಿವೆ ಎಂದು ತಿಳಿಯಬೇಕಾಗುತ್ತದೆ. ಆದರೆ ಇಷ್ಟೊಂದು ಅರ್ಥವನ್ನು ಕಂಡುಕೊಳ್ಳುವುದು ಸಾಮಾನ್ಯರಿಗೆ ಅಸಾಧ್ಯ.
ಸಹಸ್ರನಾಮದ ರಾಜ ಮಹಾಭಾರತದ ಅನುಶಾಸನ ಪರ್ವದ ವಿಷ್ಣು ಸಹಸ್ರನಾಮ. ಪ್ರಾಚೀನರು ಹೇಳುವಂತೆ, ಅಧ್ಯಾತ್ಮ ಗ್ರಂಥಗಳಲ್ಲಿ ಶ್ರೇಷ್ಠವಾದದ್ದು ವೇದವ್ಯಾಸರು ರಚಿಸಿದ "ಭಾರತ" ಏಕೆಂದರೆ ಇದು ಭಗವಂತನ ರಚನೆ.
ನಿರ್ಣಯಃ ಸರ್ವಶಾಸ್ತ್ರಾಣಾಂ ಭಾರತಂ ಪರಿಚಕ್ಷತೇ |
ಭಾರತಂ ಸರ್ವವೇದಾಶ್ಚ ತುಲಾಮಾರೋಪಿತಾಃ ಪುರಾ ||
ದೇವೈರ್ಬ್ರಹ್ಮಾದಿಭಿಃ ಸರ್ವೈಃ ಋಷಿಭಿಶ್ಚ ಸಮನ್ವಿತೈಃ |
ವ್ಯಾಸಸ್ಯೈವಾಜ್ಞಯಾ ತತ್ರ ತ್ವತ್ಯರಿಚ್ಯತ ಭಾರತಮ್ ||
ಅಂದರೆ ಸರ್ವ ಶಾಸ್ತ್ರಾರ್ಥಗಳಿಗು ಮಹಾಭಾರತವೇ ನಿರ್ಣಾಯಕ. ಹಿಂದೆ ಮಹಾಭಾರತ ಮತ್ತು ಸಕಲ ವೇದಗಳು, ಶ್ರೀವೇದವ್ಯಾಸರ ಆದೇಶದಂತೆಯೇ, ಬ್ರಹ್ಮಾದಿ ದೇವತೆಗಳಿಂದಲೂ, ಸಕಲ ಋಷಿಗಳಿಂದಲೂ, ಒಂದು ತಕ್ಕಡಿಯಲ್ಲಿ ಇರಿಸಿ ತೂಗಲ್ಪಟ್ಟವು; ಆಗ ಮಹಾಭಾರತವು ವೇದಾದಿ ಇತರ ಸಕಲ ಶಾಸ್ತ್ರಗಳನ್ನು ಮೀರಿಸಿತ್ತು !!
ಇಂತಹ ಮಹಾಭಾರತದ ಸಾರ- 700 ಶ್ಲೋಕಗಳನ್ನೊಳಗೊಂಡ ಭಗವದ್ಗೀತೆ ಮತ್ತು ಸಾವಿರ ನಾಮಗಳನ್ನೊಳಗೊಂಡ ವಿಷ್ಣುಸಹಸ್ರನಾಮ. ಮಹಾಭಾರತ ಮಹತ್ತಾದ ಅರ್ಥದ ಭಾರವಿರುವ ಗ್ರಂಥ. ಅದು ಮನೋವೈಜ್ಞಾನಿಕವಾಗಿ ನಮ್ಮ ಮನಸ್ಸಿಗೆ ತರಬೇತಿ ಕೊಡುವ ಗ್ರಂಥ. ಪ್ರತಿಯೊಬ್ಬ ಮನುಷ್ಯನ ಒಳಗೆ ನಡೆಯುವ ಜೀವನ್ಮೌಲ್ಯಗಳನ್ನು ಹೇಳುವ ಗ್ರಂಥ. ಇದು ನ್ಯಾಯ- ಅನ್ಯಾಯ, ಧರ್ಮ-ಅಧರ್ಮ, ಒಳ್ಳೆಯತನ-ಕೆಟ್ಟತನಗಳ ನಡುವೆ ನಡೆಯುವ ಹೋರಾಟವನ್ನು ತಿಳಿಸುವ ಗ್ರಂಥ.
ಮಹಾಭಾರತದಲ್ಲಿ ಬರುವ ಪಾಂಡವರ ಏಳು ಪಾತ್ರಗಳು ಒಬ್ಬ ಮನುಷ್ಯನಲ್ಲಿರಬೇಕಾದ ಹದಿನೆಂಟು ಗುಣಗಳನ್ನು ಪ್ರತಿನಿಧಿಸುತ್ತವೆ.
೧. ಧರ್ಮರಾಜ - ಧರ್ಮ
೨. ಭೀಮಸೇನ - ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ.
೩. ಅರ್ಜುನ - ಶ್ರವಣ, ಮನನ ಮತ್ತು ನಿದಿಧ್ಯಾಸನ
೪.೫. ನಕುಲ-ಸಹದೇವ - ಶೀಲ ಮತ್ತು ವಿನಯ
೬. ದ್ರೌಪದಿ - ವೇದವಿದ್ಯೆ
೭. ಶ್ರೀಕೃಷ್ಣ – ವೇದವೇದ್ಯ
ಹೀಗೆ ಮಹಾಭಾರತದ ಪ್ರತಿಯೊಂದು ಶ್ಲೋಕ, ಪ್ರತಿಯೊಂದು ಪದ, ಪ್ರತಿಯೊಂದು ಅಕ್ಷರ ಎಲ್ಲಕ್ಕಿಂತ ಎತ್ತರದಲ್ಲಿರುವ ಹದಿನೆಂಟನೆಯವನಾದ ಭಗವಂತನನ್ನು ಹೇಳುತ್ತದೆ. ಭಾರತದಲ್ಲಿ ಒಂದು ಲಕ್ಷ ಶ್ಲೋಕಗಳಿವೆ. ಅಂದರೆ ಒಟ್ಟಿಗೆ 32 ಲಕ್ಷ ಅಕ್ಷರಗಳಿವೆ. ಪ್ರತಿಯೊಂದು ಅಕ್ಷರ ಭಗವಂತನ ನಾಮವಾಗಿದೆ. ಈ ರೀತಿ ಭಗವಂತನ ಗುಣಗಾನ ಮಾಡುವ ಪದಪುಂಜ ಮಹಾಭಾರತ. ಸಾಮಾನ್ಯ ಜನರಿಗೆ ಈ ಒಂದು ಲಕ್ಷ ಶ್ಲೋಕವನ್ನು ತಿಳಿಯಲು ಕಷ್ಟವಾಗಬಹುದು ಎಂದು, ಮಹಾಭಾರತದಿಂದ ಅಮೂಲ್ಯವಾದ ಎರಡು ರಸವನ್ನು ವೇದವ್ಯಾಸರು ನಮ್ಮ ಮುಂದೆ ಇರಿಸಿದ್ದಾರೆ. ಅದೇ ಭಗವದ್ಗೀತೆ ಮತ್ತು ವಿಷ್ಣುಸಹಸ್ರನಾಮ.
ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ. ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ !! ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ವಿಷ್ಣುಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ. ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗು ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ.
ಮನುಷ್ಯನ ಆಯಸ್ಸು ನೂರು ವರ್ಷ. ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು. ಗಾಯತ್ರಿ ಜಪವನ್ನು ಸಾಮಾನ್ಯವಾಗಿ ಒಂದು ಸಾವಿರದಂತೆ ದಿನಕ್ಕೆ ಮೂರು ಬಾರಿ ಮಾಡುತ್ತೇವೆ. ಏಕೆಂದರೆ ಗಾಯತ್ರಿಯಲ್ಲಿ 24 ಅಕ್ಷರಗಳಿವೆ. ಒಮ್ಮೆಗೆ ಒಂದು ಸಾವಿರ ಜಪ ಅಂದರೆ 24 ಸಾವಿರ ಅಕ್ಷರ, ದಿನಕ್ಕೆ ಮೂರು ಬಾರಿ ಅಂದರೆ 72 ಸಾವಿರ ಅಕ್ಷರ. ಇದು ನಮ್ಮ ದೇಹದಲ್ಲಿರುವ ಒಟ್ಟು ನಾಡಿಗಳ ಸಂಖ್ಯೆಗೆ ಸಮ. ಇದಕ್ಕಿಂತ ಹೆಚ್ಚು ಬಾರಿ ಪಾರಾಯಣ ಮಾಡಿದರೆ ಹುಚ್ಚು ಹಿಡಿಯುವ ಸಾಧ್ಯತೆ ಇದೆ ! ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ.
ಇಂತಹ ಅಮೂಲ್ಯವಾದ ಭಗವಂತನ ನಾಮವನ್ನು ಯಾರು ಯಾವಾಗ ಹೇಗೆ ಪಠಿಸಬಹುದು ? ವಿಷ್ಣು ಸಹಸ್ರನಾಮ ವೇದವ್ಯಾಸರು ಮನುಷ್ಯನಿಗೆ ಕೊಟ್ಟ ಅಮೂಲ್ಯ ಕಾಣಿಕೆ. ಇದನ್ನು ಗಂಡು-ಹೆಣ್ಣು , ಜಾತಿ-ಮತದ ಭೇದವಿಲ್ಲದೆ, ಎಲ್ಲರೂ ಎಲ್ಲ ಕಾಲದಲ್ಲೂ ಪಠಿಸಬಹುದು. ಬೆಳಿಗ್ಗೆ ಸ್ನಾನದ ಮೊದಲು, ಸ್ನಾನದ ನಂತರ, ಸಂಜೆ, ರಾತ್ರಿ ಯಾವಾಗ ಬೇಕಾದರೂ ಪಠಿಸಬಹುದು. ಅಲ್ಪಪ್ರಾಣ-ಮಹಾಪ್ರಾಣವನ್ನು ಸ್ಪಷ್ಟವಾಗಿ, ಗೌರವಪೂರ್ವಕವಾಗಿ, ನಂಬಿಕೆಯಿಂದ, ಪರಿಶುದ್ಧ ಮನಸ್ಸಿನಿಂದ ಪಠಿಸುವುದು ಅತ್ಯಗತ್ಯ. ವಿಷ್ಣು ಸಹಸ್ರನಾಮದಲ್ಲಿ ನಮಗೆ ತಿಳಿಯದೆ ಆಗುವ ಉಚ್ಛಾರ ದೋಷಕ್ಕೆ ಕ್ಷಮೆ ಇದೆ. ಸರ್ವಶಬ್ದ ವಾಚ್ಯನಾದ ಭಗವಂತ ನಾವು ತಿಳಿಯದೆ ಮಾಡಿದ ತಪ್ಪನ್ನು ಕ್ಷಮಿಸುತ್ತಾನೆ.
ಬನ್ನಿ...ಇಂತಹ ಅಮೂಲ್ಯ ಕೃತಿಯ ಅರ್ಥ ವಿಶ್ಲೇಷಣೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ತೆರೆದು ನೋಡೋಣ.
ಶ್ರೀ ವೈಶಂಪಾಯನ ಉವಾಚ
ಶ್ರುತ್ವಾ ಧರ್ಮಾನಶೇಷೇಣ ಪಾವನಾನಿ ಚ ಸರ್ವಶಃ |
ಯುಧಿಷ್ಠಿರಃ ಶಾಂತನವಂ ಪುನರೇವಾಭ್ಯಭ್ಯಾಷತ || 1 ||
ವೈಶಂಪಾಯನು ನುಡಿದನು: ಪಾಪಗಳನ್ನು ಕಳೆದು ಪರಿಶುದ್ಧವಾಗುವ ಎಲ್ಲ ಧರ್ಮಗಳ ಬಗ್ಗೆ ಸಮಗ್ರವಾಗಿ ಭೀಷ್ಮಾಚಾರ್ಯರಿಂದ ಕೇಳಿ ತಿಳಿದ ನಂತರ, ಯುಧಿಷ್ಠಿರ ಭೀಷ್ಮಾಚಾರ್ಯರಲ್ಲಿ ಈ ರೀತಿ ಪ್ರಶ್ನೆ ಹಾಕುತ್ತಾನೆ.
ಶ್ರೀ ಯುಧಿಷ್ಠಿರ ಉವಾಚ
ಕಿಮೇಕಂ ದೈವತಂ ಲೋಕೇ ಕಿಂ ವಾಪ್ಯೇಕಂ ಪರಾಯಣಂ |
ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಮ್ || 2 ||
ಕೋ ಧರ್ಮಃ ಸರ್ವಧರ್ಮಾಣಾಂ ಭವತಃ ಪರಮೋ ಮತಃ |
ಕಿಂ ಜಪನ್ಮುಚ್ಯತೇ ಜಂತುರ್ಜನ್ಮಸಂಸಾರಬಂಧನಾತ್ || 3 ||
ಎಲ್ಲ ಶಾಸ್ತ್ರಗಳು ಸಾರುವ ಹಿರಿಯ ದೇವತೆ ಯಾರು? ಒಬ್ಬನೇ ಒಬ್ಬ ಕೊನೆಯ ಆಸರೆ ಯಾರು? ಯಾರನ್ನು ಹಾಡಿ ಹೊಗಳುತ್ತ, ಆರಾಧಿಸುವುದರಿಂದ ಮಾನವನಿಗೆ ಒಳಿತು ? ಯಾವುದು ಎಲ್ಲ ಧರ್ಮಗಳಿಗೂ ಮಿಗಿಲಾದ ಧರ್ಮ ಎಂದು ನಿಮ್ಮ ಅಭಿಮತ ? ಯಾವುದನ್ನು ಜಪಿಸುವುದರಿಂದ ಮಾನವ ಹುಟ್ಟಿನಿಂದ ಹಾಗು ಸಂಸಾರ ಬಂಧದಿಂದ ಮುಕ್ತಿ ಪಡೆಯುತ್ತಾನೆ ?
ಶ್ರೀ ಭೀಷ್ಮ ಉವಾಚ
ಜಗತ್ಪ್ರಭುಂ ದೇವದೇವಮನಂತಂ ಪುರುಷೋತ್ತಮಮ್ |
ಸ್ತುವನ್ನಾಮಸಹಸ್ರೇಣ ಪುರುಷಃ ಸತತೋತ್ಥಿತಃ || 4 ||
ತಮೇವ ಚಾರ್ಚಯನ್ನಿತ್ಯಂ ಭಕ್ತ್ಯಾ ಪುರುಷಮವ್ಯಯಮ್ |
ಧ್ಯಾಯನ್ ಸ್ತುವನ್ನಮಸ್ಯಂಶ್ಚ ಯಜಮಾನಸ್ತಮೇವ ಚ || 5 ||
ಅನಾದಿ ನಿಧನಂ ವಿಷ್ಣುಂ ಸರ್ವಲೋಕಮಹೇಶ್ವರಮ್ |
ಲೋಕಾಧ್ಯಕ್ಷಂ ಸ್ತುವನ್ನಿತ್ಯಂ ಸರ್ವದುಃಖಾತಿಗೋ ಭವೇತ್ || 6 ||
ಬ್ರಹ್ಮಣ್ಯಂ ಸರ್ವಧರ್ಮಜ್ಞಂ ಲೋಕಾನಾಂ ಕೀರ್ತಿವರ್ಧನಮ್ |
ಲೋಕನಾಥಂ ಮಹದ್ಭೂತಂ ಸರ್ವಭೂತಭವೋಧ್ಭವಮ್ || 7 ||
ಎಂದೂ ಎಡವದೇ ಎಚ್ಚರದಿಂದಿರುವ ಸಾಧಕ, ಜಗದ ಒಡೆಯನನ್ನು, ದೇವತೆಗಳಿಗೂ ಹಿರಿಯನಾದ ಹಿರಿದೈವವನ್ನು, ಆತನ ಸಾವಿರನಾಮಗಳಿಂದ ಸ್ತುತಿಸುತ್ತಾ; ಅಳಿವಿರದ ಆ ಪರಮಪುರುಷನನ್ನೇ ಅನುಗಾಲ ಭಕ್ತಿಯಿಂದ ಪೂಜಿಸುತ್ತ; ಅವನನ್ನೇ ಮನದಲ್ಲಿ ನೆನೆಯುತ್ತ, ಸದಾ ಸ್ತುತಿಸುತ್ತ, ತಲೆಬಾಗಿ ಆರಾಧಿಸುತ್ತಾ; ತುದಿ-ಮೊದಲು ಇರದವನನ್ನು, ಎಲ್ಲೆಡೆ ತುಂಬಿರುವವನನ್ನು. ಎಲ್ಲ ಲೋಕಗಳ ಹಿರಿಯ ಒಡೆಯರಿಗೂ ಒಡೆಯನಾದವನನ್ನು, ಮೇಲೆ ನಿಂತು ಎಲ್ಲವನ್ನು ಕಾಣುತ್ತಿರುವವನನ್ನು; ತಿಳಿದವರು ಮೆಚ್ಚುವವನನ್ನು, ಎಲ್ಲ ಧರ್ಮಗಳ ಬಲ್ಲವನನ್ನು, ಜೀವಗಳಿಗೆ ಜಸದ ಏರು ತೋರುವವನನ್ನು; ಜೀವ ಜಾತದ ಒಡೆಯನನ್ನು, ಎಲ್ಲ ಜೀವಗಳಿಗೂ ಬಾಳನಿತ್ತವನನ್ನು, ಹಿರಿಯ ತತ್ವವಾದ ನಾರಾಯಣನನ್ನು ಆರಾಧಿಸಬೇಕು.
ಏಷ ಮೇ ಸರ್ವಧರ್ಮಾಣಾಂ ಧರ್ಮೋಧಿಕತಮೋ ಮತಃ |
ಯದ್ಭಕ್ತ್ಯಾ ಪುಂಡರೀಕಾಕ್ಷಂ ಸ್ತವೈರರ್ಚೇನ್ನರಃ ಸದಾ || 8 ||
ಭಗವಂತನನ್ನು ಅವನ ಗುಣದ ಅನುಸಂಧಾನದ ಮೂಲಕ ಸ್ತುತಿಸುವುದೇ ಧರ್ಮದಲ್ಲಿ ಶ್ರೇಷ್ಠವಾದ ಧರ್ಮ. ಸ್ತೋತ್ರಗಳಲ್ಲಿ ಶ್ರೇಷ್ಠವಾದ ಸ್ತೋತ್ರ ವಿಷ್ಣು ಸಹಸ್ರನಾಮ. ಭಗವಂತನ ಸ್ತೋತ್ರವನ್ನು ಶ್ರದ್ಧೆ-ಭಕ್ತಿಯಿಂದ, ವಿಶ್ವಾಸ-ನಂಬಿಕೆಯಿಂದ ಸ್ತುತಿಸುವುದು ಎಲ್ಲಾ ಧರ್ಮಗಳಿಗಿಂತ ಮಹತ್ತಾದ ಧರ್ಮ. ನಮ್ಮ ನಂಬಿಕೆ ಎಂತದ್ದೋ, ನಮ್ಮ ವ್ಯಕ್ತಿತ್ವ ಎಂತದ್ದೋ, ನಾವು ಪಡೆಯುವ ಫಲ ಅಂತದ್ದು. ನಂಬಿಕೆಯನ್ನು ಬೆಳೆಸಿಕೊಳ್ಳದಿದ್ದರೆ ಉಪಯೋಗವಿಲ್ಲ. ತಿಳಿಯದೇ ನಂಬದೇ ಪೂಜಿಸಿ ಉಪಯೋಗವಿಲ್ಲ. ಗೌರವಪೂರ್ವಕವಾಗಿ, ನಂಬಿಕೆಯಿಂದ, ಸ್ತೋತ್ರಗಳಿಂದ ಹಾಡಿ ಕೊಂಡಾಡಿ ಪೂಜಿಸುವುದು ಶ್ರೇಷ್ಠವಾದ ಧರ್ಮ.
ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ |
ಪರಮಂ ಯೋ ಮಹದ್ಬ್ರಹ್ಮ ಪರಮಂ ಯಃ ಪರಾಯಣಮ್ || 9 ||
ಭಗವಂತ ಬೆಳಕುಗಳಿಗೆ ಬೆಳಕು ನೀಡುವ ಸ್ವರೂಪ, ಎಲ್ಲರ ಚಿಂತನೆಯ ಕೊನೆಯ ಗುರಿ, ಎಲ್ಲ ಜ್ಞಾನದ ಗಮ್ಯ ಆ ಭಗವಂತ. ಇಲ್ಲಿ ಭಗವಂತನನ್ನು 'ಪರಮ ಮಹಾ ಬ್ರಹ್ಮ' ಎನ್ನುತ್ತಾರೆ. ಇಲ್ಲಿ ಬ್ರಹ್ಮ ಎಂದರೆ ಜೀವರು; ಪರಬ್ರಹ್ಮ ಎಂದರೆ ಮುಕ್ತರಾದ ಜೀವರು; ಪರಮಬ್ರಹ್ಮ ಎಂದರೆ ಶ್ರೀತತ್ವ, ನಿತ್ಯ ಮುಕ್ತಳಾದ ಶ್ರೀಲಕ್ಷ್ಮಿ. ಪರಮ ಮಹಾ ಬ್ರಹ್ಮ ಎಂದರೆ ನಾರಾಯಣ. ಭಗವಂತ ಪರಾಯಣರಿಗೂ ಕೂಡಾ ಪರಮ. ಇಲ್ಲಿ ಪರಾಯಣರು ಎಂದರೆ ನಮಗೆ ಆಸರೆಯಾಗಿರುವ ತತ್ವಾಭಿಮಾನಿ ದೇವತೆಗಳು. ಭಗವಂತ ಸರ್ವ ದೇವತೆಗಳ ಒಡೆಯ.
ಪವಿತ್ರಾಣಾಂ ಪವಿತ್ರಂ ಯೋ ಮಂಗಲಾನಾಂ ಚ ಮಂಗಲಮ್ |
ದೈವತಂ ದೇವತಾನಾಂ ಚ ಭೂತಾನಾಂ ಯೋವ್ಯಯಃ ಪಿತಾ || 10 ||
ಪವಿತ್ರ ಎಂದರೆ ಪಾವನಗೊಳಿಸುವಂತದ್ದು. ನಾವು ನಿರ್ಮಲವಾಗಬೇಕಾದರೆ, ಆ ಪರಮ ಪವಿತ್ರನಾದ ಭಗವಂತನಲ್ಲಿ ಶರಣಾಗಬೇಕು. ಆತ ಪಾವನಗಳಿಗೆ ಪಾವನನಾದವನು; ಒಳಿತುಗಳಿಗೆ ಒಳಿತಾದವನು; ದೇವತೆಗಳಿಗೂ ಹಿರಿ ದೈವ, ಜೀವರಿಗೆ ಅಳಿವಿರದ ಅಪ್ಪ.
ಯತಃ ಸರ್ವಾಣಿ ಭೂತಾನಿ ಭವಂತ್ಯಾದಿಯುಗಾಗಮೇ |
ಯಸ್ಮಿಂಶ್ಚ ಪ್ರಲಯಂ ಯಾಂತಿ ಪುನರೇವ ಯುಗಕ್ಷಯೇ || 11 ||
ಸೃಷ್ಟಿ ಕಾಲದಲ್ಲಿ ಭಗವಂತನಿಂದ ಈ ಕಾಣುವ ಸೃಷ್ಟಿ ನಿರ್ಮಾಣವಾಗುತ್ತದೆ. ಎಲ್ಲ ಜೀವಗಳು ಹುಟ್ಟಿ ಬರುತ್ತವೆ, ಪ್ರಳಯಕಾಲದಲ್ಲಿ ಕಾಣುವ ರೂಪ ಕಳೆದುಕೊಂಡು ಸೂಕ್ಷ್ಮ ರೂಪದಲ್ಲಿ ಆ ಭಗವಂತನನ್ನು ಹೋಗಿ ಸೇರುತ್ತವೆ. ಪ್ರತಿಯೊಂದು ಕ್ರಿಯೆ ವ್ಯವಸ್ಥಿತವಾಗಿ, ಗಣಿತಬದ್ಧವಾಗಿ ನಡೆಯುತ್ತದೆ. ಇಲ್ಲಿ ಯಾವುದೂ ಆಕಸ್ಮಿಕವಲ್ಲ.
ತಸ್ಯ ಲೋಕಪ್ರಧಾನಸ್ಯ ಜಗನ್ನಾಥಸ್ಯ ಭೂಪತೇ |
ವಿಷ್ಣೋರ್ನಾಮಸಹಸ್ರಂ ಮೇ ಶ್ರುಣು ಪಾಪಭಯಾಪಹಮ್ || 12 ||
ಭಗವಂತ ನಮ್ಮ ಪಾಪ ಭಯವನ್ನು ತೊಡೆದು ಹಾಕುತ್ತಾನೆ. ತಪ್ಪು ಮಾಡಿದಾಗ ತಿದ್ದಿ ಉದ್ಧಾರ ಮಾಡುತ್ತಾನೆ. "ಓ ಭೂಪತಿ , ಎಲ್ಲ ಶಾಸ್ತ್ರಗಳ ಮುಖ್ಯ ವಾಚ್ಯನಾದ ಜಗದೊಡೆಯನಾದ ಇಂತಹ ವಿಷ್ಣುವಿನ, ಸಾವಿರ ನಾಮಗಳನ್ನು ಆಲಿಸು".
ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ |
ಋಷಿಭಿಃ ಪರಿಗೀತಾನಿ ತಾನಿ ವಕ್ಷ್ಯಾಮಿ ಭೂತಯೇ || 13 ||
"ಪ್ರಾಚೀನ ಋಷಿ-ಮುನಿಗಳು, ಮಹಾತ್ಮರು, ನಿರಂತರ ಉಪಾಸನೆ ಮಾಡಿಕೊಂಡು ಬಂದಿರುವ ಆ ಪರಮಾತ್ಮನ ಗುಣವನ್ನು ಸಾರುವ, ಹೆಸರಾಂತ ಸಾವಿರ ನಾಮಗಳನ್ನು ಹೇಳುತ್ತೇನೆ" ಎಂದು ಭೀಷ್ಮಾಚಾರ್ಯರು ವಿಷ್ಣು ಸಹಸ್ರನಾಮವನ್ನು, ಶ್ರೀಕೃಷ್ಣನ ಸಮ್ಮುಖದಲ್ಲಿ ಧರ್ಮರಾಯನಿಗೆ ಉಪದೇಶ ಮಾಡುತ್ತಾರೆ. ಭಗವಂತನ ನಾಮವನ್ನು ಸ್ತ್ರೀ-ಪುರುಷ-ನಪುಂಸಕ ಲಿಂಗಗಳಲ್ಲಿ ಕಾಣಬಹುದು. ಸ್ತ್ರೀ-ಪುರುಷರಲ್ಲಿರುವ ಸರ್ವ ಗುಣಗಳಿಂದ ಪೂರ್ಣನಾದ ಭಗವಂತನಲ್ಲಿ ಯಾವುದೇ ರೀತಿಯ ಸ್ತ್ರೀ-ಪುರುಷ ಗುಣದೋಷಗಳಿಲ್ಲ. ಈ ರೀತಿ ಲಿಂಗ ಸಮನ್ವಯ ಭಗವಂತನಲ್ಲಿ ಮಾತ್ರ ಸಾಧ್ಯ.
ಸಾಮಾನ್ಯವಾಗಿ ಯಾವುದೇ ಪೂಜೆ-ಕರ್ಮವನ್ನು ಮಾಡುವಾಗ ವಿಘ್ನನಿವಾರಕನಾದ ಗಣಪತಿ ಪೂಜೆ ಮಾಡುವುದು ಸಂಪ್ರದಾಯ. ಅದಕ್ಕಾಗಿ ಗಣಪತಿ ಮಂಡಲ ಬರೆದು ಪೂಜಿಸಿ ನಂತರ ಇತರ ಕರ್ಮವನ್ನು ಮಾಡುತ್ತಾರೆ.
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ |
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ ||
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ ||
ಹೀಗೆ ವಿಘ್ನ ನಿವಾರಕ ಗಣಪತಿ ಸ್ತುತಿ ಮೊದಲಿಗೆ. ವಿಷ್ಣು ಸಹಸ್ರನಾಮ ಭಗವಂತನ 'ವಿಶ್ವಮ್' ಎನ್ನುವ ವಿಘ್ನನಿವಾರಕ 'ವಿಶ್ವಂಭರ' ರೂಪದ ನಾಮದಿಂದ ಪ್ರಾರಂಭವಾಗುತ್ತದೆ. ನಮ್ಮ ಜೀವನದಲ್ಲಿರುವ ಮೂರು ಅವಸ್ಥೆಗಳಲ್ಲಿ (ಎಚ್ಚರ-ಕನಸು-ನಿದ್ದೆ), ನಮ್ಮ ಎಚ್ಚರವನ್ನು ನಿಯಂತ್ರಿಸುವ ಭಗವಂತನ ರೂಪ 'ವಿಶ್ವ' ನಾಮಕ ರೂಪ.
ಬನ್ನಿ, ವಿಘ್ನನಾಶಕ ವಿಶ್ವಂಭರನಾಗಿ, ನಮಗೆ ಎಚ್ಚರವನ್ನು ಕೊಟ್ಟು, ವಿಷ್ಣುಸಹಸ್ರನಾಮ ಚಿಂತನೆ ಮಾಡುವಂತೆ ಮಾಡು ಎಂದು ಆ ಭಗವಂತನಲ್ಲಿ ಪ್ರಾರ್ಥಿಸಿ, ಆತನ ನಾಮದಲ್ಲಿ ಅವನ ಗುಣದ ಅನುಸಂಧಾನ ಮಾಡೋಣ.
|| ಓಂ ನಮೋ ಭಗವತೇ ವಾಸುದೇವಾಯ ||
ಓಂ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |
ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ ||1||
1) ವಿಶ್ವಮ್
ವಿಷ್ಣು ಸಹಸ್ರನಾಮದ ಮೊದಲ ನಾಮ ವಿಶ್ವಂ. ಈ ಹಿಂದೆ ಹೇಳಿದಂತೆ ವಿಷ್ಣು
ಸಹಸ್ರನಾಮ ಸರ್ವ ವೇದಗಳ ಸಾರ. ಇಲ್ಲಿ 'ವಿ ' ಎಂದರೆ ಪಕ್ಷಿ ಅನ್ನುವ ಅರ್ಥವನ್ನೂ,
ಶ್ವ ಎಂದರೆ ಚಲಿಸುವವನು ಎನ್ನುವ ಅರ್ಥವನ್ನು ಕೊಡುತ್ತದೆ . ಆದ್ದರಿಂದ ವೇದಗಳ
ಅಭಿಮಾನಿ ದೇವತೆಯಾದ ಗರುಡನನ್ನು ತನ್ನ ವಾಹನವಾಗಿರಿಸಿಕೊಂಡಿರುವ ಭಗವಂತ ವಿಶ್ವ .
ಮೇಲೆ ಹೇಳಿದ ಅರ್ಥವಲ್ಲದೆ ಇನ್ನೂ ಹತ್ತು ಹಲವು ಅರ್ಥಗಳನ್ನು ವಿಶ್ವ ಅನ್ನುವ
ನಾಮದಲ್ಲಿ ನಾವು ನೋಡಬಹುದು. ಚತುರ್ಮುಖ ಬ್ರಹ್ಮನನ್ನು ವಿಶ್ವ ಎಂದು ಕರೆಯುತ್ತಾರೆ.
ಸೃಷ್ಟಿಕರ್ತನಾದ ಬ್ರಹ್ಮನನ್ನು ತನ್ನ ನಾಭಿಯಲ್ಲಿ ಧರಿಸಿರುವ ಭಗವಂತ, ಆತನ ಮೂಲಕ ಈ
ಸೃಷ್ಟಿಗೆ ಕಾರಣಕರ್ತನಾಗಿದ್ದಾನೆ . ಆದ್ದರಿಂದ ಆತ ವಿಶ್ವಂ.
ಆಂಜನೇಯ ರೂಪಿ ಮುಖ್ಯಪ್ರಾಣನನ್ನು ಕೂಡ ವಿಶ್ವ ಎಂದು ಕರೆಯುತ್ತಾರೆ. ನಮ್ಮ ದೇಹಕ್ಕೆ
ಚಲನೆಯನ್ನು ಕೊಡುವಂತಹ ಪ್ರಾಣಶಕ್ತಿಯಾದ ಮುಖ್ಯಪ್ರಾಣನಲ್ಲಿ ತುಂಬಿದ್ದು, ನಮ್ಮ
ದೇಹದಲ್ಲಿ ಬಿಂಬರೂಪದಲ್ಲಿ ಪ್ರವೇಶಿಸಿ (ವಿಶತಿ), ಅಂತರ್ಯಾಮಿಯಾಗಿ ದೇಹದ ಒಳಗೂ
ಹೊರಗೂ ತುಂಬಿರುವ ಪರಿಪೂರ್ಣ ಜ್ಞಾನಾನಂದಮಯನಾದ ಭಗವಂತ ವಿಶ್ವಂ.
2) ವಿಷ್ಣುಃ
ಸಾಮಾನ್ಯವಾಗಿ ವಿಷ್ಣು ಅನ್ನುವ ನಾಮ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು ಎಂದು
ತಿಳಿಯುವವರೇ ಹೆಚ್ಚು. ಆದರೆ ಹಿಂದೂ-ಮುಸ್ಲಿಂ-ಕ್ರೈಸ್ತ ಧರ್ಮದಲ್ಲಿ ದೇವರು
ಎನ್ನುವುದಕ್ಕೆ ಯಾವ ವಿಶ್ಲೇಷಣೆ ಇದೆಯೋ ಅದರ ಸಂಸ್ಕೃತ ಪದ ವಿಷ್ಣು. ವಿಷ್ಣು ಎಂದರೆ
ಸರ್ವಶಬ್ದವಾಚ್ಯನಾದ, ಸರ್ವಗತನಾದ ಭಗವಂತ (omnipotent and omnipresent) ಎಂದರ್ಥ.
ಇದು ಜಾತಿ ಧರ್ಮವನ್ನು ಮೀರಿ ಎಲ್ಲರೂ ಒಪ್ಪುವಂತಹ ಅರ್ಥ.
ಇನ್ನು ಈ ಪದವನ್ನು ಒಡೆದು ನೋಡಿದರೆ ವಿ-ಷ-ಣು ಆಗುತ್ತದೆ. ವಿಷಣು
ಎಂದರೆ-ವಿಶಿಷ್ಟವಾದ ಜ್ಞಾನ (ವಿ) ಕೊಡುವವನು. ಒಳಗೆ ಇದ್ದು, ಸಂಸಾರ ವಿಷವನ್ನು
ಪರಿಹರಿಸಿ, ನಮ್ಮ ಕ್ರಿಯೆಯನ್ನು ನಿಯಂತ್ರಿಸುವ ಪರಿಪೂರ್ಣವಾದ (ಷ) ಪ್ರಾಣಶಕ್ತಿ .
ಎಲ್ಲರನ್ನು ರಕ್ಷಿಸುವ ಬಲ ಇರುವ (ಣ) ಸರ್ವಶಕ್ತ ಭಗವಂತ ವಿಷ್ಣು.
3) ವಷಟ್ಕಾರಃ
ಭಗವಂತನನ್ನು ವಷಟ್ಕಾರ ಎಂದು ಕರೆಯುತ್ತಾರೆ ಎನ್ನುವ ವಿಷಯ ಹೆಚ್ಚಿನವರಿಗೆ
ತಿಳಿದಿಲ್ಲ. ಹಿಂದಿನ ಕಾಲದಲ್ಲಿ ವೈದಿಕ ಸಂಪ್ರದಾಯವಿರುವ ಪ್ರತಿಯೊಂದು ಮನೆಗಳಲ್ಲಿ
ಅಗ್ನಿಹೋತ್ರ ಮಾಡುವುದು ನಿತ್ಯ ಕರ್ಮವಾಗಿತ್ತು. ಅಗ್ನಿಹೋತ್ರದಲ್ಲಿ ಭಗವಂತನಿಗೆ ಐದು
ಮಂತ್ರಗಳಿಂದ (ಯಜ್ಞ ನಾಮಕ , ಯಜ್ಞ ಪುರುಷ , ಯಜ್ಞೇಶ್ವರ , ಯಜ್ಞ ಭಾವನ , ಯಜ್ಞ
ಭೋಕ್ತ ) ಆಹುತಿಯನ್ನು ಕೊಡುತ್ತಿದ್ದರು. ಈ ಮಂತ್ರದಲ್ಲಿ ಬರುವ ಐದನೇ ಹೆಸರು ಭಗವಂತನ
ವಷಟ್ಕಾರ ಅನ್ನುವ ಹೆಸರು.
ಏಕೆ ಅವನು ವಷಟ್ಕಾರ? ತಾನು ಇಚ್ಚಿಸಿದಂತೆ ಜಗತ್ತನ್ನು ಸೃಷ್ಟಿ ಮಾಡಿ ಈ ಕೆಳಗಿನ ಆರು ಮುಖದಲ್ಲಿ ಜಗತ್ತಿನಾದ್ಯಂತ ತುಂಬಿರುವವನು ವಷಟ್ಕಾರ.
೧. ಜ್ಞಾನ- ಒಂದು ವಸ್ತುವನ್ನು ಸೃಷ್ಟಿ ಮಾಡುವ ಸರ್ವಜ್ಞ ಜ್ಞಾನಶಕ್ತಿ ಇರುವವನು.
೨. ಶಕ್ತಿ- ಕರ್ತೃತ್ವ ಶಕ್ತಿ ಉಳ್ಳವನು.
೩. ಬಲ-ರಕ್ಷಣೆ ಮಾಡುವ ತಾಕತ್ತು ( ಧಾರಣ ಶಕ್ತಿ ) ಇರುವವನು
೪. ಐಶ್ವರ್ಯ- ಒಡೆತನ
೫. ವೀರ್ಯ- ಪರಾಕ್ರಮ-ದುಷ್ಟ ಶಕ್ತಿಯನ್ನು ಸಂಹಾರ ಮಾಡುವ ಶಕ್ತಿ ಉಳ್ಳವನು
೬. ತೇಜಸ್ಸು - ಜಗತ್ತನ್ನು ಬೆಳಗಿಸುವ ಬೆಳಕು.
ಈ ಮೇಲಿನ ಆರು ಗುಣಗಳಿಂದ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣನಾದ ಪರಬ್ರಹ್ಮ -ವಷಟ್ಕಾರ.
4) ಭೂತಭವ್ಯಭವತ್ಪ್ರಭುಃ
ಭಗವಂತ ಎಲ್ಲಾ ಕಾಲದಲ್ಲೂ ಈ ಲೋಕವನ್ನು ರಕ್ಷಿಸುತ್ತಿರುತ್ತಾನೆ. ಹಿಂದೆ ಅನಂತವಾಗಿ
ಇದ್ದದ್ದು (ಭೂತಕಾಲದಲ್ಲಿ), ಮುಂದೆ ಬರುವ ಅನಂತ ಭವಿಷ್ಯತ್ ಕಾಲ ಹಾಗೂ ವರ್ತಮಾನ
ಕಾಲದಲ್ಲಿ ಈ ಲೋಕವನ್ನು ರಕ್ಷಿಸುವವನು. ಈ ನಾಮವನ್ನು ನಾವು ಒಡೆದು ನೋಡಿದಾಗ,
ಭೂತ+ಭವಿ+ಭವಂತಿ+ಪ್ರಭು ಎನ್ನುವ ನಾಲ್ಕು ಪದಗಳನ್ನು ನೋಡಬಹುದು. ಭೂತಿಯನ್ನು
ಪಡೆದವರು ಭೂತಗಳು. ಅಂದರೆ ಮುಕ್ತಿಗೆ ಯೋಗ್ಯರಾದ ಸಾತ್ವಿಕರು, ಭವಿಗಳು ಎಂದರೆ
ಸಂಸಾರಿಗಳು ಅಥವಾ ರಾಜಸರು, ಭವಂತಿ ಎಂದರೆ ಜೀವನದಲ್ಲಿ ಎತ್ತರಕ್ಕೆ ಏರದ ತಾಮಸರು.
ಆದ್ದರಿಂದ ಭೂತಭವ್ಯಭವತ್ಪ್ರಭುಃ ಎಂದರೆ ಸಾತ್ವಿಕರಿಗೂ , ರಾಜಸರಿಗೂ ಹಾಗೂ ತಾಮಸರಿಗೂ
ಪ್ರಭು ಎಂದರ್ಥ.
ಈ ರೀತಿ ಹಿಂದೆ ಇದ್ದವನು, ಈಗಲೂ ಇರುವವನು, ಮುಂದೆ ಎಂದೆಂದೂ ಎಲ್ಲರ ಪ್ರಭುವಾಗಿ ಸರ್ವ ಜೀವ ರಕ್ಷಕನಾಗಿರುವ ಭಗವಂತ ಭೂತಭವ್ಯಭವತ್ಪ್ರಭುಃ
5) ಭೂತಕೃತ್
ಸಂಸ್ಕೃತದಲ್ಲಿ ಕೃತ್ ಅನ್ನುವ ಪದಕ್ಕೆ ಎರಡು ಅರ್ಥವಿದೆ.
೧. ಸೃಷ್ಟಿ
೨. ಸಂಹಾರ
ಅದೇ ರೀತಿ ಭೂತಗಳಲ್ಲಿ ಎರಡು ವಿಧ
೧. ಅಚೇತನ ಭೂತ ಅಂದರೆ ಪಂಚಭೂತಗಳು (ಮಣ್ಣು ,ಬೆಂಕಿ, ನೀರು, ಗಾಳಿ ಮತ್ತು ಆಕಾಶ)
೨. ಚೇತನ ಭೂತ ಅಂದರೆ ಪಂಚಭೂತಗಳಿಂದ ಆದ ಜೀವಗಳು.
ಭೂತಕೃತ್ (ಸೃಷ್ಟಿ) ಅಂದರೆ ಪಂಚಭೂತಗಳ ಸೃಷ್ಟಿಕರ್ತ, ಪಂಚಭೂತಾತ್ಮಕವಾದ ಬ್ರಹ್ಮಾಂಡದ
ಸೃಷ್ಟಿಕರ್ತ. ಬ್ರಹ್ಮಾಂಡದಲ್ಲಿ ಪಂಚಭೂತಗಳಿಂದಾದ ಪಿಂಡಾಂಡ ಸೃಷ್ಟಿ ಮಾಡಿದವ ,
ಪಿಂಡಾಂಡದಲ್ಲಿ ಜೀವವನ್ನು ಇರಿಸಿ ದೇಹ ಸೃಷ್ಟಿ ಮಾಡಿದವ, ಮತ್ತು ಸಾಧನೆ ಮೂಲಕ ಜೀವರಿಗೆ
ಮುಕ್ತಿಯನ್ನು ಕರುಣಿಸುವವ.
ಭೂತಕೃತ್ (ಸಂಹಾರ) ಅಂದರೆ ದೇಹ ನಾಶದ ಮೂಲಕ ಜೀವರನ್ನು ನಾಶ ಮಾಡುವವ, ಅಭಿವೃದ್ಧಿ
ಹೊಂದದ ತಾಮಸ ಜೀವರನ್ನು ನಾಶ ಮಾಡುವವ, ಪಂಚಭೂತಾತ್ಮಕವಾದ ಶರೀರ ನಾಶ ಮಾಡುವವ,
ಪಂಚಭೂತಾತ್ಮಕವಾದ ಬ್ರಹ್ಮಾಂಡ ನಾಶ ಮಾಡಿದವ , ಪ್ರಳಯ ಕಾಲದಲ್ಲಿ ಪಂಚಭೂತಗಳನ್ನೂ ನಾಶ
ಮಾಡುವವ.
6) ಭೂತಭೃತ್
ಸೃಷ್ಟಿ-ಸ್ಥಿತಿ-ಲಯದಲ್ಲಿ ಪಂಚಭೂತಗಳ ಧಾರಣೆ ಮಾಡುವವ,ಪಂಚಭೂತಾತ್ಮಕವಾದ ಬ್ರಹ್ಮಾಂಡ
ಧಾರಣೆ ಮಾಡುವವ, ಪಂಚಭೂತಗಳಿಂದಾದ ಪಿಂಡಾಂಡ ಧಾರಣೆ ಮಾಡುವವ, ಪಿಂಡಾಂಡದಲ್ಲಿರುವ
ಜೀವವನ್ನು ಧಾರಣೆ ಮಾಡುವವ ಮತ್ತು ಮುಕ್ತಿಯನ್ನು ಪಡೆದ ಜೀವವನ್ನು ಧಾರಣೆ ಮಾಡುವವ.
7) ಭಾವಃ
ಸೃಷ್ಟಿ-ಸ್ಥಿತಿ-ಲಯ ಇದು ಭಗವಂತನ ಗುಣ. ಆತ ಸಚ್ಚಿದಾನ೦ದ. ಹುಟ್ಟು-ಸಾವು
ನೈಸರ್ಗಿಕ ಕ್ರಿಯೆ. ಸಾವು ಹುಟ್ಟಿನ ಮೂಲ, ಹುಟ್ಟು ಸಾವಿನ ಮೂಲ. ಭಗವಂತ ಎಂದೆಂದಿಗೂ
ಶಾಶ್ವತವಾಗಿ ಇರುವವನು. ಭಾವ ಅಂದರೆ ಸಚ್ಚಿದಾನ೦ದ ಸ್ವರೂಪ.
8) ಭೂತಾತ್ಮಾ
ಪಂಚಭೂತಗಳಲ್ಲಿ ವ್ಯಾಪಿಸಿದವ, ಬ್ರಹ್ಮಾಂಡದಲ್ಲಿ ವ್ಯಾಪಿಸಿದವ, ಪಿಂಡಾಂಡದಲ್ಲಿ
ತುಂಬಿರುವವ,ಎಲ್ಲಾ ಜೀವದಲ್ಲಿ ಅಂತರ್ಯಾಮಿ ಆಗಿ ತುಂಬಿರುವವ. ಭೂತಿಯನ್ನು( ಉನ್ನತಿ)
ಹೊಂದಿದ ಜೀವಿಗಳಿಗೆ ಮುಕ್ತಿಯನ್ನು ಕರುಣಿಸುವ ಭಗವಂತ ಭೂತಾತ್ಮ.
9) ಭೂತಭಾವನಃ
ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣವಾದವ, ಜೀವಿಗಳಿಗೆ ಸುಖ-ದುಃಖ ಕೊಡುವವ-ಭೂತಭಾವನಃ
ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಾಂ ಪರಮಾ ಗತಿಃ |
ಅವ್ಯಯಃ ಪುರುಷಃ ಸಾಕ್ಷೀ ಕ್ಷೇತ್ರಜ್ಞೋsಕ್ಷರ ಏವ ಚ || 2 ||
10) ಪೂತಾತ್ಮಾ
ದ್ವೇಷಗಳ, ತ್ರಿಗುಣಗಳ ಸ್ಪರ್ಶವಿಲ್ಲದ ಪವಿತ್ರ ಸ್ವರೂಪನಾದ ಭಗವಂತ ಪೂತಾತ್ಮಾ.
11) ಪರಮಾತ್ಮಾ
ಆತ್ಮ ಅಂದರೆ - ದೇಹ? ಅಲ್ಲ ! ಭಾವನೆಗಳ ಗೂಡಾದ ಮನಸ್ಸು? ಅದೂ ಅಲ್ಲ !! ಏಕೆಂದರೆ
ಮನಸ್ಸಿನಿಂದ ಯೋಚಿಸುವುದರಿಂದ ಮನಸ್ಸನ್ನು ನಿಯಂತ್ರಿಸುವವ ಯಾರು? ಅದೇ ಜೀವ. ಆದರೆ ಈ
ಜೀವವನ್ನು ನಿಯಂತ್ರಿಸುವ ಶಕ್ತಿ ಯಾವುದು? ಆತನೇ-ಪರಮಾತ್ಮ. ಎಲ್ಲಾ ಆತ್ಮಗಳಿಗೂ
ಪರಮವಾದ ಆತ್ಮ, ಬ್ರಹ್ಮಾದಿ ಸಕಲ ಚೇತನಗಳಿಗೂ ಹಿರಿಯನಾದ ಸ್ವಾಮಿ.
12) ಮುಕ್ತಾನಾಂ ಪರಮಾ ಗತಿಃ
ಚತುರ್ಮುಖನ ಆಯಸ್ಸು ನೂರು ಕಲ್ಪ. ಒಂದು ಕಲ್ಪ (kalpa) ಅಂದರೆ 31,104 ಸಾವಿರ ಕೋಟಿ
ವರ್ಷ. ಮಾನವನ ಸಾಧನೆ ಒಂದು ಕಲ್ಪ. ಮುಕ್ತಿ ಸ್ಥಿತಿಯಲ್ಲಿ ಮಾನವನ ಜೊತೆಗೆ ಚತುರ್ಮುಖ
ಬ್ರಹ್ಮರು (ಮುಕ್ತಿಯಲ್ಲಿರುವ ಚತುರ್ಮುಖರು) ಮಾರ್ಗದರ್ಶಕರಾಗಿ ಇರುತ್ತಾರೆ. ಮುಕ್ತಾನಾಂ
ಪರಮಾ ಗತಿಃ ಅಂದರೆ ಮುಕ್ತಿ ಪಡೆದವರಿಗೆ ಮುಕ್ತಿಯಲ್ಲೂ ಚತುರ್ಮುಖ ಬ್ರಹ್ಮರೊಂದಿಗೆ -
ಶ್ರೇಷ್ಠ ಮಾರ್ಗದರ್ಶನ ಮಾಡುವವನು ಹಾಗೂ ಚತುರ್ಮುಖ ಬ್ರಹ್ಮರಿಗೂ -ಶ್ರೇಷ್ಠ
ಮಾರ್ಗದರ್ಶನ ಮಾಡುವವನು, ಮತ್ತು ಮುಕ್ತಿ ಪಡೆದ ಎಲ್ಲಾ ಆತ್ಮರಿಗೆ ತಾಯಿಯಾಗಿರುವ ಶ್ರೀ
ತತ್ವ ಲಕ್ಷ್ಮಿಗೂ ಆಶ್ರಯದಾತನಾಗಿರುವವನು.
13) ಅವ್ಯಯಃ
ಎಲ್ಲಾ ವಸ್ತುವಿನ ಒಳಗಿದ್ದೂ (ಆಯ) ಏಕರೂಪನಾಗಿ ಇರುವವನು. ಆನೆ ಮತ್ತು ಇರುವೆ ಒಳಗೆ
ಇರುವ ಭಗವಂತ ಒಬ್ಬನೇ, ಬೇರೆ ಬೇರೆ ಅಲ್ಲ. ಇಲ್ಲಿ ವ್ಯಯ ಅಂದರೆ ಕಮ್ಮಿ ಆಗುವುದು,
ಖರ್ಚು, ನಾಶ ಇತ್ಯಾದಿ. ಯಾವ ಕಾಲದಲ್ಲೂ ಕಡಿಮೆ ಆಗದೆ, ನಾಶವಾಗದೆ, ಅನಾದಿ-ಅನಂತ
ಕಾಲದಲ್ಲಿ, ಏಕರೂಪವಾಗಿ ಇರುವ ಶಾಶ್ವತ ತತ್ವ ಅವ್ಯಯಃ
14) ಪುರುಷಃ
ಇದು ತುಂಬಾ ಪ್ರಮುಖವಾದ ನಾಮ. ವೇದದ ಸಾರಭೂತವಾದ ಪುರುಷ-ಸೂಕ್ತದಲ್ಲಿ ಬರುವಂತಹ
ಸೂಕ್ತಗಳ ಪ್ರತಿಫಲದ ರೂಪವೇ ಭಗವಂತನ ಪುರುಷ ನಾಮಕವಾದ ರೂಪ. ಪುರು ಅಂದರೆ ಎಲ್ಲಕ್ಕಿಂತ
ದೊಡ್ಡದು ಅಥವಾ ಅನಂತ. ಬ್ರಹ್ಮಾಂಡ ರಚನೆ ಆಗುವ ಮುಂಚೆ, ಬ್ರಹ್ಮಾಂಡ ಸೃಷ್ಟಿ ಆದ ಮೇಲೂ,
ಬ್ರಹ್ಮಾಂಡ ಮತ್ತು ಪಿಂಡಾಂಡದಲ್ಲಿ ಅನಂತವಾಗಿ ತುಂಬಿರುವವನು ಪುರುಷಃ .
ಈ ಶಬ್ದವನ್ನು ಪುರು+ಷಃ ಎಂದು ಒಡೆದು ಅರ್ಥೈಸಬಹುದು. ಇಲ್ಲಿ ಪುರು ಅಂದರೆ ಪೂರ್ಣತೆ
ಹೊಂದಿದ ದೇಹ (Perfect body), ಷಃ ಅಂದರೆ ನೆಲೆಸಿರುವವನು. ಆದ್ದರಿಂದ ಪುರುಷ ಅಂದರೆ
ಪುರದಲ್ಲಿ ಇದ್ದು, ಅದರ ಒಡೆತನವನ್ನು ಹೊಂದಿರುವ ಹಾಗೂ ಇತರ ಎಲ್ಲಾ ಪುರದ ಒಡೆಯ. ಪುರದ
ಒಳಗೆ, ಪುರದ ಹೊರಗೆ ತುಂಬಿ ಅನಂತವಾಗಿರುವ ಪರಮ ಪುರುಷ. ಜ್ಞಾನ, ಶಕ್ತಿ, ಬಲ, ಐಶ್ವರ್ಯ,
ವೀರ್ಯ ಮತ್ತು ತೇಜಸ್ಸು ಈ ಷಡ್ಗುಣಗಳಿಂದ ಪೂರ್ಣನಾಗಿ ಜಗತ್ತನ್ನು ನಿಯಂತ್ರಿಸುವವ
ಪುರುಷಃ. ಇನ್ನು ಪು+ರು+ಷ ಅನ್ನುವ ಏಕಾಕ್ಷರಗಳಿಗೆ ವಿಶಿಷ್ಟವಾದ ಅರ್ಥವಿದೆ. ‘ಪು’
ಅಂದರೆ ಎಲ್ಲವನ್ನು ಪಾವನ ಗೊಳಿಸುವವನು. ‘ರು’ ಅಂದರೆ ತಾನು ಒಳಗಿದ್ದು, ಶತ್ತ್ರು,
ಅಜ್ಞಾನ ಮತ್ತು ದುಃಖ ತಡೆದು, ಜೀವನನ್ನು ಉದ್ಧಾರ ಮಾಡುವವನು. ‘ಷಃ’ ಎಂದರೆ ಎಲ್ಲೆಡೆ
ಮಲಗಿದವ! ಮಲಗಿದವ ಅಂದರೆ ಅನಾಯಾಸವಾಗಿ ಎಲ್ಲಾ ಕಾರ್ಯ ಮಾಡುವವ. ಈ ರೀತಿ ಭಗವಂತನ ಪುರುಷಃ
ನಾಮ ಅನೇಕ ಅರ್ಥಗಳನ್ನು ಕೊಡುತ್ತದೆ.
15) ಸಾಕ್ಷೀ
ಸಾಕ್ಷೀ ಎಂದರೆ ಎಲ್ಲವನ್ನು ಕಣ್ಣಾರೆ ಕಾಣಬಲ್ಲವ ಎಂದರ್ಥ. ಭಗವಂತನ ಮುಂದೆ ನಾವು
ಮುಚ್ಚಿಕೊಳ್ಳುವುದು ಏನೂ ಇಲ್ಲ. ಭಗವಂತನ ಮುಂದೆ ನಾವೆಲ್ಲರೂ ಬೆತ್ತಲು, ಆತನ ಮುಂದೆ
ಮುಚ್ಚಿಟ್ಟುಕೊಂಡು ಮಾಡುವ ಯಾವ ಕೆಲಸವೂ ಇಲ್ಲ. ಭಗವಂತನ ಮುಂದೆ ನಾವು ಬೆತ್ತಲಾಗದೆ
ಭಗವಂತ ನಮಗೆ ಎಂದೂ ಬಿಚ್ಚಿಕೊಳ್ಳುವುದಿಲ್ಲ. ಆದುದರಿಂದ ಭಗವಂತ ಎಲ್ಲವನ್ನು ಕಾಣಬಲ್ಲ
ಸಾಕ್ಷಿ. ಇಲ್ಲಿ ಅಕ್ಷಿಗಳು ಎಂದರೆ ಇಂದ್ರಿಯ ಉಳ್ಳವರು, ಅಂದರೆ ನಾವು-ನೀವು ; ಅಕ್ಷಿಗಳ
ಸಖನಾಗಿ ನಮ್ಮನ್ನು ಉದ್ಧಾರ ಮಾಡುವವನು ಸಾಕ್ಷಿ.
16) ಕ್ಷೇತ್ರಜ್ಞಃ
ಕ್ಷೇತ್ರಜ್ಞಃ ಎಂದರೆ ಕ್ಷೇತ್ರವನ್ನು ತಿಳಿದವನು ಎಂದರ್ಥ. ಕ್ಷೇತ್ರ ಅಂದರೆ ನಾವು
ವಾಸ ಮಾಡುವ ನೆಲೆ . ನಾವು ವಾಸ ಮಾಡುವುದು ಚತುರ್ಮುಖನ ಕ್ಷೇತ್ರವಾದ ಈ ಬ್ರಹ್ಮಾಂಡದಲ್ಲಿ
ಮತ್ತು ಜೀವದ ನೆಲೆಯಾದ ಶರೀರ ನಮ್ಮ ಕ್ಷೇತ್ರ. ಅದ್ದರಿಂದ ಕ್ಷೇತ್ರಜ್ಞಃ ಎಂದರೆ ಈ
ಬ್ರಹ್ಮಾಂಡವನ್ನು, ಈ ಶರೀರವನ್ನು ಮತ್ತು ಈ ಪ್ರಪಂಚದ ರಹಸ್ಯವನ್ನು ಸಂಪೂರ್ಣ
ತಿಳಿದವನು.
17) ಅಕ್ಷರಃ
ಅಕ್ಷರ ಅಂದರೆ ನಾಶವಿಲ್ಲದ್ದು. ಲಿಪಿ ಅಕ್ಷರ ಅಲ್ಲ. ಲಿಪಿ ಕೇವಲ ಅಕ್ಷರದ ಪ್ರತೀಕ.
ಲಿಪಿ ನಾಶವಾಗಬಹುದು ಆದರೆ ಅಕ್ಷರಗಳಿಗೆ ನಾಶವಿಲ್ಲ. ನಮ್ಮಿಂದ ಹೊರಹೊಮ್ಮುವ ಎಲ್ಲಾ ನುಡಿ
ಈ ಆಕಾಶದಲ್ಲಿ ಶಾಶ್ವತವಾಗಿ ಧ್ವನಿಮುದ್ರಿತವಾಗಿರುತ್ತದೆ.
ಈ ಮೇಲಿನ ಅರ್ಥವಲ್ಲದೆ ಇನ್ನೂ ಅನೇಕ ಅರ್ಥಗಳನ್ನು ಅಕ್ಷರ ನಾಮದಲ್ಲಿ ಕಾಣಬಹುದು.
ಯಾವುದು ಎಲ್ಲಾ ಕಡೆ ವ್ಯಾಪಿಸಿದೆಯೋ ಅದು ಅಕ್ಷರ (Omnipresence). 'ಕ್ಷರ' ಎಂದರೆ
ನಾಶ, ನಾಶವಿಲ್ಲದ್ದು ಅಕ್ಷರ. 'ಕ್ಷರಣ' ಅಂದರೆ ಸುರಿಸುವವನು, ಯುಗ ಯುಗಾಂತರದಲ್ಲಿ
ನಮ್ಮ ಮೇಲೆ ಕರುಣೆಯ ಮಳೆ ಸುರಿಸುವವನು ಅಕ್ಷರ.
ಇನ್ನು ಅಕ್ಷ+ರ ಅಕ್ಷರ. ಇಲ್ಲಿ 'ಅಕ್ಷ' ಎಂದರೆ ಇಂದ್ರಿಯ, 'ರ' ಎಂದರೆ ರಮಣ ಅಥವಾ
ರಮಿಸುವವನು. ಆದ್ದರಿಂದ ಅಕ್ಷರ ಎಂದರೆ ಆನಂದಮಯನಾಗಿ ಇಂದ್ರಿಯದಲ್ಲಿ ನೆಲೆಸಿರುವವನು
ಎಂದರ್ಥ. ಇಲ್ಲಿ 'ಅ' ಎಂದರೆ ಅಲ್ಲ ಅಥವಾ ಇಲ್ಲ . ಭಗವಂತ ಅಲ್ಲ, ಭಗವಂತ ಇಲ್ಲ! ಅಂದರೆ
ಭಗವಂತ ನಮಗೆ ಕಾಣುವ ಯಾವುದೇ ವಸ್ತು ಅಲ್ಲ ಅವನಲ್ಲಿ ದೋಷವಿಲ್ಲ.
ಯೋಗೋ ಯೋಗವಿದಾಂ ನೇತಾ ಪ್ರಧಾನಪುರುಷೇಶ್ವರಃ |
ನಾರಸಿಂಹವಪುಃ ಶ್ರೀಮಾನ್ ಕೇಶವಃ ಪುರುಷೋತ್ತಮಃ || 3 ||
18) ಯೋಗಃ
ಜೀವದ ಜೊತೆಗೆ ನಿರಂತರವಾಗಿ ಇರುವ ಆಪ್ತ ಬಂಧು. ನೆನೆದಾಗ ಮನದಲ್ಲಿ ಬಂದು ನೆಲೆಸುವವನು. ಭಕ್ತರು ಬಯಸಿದ್ದನ್ನು ಈಡೇರಿಸುವವನು.
19) ಯೋಗವಿದಾಂನೇತಾ
ಸರ್ವ ವೇದ ಮಂತ್ರಗಳನ್ನು ಬಲ್ಲವರ ನಾಯಕ. ಅಧ್ಯಾತ್ಮದ ಬಗೆಯನ್ನು, ಜೀವನ ಯೋಗವನ್ನು ಬಲ್ಲ ಜ್ಞಾನಿಗಳ ನೇತಾರ.
20) ಪ್ರಧಾನಪುರುಷೇಶ್ವರಃ
ಪ್ರಧಾನ ಅಂದರೆ "ಶ್ರೀ" ಅಂದರೆ ಲಕ್ಷ್ಮಿ, ಲಕ್ಷ್ಮಿಗೂ ಈಶ್ವರ, ಬ್ರಹ್ಮ ವಾಯುರಿಗೂ ಈಶ್ವರ.
21) ನಾರಸಿಂಹವಪುಃ
ನರ ಮತ್ತು ಸಿಂಹ ರೂಪದಲ್ಲಿ ಕಂಬದಿಂದ ಉದ್ಭವಿಸಿ ಹಿರಣ್ಯಕಶಿಪುವಿನ ಸಂಹಾರ ಮಾಡಿದ
ಭಗವಂತನ ರೂಪ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ, ಆದರೆ ನಾರಸಿಂಹವಪುಃ
ಎನ್ನುವುದಕ್ಕೆ ವಿಶಿಷ್ಟವಾದ ಇತರ ಅರ್ಥವಿದೆ. ಈ ನಾಮವನ್ನು ಒಡೆದು ವಿಶ್ಲೇಷಿಸಿದರೆ
ವಿಶಿಷ್ಟ ಅರ್ಥಗಳನ್ನು ಕಾಣುತ್ತೇವೆ. ಇಲ್ಲಿ 'ನಾರ' ಎಂದರೆ ನರರಲ್ಲಿ ತುಂಬಿರುವ
ಅಜ್ಞಾನ, 'ಸಿಂಹ' ಎಂದರೆ ಸಿಮ್ಮತಿ ಅಥವಾ ನಿವಾರಿಸುವವನು, 'ವ' ಎಂದರೆ ಜ್ಞಾನ, ಪುಃ
ಎಂದರೆ ಕರುಣಿಸುವವನು.ಆದ್ದರಿಂದ ನಾರಸಿಂಹವಪುಃ ಎಂದರೆ ನರರಲ್ಲಿ ತುಂಬಿರುವ
ಅಜ್ಞಾನವನ್ನು ಅಳಿಸಿ, ಜ್ಞಾನದ ಬೀಜ ಬಿತ್ತುವವನು ಎಂದರ್ಥ.
ಇಷ್ಟೇ ಅಲ್ಲದೆ ಇನ್ನೂ ಮುಂದಕ್ಕೆ ವಿಶ್ಲೇಷಿಸಿದಾಗ, ನಾರ(ನಾ+ಅರ)
ಎಂದರೆ ದೋಷವಿಲ್ಲದವನು; ಸಿಂಹ ಎಂದರೆ ಭಯಂಕರವಾಗಿ ಸರ್ವ ದೋಷವನ್ನು ನಾಶಮಾಡುವವನು.
ಆದ್ದರಿಂದ ನಾರಸಿಂಹವಪುಃ ಎಂದರೆ ಸರ್ವ ದೋಷವನ್ನು ಭಯಂಕರವಾಗಿ ನಾಶಮಾಡಿಯೂ ಕೂಡ,
ಯಾವುದೇ ದೋಷವಿಲ್ಲದಿರುವವನು. ಪ್ರಳಯ ಕಾಲದಲ್ಲಿ ನರವಂಶವನ್ನು ನಾಶಮಾಡಿ,
ಸೃಷ್ಟಿಕಾಲದಲ್ಲಿ ಪುನಃ ಬೀಜ ಬಿತ್ತಿ ಸೃಷ್ಟಿಮಾಡುವವನು. ಹೀಗೆ ಮನುಕುಲದ
ಸೃಷ್ಟಿ-ಸಂಹಾರಕ್ಕೆ ಕಾರಣನಾದ ಭಗವಂತ ನಾರಸಿಂಹವಪುಃ
22) ಶ್ರೀಮಾನ್
ಇಡೀ ವಿಶ್ವದ ಒಡೆತನ ಇರುವ ಭಗವಂತ ಶ್ರೀಮಂತ, ಅದ್ದರಿಂದ ಆತ ಶ್ರೀಮಾನ್.ಇಲ್ಲಿ
ಶ್ರೀಹಿ ಎಂದರೆ ವೇದ ವಾಙ್ಮಯ, ಶ್ರೀಮಾನ್ ಎಂದರೆ ಸಮಸ್ತ ವೇದದಿಂದ ಪ್ರತಿಪಾದ್ಯನಾದವನು
ಎಂದರ್ಥ. 'ಶ್ರೀ' ಎಂದರೆ ಚಿತ್-ಪ್ರಕೃತಿ "ಲಕ್ಷ್ಮಿ" ಲಕ್ಷ್ಮೀ ಪತಿಯಾದ ಭಗವಂತ
ಶ್ರೀಮಾನ್. ಐತರೇಯ ಉಪನಿಷತ್ತು ಹೇಳುವಂತೆ "ಕಣ್ಣು ಒಂದು ಶ್ರೀ, ಮನಸ್ಸು ಒಂದು ಶ್ರೀ,
ಕಿವಿ ಒಂದು ಶ್ರೀ, ಮಾತು ಒಂದು ಶ್ರೀ ಮತ್ತು ಉಸಿರು ಒಂದು ಶ್ರೀ " ಏಕೆಂದರೆ ಈ
ಪಂಚೇಂದ್ರಿಯಗಳು ಶಿರಸ್ಸನ್ನು ಆಶ್ರಯಿಸಿಕೊಂಡಿರುವ ಇಂದ್ರಿಯಗಳು. ಮನುಷ್ಯ ಅರಿವಿನ
ಸಂಪತ್ತನ್ನು ಗಳಿಸುವುದೇ ಕಣ್ಣು- ಕಿವಿಯಿಂದ ; ಕಣ್ಣು-ಕಿವಿ ದೇಹದ
ಸೂರ್ಯ-ಚಂದ್ರರಿದ್ದಂತೆ. ಅಗ್ನಿ ಸ್ವರೂಪವಾಗಿರುವ ಬಾಯಿ (ಮಾತು)- ಮನುಷ್ಯನಿಗೆ ಭಗವಂತ
ಕೊಟ್ಟಿರುವ ಅಪೂರ್ವವಾದ ಸಂಪತ್ತು. ಮಾತು ಹೊರಡಬೇಕಿದ್ದರೆ, ನೋಡಿದ್ದನ್ನ
ಅನುಭವಿಸಲಿಕ್ಕೆ , ಕೇಳಿದ್ದನ್ನ ಗ್ರಹಿಸಲು ಅತ್ಯಂತ ಮುಖ್ಯವಾಗಿ ಮನಸ್ಸು ಬೇಕು. ಈ
ಎಲ್ಲಾ ಇಂದ್ರಿಯಗಳನ್ನೂ ಚಾಲನೆಯಲ್ಲಿಡಲು ಪ್ರಾಣಶಕ್ತಿ ಬೇಕು. ಅದ್ದರಿಂದ ಈ
ಪಂಚೇಂದ್ರಿಯಗಳು ಮನುಷ್ಯನಲ್ಲಿರುವ ಅತ್ಯಂತ ಶ್ರೀಮಂತ ಅಂಗ. ಈ ಪಂಚೇಂದ್ರಿಯಗಳನ್ನು ನಮಗೆ
ದಯಪಾಲಿಸಿದ ಆ ಕರುಣಾಮಯೀ ಭಗವಂತ ಶ್ರೀಮಾನ್.
23) ಕೇಶವಃ
ಕೇಶವ ಎಂದರೆ ಅತ್ಯಂತ ಸುಂದರವಾದ ಕೂದಲು ಉಳ್ಳವನು ಎಂದರ್ಥ.ಇದು ಭಗವಂತನ
ಕೃಷ್ಣಾವತಾರದಲ್ಲಿ ಬಂದ ಹೆಸರು. ಕೃಷ್ಣಾವತಾರದಲ್ಲಿ ಕೃಷ್ಣ ತನ್ನ ಸುಂದರವಾದ ಗುಂಗುರು
ಕೂದಲಿನ ಸೌಂದರ್ಯದಿಂದ ಎಲ್ಲರನ್ನು ಆಕರ್ಷಿಸುತ್ತಿದ್ದ. ಗಂಡಸರು , ಹೆಂಗಸರು , ಗೋವುಗಳು
ಎಲ್ಲರೂ ಕೃಷ್ಣನಿಂದ ಆಕರ್ಷಣೆಗೆ ಒಳಗಾಗುತ್ತಿದ್ದರು. ಈ ರೀತಿ ಸುಂದರನಾದ ಭಗವಂತ
ಕೇಶವ.
ಇನ್ನು ಕೃಷ್ಣಾವತಾರದಲ್ಲಿ ಕಂಸನ ಧೂತನಾದ ಕೇಶಿ ಎಂಬ ರಾಕ್ಷಸನನ್ನು ಕೊಂದ
ಭಗವಂತನನ್ನು ಕೇಶವ ಎನ್ನುತ್ತಾರೆ. ಕೃಷ್ಣನನ್ನು ಕೊಲ್ಲಲು ಕಂಸ ಕೇಶಿಯನ್ನು,
ಕುದುರೆ ರೂಪದಲ್ಲಿ ಬೃಂದಾವನಕ್ಕೆ ಕಳುಹಿಸಿಕೊಟ್ಟಿದ್ದ. ಆತನನ್ನು ಕೃಷ್ಣ ಸಂಹಾರ
ಮಾಡಿದ್ದ.
ಈ ನಾಮವನ್ನು ಕಾ+ಈಶ+ವ ಎಂದು ಒಡೆದು ಅರ್ಥೈಸಬಹುದು. ಇಲ್ಲಿ 'ಕಾ' ಎಂದರೆ
ಸೃಷ್ಟಿಗೆ ಕಾರಣವಾಗಿರುವ ಚತುರ್ಮುಖ ಬ್ರಹ್ಮ; 'ಈಶ' ಎಂದರೆ ಸಂಹಾರಕ್ಕೆ ಕಾರಣವಾಗಿರುವ
ಶಂಕರ; ಕೇಶವ ಎಂದರೆ ಸೃಷ್ಟಿ-ಸಂಹಾರಕ್ಕೆ ಕಾರಣವಾಗಿರುವ ಪರಶಕ್ತಿ.
ಇನ್ನು ಕೇಶ ಎಂದರೆ ಸೂರ್ಯಮಂಡಲದಿಂದ ಭೂಮಿಗೆ ಹರಿದುಬರುವ ಕಿರಣ; ಸೌರ ಮಂಡಲದಲ್ಲಿ
ನಿಂತು, ಸೌರ ಶಕ್ತಿಯಿಂದ ಈ ಜಗತ್ತನ್ನು ಬೆಳಗಿಸುವ ಗಾಯತ್ರಿ ಸ್ವರೂಪ ಭಗವಂತ-ಕೇಶವ.
24) ಪುರುಷೋತ್ತಮಃ
ಪುರುಷೋತ್ತಮ ಎನ್ನುವ ನಾಮದ ಸಂಪೂರ್ಣ ಅರ್ಥವನ್ನು ಭಗವದ್ಗೀತೆಯಲ್ಲಿ ಕಾಣಬಹುದು.
ದ್ವಾವಿಮೌ ಪುರುಷೌ ಲೋಕೇ ಕ್ಷರಸ್ಚಾಕ್ಷರ ಏವ ಚ |
ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋऽಕ್ಷರ ಉಚ್ಚ್ಯತೇ || (ಅ-೧೫, ಶ್ಲೋ-೧೬)
ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ |
ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ || (ಅ-೧೫, ಶ್ಲೋ-೧೭)
ಯಸ್ಮಾತ್ ಕ್ಷರಮತೀತೋऽಹಮಕ್ಷರಾದಪಿ ಚೋತ್ತಮಃ |
ಅತೋऽಸ್ಮಿ ಲೊಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ || (ಅ-೧೫, ಶ್ಲೋ-೧೮)
ಅಂದರೆ ಲೋಕದಲ್ಲಿ ಎರಡು ಬಗೆಯ ಪುರುಷರಿರುತ್ತಾರೆ. ಕ್ಷರಪುರುಷ ಮತ್ತು ಅಕ್ಷರಪುರುಷ.
ಬ್ರಹ್ಮಾದಿ ಸಮಸ್ತ ಜೀವರೂ ಕ್ಷರಪುರುಷರು. ಈ ಚರಾಚರದ ಕೂಟವನ್ನು ಕೂಡಿಸಿಟ್ಟ ಚಿತ್
ಪ್ರಕೃತಿಯೇ ಅಕ್ಷರ ಪುರುಷಳೆನಿಸಿದ್ದಾಳೆ-(ಅ-೧೫, ಶ್ಲೋ-೧೭); ಈ ಎರಡಕ್ಕೂ ಮಿಗಿಲಾದವನು
ಪುರುಷೋತ್ತಮ. ಅವನನ್ನೇ ಪರಮಾತ್ಮ ಎನ್ನುತ್ತಾರೆ. ಅಳಿವಿರದ ಆ ಪರಮೇಶ್ವರನೇ ಮೂರು
ಲೋಕದೊಳಗಿದ್ದು ಸಲಹುತ್ತಾನೆ (ಅ-೧೫, ಶ್ಲೋ-೧೭).ನಾನು ಕ್ಷರವನ್ನು ಮೀರಿ ನಿಂತವನು.
ಅಕ್ಷರಕ್ಕಿಂತಲೂ ಹಿರಿಯನು, ಅದಕ್ಕೆಂದೇ ಲೋಕದಲ್ಲೂ, ವೇದದಲ್ಲೂ 'ಪುರುಷೋತ್ತಮ' ಎಂದು
ಹೆಸರಾಗಿದ್ದೇನೆ (ಅ-೧೫, ಶ್ಲೋ-೧೮).
ಪುರುಷೋತ್ತಮ ಎನ್ನುವ ನಾಮವನ್ನು ಮೂರು-ನಾಲ್ಕು ಬಗೆಯಿಂದ ಪ್ರಯೋಗಿಸುತ್ತಾರೆ.
ಉತ್ತಮಪುರುಷ ; ಮಹಾಪುರುಷ ; ಪರಮಪುರುಷ ಮತ್ತು ಪುರುಷೋತ್ತಮ. ಎಲ್ಲವೂ ಸುಮಾರಾಗಿ
ಒಂದೇ ಅರ್ಥವನ್ನು ಕೊಡುತ್ತವೆ. ಉತ್ತಮಪುರುಷ ಎಂದರೆ ಪುರುಷರಲ್ಲಿ ಉತ್ತಮ. ಕ್ಷರಪುರುಷ
ಎಂದರೆ ಕ್ಷರವಾದ ಪುರದಲ್ಲಿ ಇರುವ ಎಲ್ಲಾ ಜೀವರು. ನಾಶವಾಗುವ ಹದಿನೈದು ಬೇಲಿಯಿಂದ
ಬದ್ಧನಾದ ಶರೀರದಲ್ಲಿರುವ ಜೀವ ಕ್ಷರಪುರುಷ. ಈಗ ಜೀವರನ್ನು ಬಂದಿಸಿರುವ ಹದಿನೈದು
ಬೇಲಿಗಳನ್ನು ನೋಡೋಣ.
೧) ಶ್ರದ್ಧೆಯ ಬೇಲಿ: ಇದರಲ್ಲಿ ಎರಡು ವಿಧ. ಜೀವ ಸ್ವರೂಪಭೂತವಾದ ಬೇಲಿ
(ಕಿತ್ತೆಸೆಯಲು ಆಗದ ಬೇಲಿ) ಹಾಗೂ ಜೀವ ಸ್ವಭಾವದ ಬೇಲಿ(ಕಿತ್ತೆಸೆಯಬೇಕಾದ ಬೇಲಿ). ಮನೆತನ
, ಕುಟುಂಬ , ಬೆಳೆದ ವಾತಾವರಣದ ಪ್ರಭಾವದಿಂದ ಬಂದ ಶ್ರದ್ಧೆ, ಪರಿಸರದ ಪ್ರಭಾವ, ಮನೆತನದ
ಅನುವಂಷಿಕ(ಜೀನ್ಸ್)ಪ್ರಭಾವದಿಂದ ಬಂದ ಶ್ರದ್ಧೆ, ಇತ್ಯಾದಿಯನ್ನು ಮೀರಿನಿಂತು ನೋಡಿದಾಗ
ಮಾತ್ರ ನಿಜವಾದ ಶ್ರದ್ಧೆ ಎಂದರೆ ಏನು ಎಂದು ಅರ್ಥವಾಗುತ್ತದೆ.
೨-೬)ಪಂಚಭೂತಗಳ ಬೇಲಿ: ಮಣ್ಣು-ನೀರು(ಅನ್ನಮಯ ಕೋಶ), ಬೆಂಕಿ-ಗಾಳಿ-ಆಕಾಶ (ಪ್ರಾಣಮಯ ಕೋಶ).
೭)ಇಂದ್ರಿಯಗಳ ಬೇಲಿ:ಕೆಟ್ಟದ್ದನ್ನು ಮಾಡುವ ಐದು ಜ್ಞಾನೇಂದ್ರಿಯಗಳು(ಕಿವಿ, ಮೂಗು,
ಕಣ್ಣು, ನಾಲಗೆ ಮತ್ತು ಚರ್ಮ) ಮತ್ತು ಐದು ಕರ್ಮೇಂದ್ರಿಯಗಳು(ಕೈ, ಕಾಲು, ಮುಖ, ಉಪಸ್ಥ
ಮತ್ತು ಗುದ).
೮)ಅಂತಃಕರಣದ ಬೇಲಿ: ಕೆಟ್ಟದ್ದನ್ನು ಯೋಚಿಸುವ ಮನಸ್ಸು
೯)ಅನ್ನದ ಬೇಲಿ: ಆಹಾರ.
೧೦)ವೀರ್ಯದ ಬೇಲಿ: ಶಕ್ತಿ .
೧೧-೧೩) ತಪಃ-ಮಂತ್ರಃ-ಕರ್ಮಃ.ಹಾಗಾಗಬೇಕು ಹೀಗಾಗಬೇಕು ಅನ್ನುವ ಆಲೋಚನೆ (ತಿರುಕನ
ಕನಸಿನಂತೆ)-ತಪಃ. ತನ್ನ ಕನಸನ್ನು ನನಸು ಮಾಡಲು ಆಡುವ ಮಾತುಗಾರಿಕೆ ಮಂತ್ರಃ.ಮತ್ತು
ಅದನ್ನು ಸಾಧಿಸಲು ಮಾಡುವ ಕರ್ಮ.
೧೪)ಲೋಕಗಳು: ಸ್ತಿರ-ಚರ ಸೊತ್ತುಗಳು (ನಾನು ಮಾಡಿದ್ದು, ನನ್ನದು ಅನ್ನುವ ಸೊತ್ತುಗಳು).
೧೫)ನಾಮದ ಬೇಲಿ: Name and fame, ಕೀರ್ತಿ. ಈ ಮೇಲಿನ ನಾಶವಾಗತಕ್ಕಂತಹ ಹದಿನೈದು
ಬೇಲಿ ಒಳಗೆ ಸಿಕ್ಕಿ ಹಾಕಿಕೊಂಡಿರುವುದೇ ಹದಿನಾರನೇ ಜೀವ. ಜೀವಿಗೆ ಈ ಮೇಲಿನ ಬೇಲಿ
ಎನ್ನುವ ಅಂಗಿ ಹಾಕಿ ಈ ಪ್ರಪಂಚಕ್ಕೆ ಶಿಕ್ಷಣಕ್ಕಾಗಿ ಕಳಿಸಿರುವ ಚಿತ್ತ್ ಪ್ರಕೃತಿ
ಲಕ್ಷ್ಮಿ ಹದಿನೇಳನೇ ಅಕ್ಷರಪುರುಷಳು. ಈ ಮೇಲಿನ ಕ್ಷರ-ಅಕ್ಷರಗಳಿಗಿಂತ ಅತೀತನಾದ
ಹದಿನೆಂಟನೆಯ ಭಗವಂತ ಪುರುಷೋತ್ತಮ. ಮೇಲಿನ ಬೇಲಿಯಿಂದ ಜೀವಿಯನ್ನು ಬಿಡಿಸಿ ಮುಕ್ತಿಯನ್ನು
ಕರುಣಿಸುವವನು ಪುರುಷೋತ್ತಮ!
ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ |
ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ || 4 ||
25) ಸರ್ವಃ
ವಿಶ್ವಂ ಮತ್ತು ಸರ್ವ ಎರಡು ಸಮಾನಾರ್ಥಕವಾದ ನಾಮಗಳು. ಭಗವಂತ ಸರ್ವ ಅಂದರೆ
ಸರ್ವಸಮರ್ಥ, ಸರ್ವಗತ ಮತ್ತು ಸರ್ವಗುಣ ಪೂರ್ಣ. ಸರ್ವ ಅಂದರೆ ಎಲ್ಲವನ್ನು ತಿಳಿದವನು,
ಎಲ್ಲೆಡೆ ತುಂಬಿರುವವನು, ಎಲ್ಲಾ ಕಾಲದಲ್ಲೂ ಇರುವವನು, ಎಲ್ಲಕ್ಕೂ ಕಾರಣನಾದವನು ಮತ್ತು
ಪರಿಪೂರ್ಣನಾದವನು.
26) ಶರ್ವಃ
ಶರ್ವ ಎಂದರೆ ಶಿವನೊಳಗೆ ನೆಲೆಸಿ ಸಮಸ್ತ ಜಗತ್ತನ್ನು ಸಂಹಾರ ಮಾಡುವವನು. ದುರ್ಜನರಿಗೆ, ಪಾಪಿಗಳಿಗೆ ದುಃಖವನ್ನು ಕೊಡುವವನು ಶರ್ವ.
27) ಶಿವಃ
‘ಶ’ ಅಂದರೆ ಸುಖ; ಶಿವ ಎಂದರೆ ಜ್ಞಾನಾನಂದ ಹಾಗೂ ಪರಮ ಮಂಗಳ ಸ್ವರೂಪ.
28) ಸ್ಥಾಣುಃ
ಸ್ಥಾಣು ಎಂದರೆ ‘ಚಲಿಸದ’ ಎನ್ನುವ ಅರ್ಥವನ್ನು ಕೊಡುತ್ತದೆ. ಭಗವಂತ ಸರ್ವಗತ
ಅದ್ದರಿಂದ ಆತ ಸ್ಥಾಣು. ಆತ ಚಲಿಸದೆ ಮಲಗಿದ್ದರೂ, ಎಲ್ಲಾ ಕಡೆ ತಲುಪಬಲ್ಲ. ಏಕೆಂದರೆ
ಬಿಂಬ ರೂಪವಾಗಿ ಪ್ರತಿಯೊಂದರಲ್ಲೂ ಭಗವಂತ ಇದ್ದಾನೆ. ಆತ ಆಕಾಶಕ್ಕಿಂತ ದೊಡ್ಡವ ,
ಪರಮಾಣುಗಿಂತ ಚಿಕ್ಕವ! It moves and it moves not! ಚಲಿಸಿದಂತೆ ಕಾಣುವ ಚಲಿಸದೇ
ಇರುವ ಭಗವಂತ ಸ್ಥಾಣು.
29) ಭೂತಾದಿಃ
ಭೂತಾದಿ ಎಂದರೆ ಎಲ್ಲಾ ಭೂತಗಳ ಆದಿ. ಎಲ್ಲಾ ಜೀವಗಳ, ಎಲ್ಲಾ ಜಡಗಳ, ಎಲ್ಲಾ
ಚರಾಚರಾತ್ಮಕವಾದ ಹಾಗೂ ಚೇತನಾಚೇತನಾತ್ಮಕವಾದ ಪ್ರಪಂಚಕ್ಕೆ ಆದಿ ಕಾರಣನಾದವ ಭೂತಾದಿ.
ಅಷ್ಟೇ ಅಲ್ಲ, ಈ ಎಲ್ಲಾ ಭೂತಗಳನ್ನ ತನ್ನಲ್ಲಿರಿಸಿಕೊಂಡು ಪಾಲನೆ ಮಾಡುವವನು, ಕೊನೆಗೆ
ಸಂಹಾರ ಮಾಡುವವನೂ ಅವನೇ.
ಆದ್ದರಿಂದ ಸಮಸ್ತ ಚರಾಚರಾತ್ಮಕವಾದ, ಚೇತನಾಚೇತನಾತ್ಮಕವಾದ, ಪ್ರಪಂಚದ
ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾದವನು ಭೂತಾದಿ. ಇಷ್ಟೇ ಅಲ್ಲದೆ ಭೂತರು ಎಂದರೆ
ಮುಕ್ತರು ಕೂಡ ಹೌದು. ಮುಕ್ತರಿಗೆ ಮುಕ್ತಿಯನ್ನು ಕರುಣಿಸಿವನು ಭೂತಾದಿ.
30) ನಿಧಿರವ್ಯಯಃ
ನಿಧಿಃ+ಅವ್ಯಯಃ =ನಿಧಿರವ್ಯಯ. ನಿಧಿ ಅಂದರೆ ಕೊಪ್ಪರಿಗೆ (ಹೂತಿಟ್ಟ ಸಂಪತ್ತು).
ಭಗವಂತನ ಅರಿವೇ ಅತೀ ದೊಡ್ಡ ಕರಗದ ಅಥವಾ ಅಳಿಯದ (ಅವ್ಯಯ) ಸಂಪತ್ತು. ನಿಗೂಢವಾದ ಹೃದಯ
ಗುಹೆಯೊಳಗೆ ಅಡಗಿರುವ ಹೃತ್ಕಮಲ ಮಧ್ಯ ನಿವಾಸಿಯಾದ ಭಗವಂತ ಅಪೂರ್ವ ಹಾಗೂ ಅಮೂಲ್ಯವಾದ
ನಿಧಿ. ಅವನು ಅವಿ ಅಂದರೆ ಅವತಿ ಅಥವಾ ರಕ್ಷಕ. ಹೃದಯ ಗುಹೆಯಲ್ಲಿ ಅಡಗಿದ್ದು, ನಮ್ಮ
ನಿರಂತರ ರಕ್ಷಣೆ ಮಾಡುವವನು. ಅಯಃ ಎಂದರೆ ಎಲ್ಲಾ ಕಡೆ ಇರುವವನು. ನಮ್ಮ
ಕ್ಷೇಮಕ್ಕೋಸ್ಕರ, ನಮ್ಮ ರಕ್ಷಣೆಗೋಸ್ಕರ, ನಮ್ಮಲ್ಲಿ ಅಡಗಿ ಕುಳಿತಿರುವ, ಹಾಗೂ ಎಲ್ಲಾ
ಕಡೆ ಇರುವ ಅಪೂರ್ವ ನಿಧಿ- ನಿಧಿರವ್ಯಯಃ.
31) ಸಂಭವಃ
ಸಂಭವಃ ಅಂದರೆ ಭಕ್ತರು ಕರೆದಾಗ ತಾನೇ ತಾನಾಗಿ ಸಂಭವಿಸುವವನು (ಭೂಮಿಗೆ ಇಳಿದು
ಬರುವವನು). ಜಗತ್ತಿನ ಸೃಷ್ಟಿಗೆ ಕಾರಣನಾದವನು ಹಾಗೂ ಜಗತ್ತಿನ ಪಾಲನೆಗೋಸ್ಕರ ತಾನೇ
ತಾನಾಗಿ ಅವತರಿಸುವವನು.
ಸಮೀಚೀನಃ ಭವಃ - ಶ್ರೇಷ್ಠವಾದ ಉನ್ನತಿ ಅಥವಾ ಮುಕ್ತಿ ಯಾರಿಂದ ಸಿಗುತ್ತದೋ ಅವನು ಸಂಭವಃ
32) ಭಾವನಃ
ಒಬ್ಬೊಬ್ಬರೊಳಗಿದ್ದು ಅವರ ಭಾವನೆಗಳನ್ನು ನಿಯಂತ್ರಿಸುವ ಶಕ್ತಿಯಾದ ಭಗವಂತ ಭಾವನಃ .
ಭಾವಂ+ನಯತಿ=ಭಾವನಃ ಅಂದರೆ ನಮಗೆ ಆನಂದವನ್ನು ಕೊಡುವವನು; ಭಾವಂ+ಅಪನಯತಿ=ಭಾವನಃ
ಅಂದರೆ ನಾವು ಕೆಟ್ಟ ದಾರಿಯಲ್ಲಿ ನಡೆದಾಗ ನಮ್ಮನ್ನು ಸರಿ ದಾರಿಗೆ ತರಲು ನಮಗೆ
ದುಃಖವನ್ನು ಕೊಡುವವನು. ಹೀಗೆ ನಮ್ಮ ಸುಖ-ದುಃಖಕ್ಕೆ ಕಾರಣನಾದವನು ಭಾವನಃ .
33) ಭರ್ತಾ
ಭರ್ತಾ ಎಂದರೆ ಎಲ್ಲವನ್ನೂ ಹೊತ್ತವನು, ಇಡೀ ವಿಶ್ವವನ್ನು ಧರಿಸಿದವನು. ವಿಶ್ವದ ಮೂಲಾಧಾರನಾದ ಭಗವಂತ ಭರ್ತಾ.
34) ಪ್ರಭವಃ
ಎಲ್ಲಕ್ಕಿಂತ ಪ್ರಕೃಷ್ಟನಾಗಿರುವ, ಎಲ್ಲಕ್ಕಿಂತ ವಿಶಿಷ್ಟನಾಗಿರುವ, ಜ್ಞಾನ ಸ್ವರೂಪನಾದ ಭಗವಂತ.
ಯಾರು ಎಲ್ಲರಿಗಿಂತ ದೊಡ್ಡವನೋ, ಯಾರಿಂದ ಎಲ್ಲರೂ ಎತ್ತರಕ್ಕೆ ಏರಲು ಸಾಧ್ಯವೋ, ಅವನು ಪ್ರಭವಃ.
35) ಪ್ರಭುಃ
ಭಗವಂತ ಸರ್ವಸಮರ್ಥ ಆದ್ದರಿಂದ ಆತ ಎಲ್ಲರ ಪ್ರಭು.
36) ಈಶ್ವರಃ
ಈಶರು ಎಂದರೆ ನಮ್ಮ ದೇಹ ಹಾಗೂ ಪ್ರಪಂಚಕ್ಕೆ ಸಂಬಂಧಪಟ್ಟ ಅಭಿಮಾನಿ ದೇವತೆಗಳು.
ಉದಾಹರಣೆಗೆ ಶನಿ- ಪೃಥ್ವಿಯ ಅಭಿಮಾನಿ ದೇವತೆ; ಬುಧ- ನೀರಿನ ಅಭಿಮಾನಿ
ದೇವತೆ; ಗಣಪತಿ- ಆಕಾಶದ ಅಭಿಮಾನಿ ದೇವತೆ; ಸೂರ್ಯ- ಕಣ್ಣಿನ ಅಭಿಮಾನಿ ದೇವತೆ; ಚಂದ್ರ-
ಕಿವಿಯ ಅಭಿಮಾನಿ ದೇವತೆ; ವರುಣ- ನಾಲಿಗೆಯ ಅಭಿಮಾನಿ ದೇವತೆ; ಅಗ್ನಿ- ಮಾತಿನ ಅಭಿಮಾನಿ
ದೇವತೆ; ಇಂದ್ರ- ಕೈಯ ಅಭಿಮಾನಿ ದೇವತೆ; ಯಜ್ಞ- ಕಾಲಿನ ಅಭಿಮಾನಿ ದೇವತೆ; ಅನಿರುದ್ಧ ,
ಬೃಹಸ್ಪತಿ , ವರುಣ , ಮಿತ್ರ , ಇಂದ್ರ , ಕಾಮ , ಗರುಡ , ಶೇಷ, ರುದ್ರ , ವಾಯು -
ಇವರೆಲ್ಲರೂ ಮನಸ್ಸಿನ ಅಭಿಮಾನಿ ದೇವತೆಗಳು . ಶ್ರದ್ಧೆಯ ದೇವತೆ- ಸರಸ್ವತಿ. ಹೀಗೆ ಬೇರೆ
ಬೇರೆ ದೇವತೆಗಳ ಸಮುದಾಯವಿದೆ. ಈ ದೇವತೆಗಳ ಸಮೂಹ ನಮ್ಮ ದೇಹದಲ್ಲಿರುವ ಹದಿನೈದು
ಬೇಲಿಗಳನ್ನು ನಿಯಂತ್ರಿಸುವ ಈಶರು. ಈ ಎಲ್ಲಾ ದೇವತೆಗಳು ಅಖಂಡವಾದ ಭಗವಂತನ ನೀತಿಗೆ
ಬದ್ಧರಾಗಿ ಕೆಲಸ ಮಾಡುತ್ತಿರುತ್ತಾರೆ. ಈ ಎಲ್ಲಾ ಈಶರಿಗೂ ವರನಾದವ, ಶ್ರೇಷ್ಠನಾದವ , ಈ
ದೇಹದಲ್ಲಿರುವ ಸರ್ವ-ನಿಯಾಮಕನಾದ ಭಗವಂತ ಈಶ್ವರ-ಪ್ರಭುರೀಶ್ವರ.
ಸ್ವಯಂಭೂಃ ಶಂಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ |
ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ || 5 ||
37) ಸ್ವಯಂಭೂಃ
ಸ್ವಯಂಭೂಃ ಅಂದರೆ ತಾನೇ ತಾನಾಗಿ ಪೂರ್ಣವಾಗಿರುವವನು, ತನ್ನಿಂದ ತಾನೆ ಆವಿರ್ಭೂತನಾಗುವವನು.
ನಮ್ಮ ಪೂರ್ಣತೆ ಇನ್ನೊಬ್ಬರು ಕೊಟ್ಟರೆ ಮಾತ್ರ, ಆದರೆ ಭಗವಂತ ಸ್ವಯಂಪೂರ್ಣ. ಭಗವಂತ
ಅವತರಿಸಲು ಯಾರು ಕಾರಣ? ಅವನು ಹುಟ್ಟಿಬರುವುದಕ್ಕೆ ಯಾರೂ ಕಾರಣರಲ್ಲ ,
ಆತನು ಸ್ವಯಂಭೂಃ , ಅಂದರೆ ತಾನೇ ತಾನಾಗಿ ಹುಟ್ಟಿ ಬರುವವನು. ಭಕ್ತರ ಬಯಕೆ
ಈಡೇರಿಸಲು ಸ್ವಯಂಇಚ್ಛೆಯಿಂದ ಅವತರಿಸಿ ಬರುತ್ತಾನೆ.
ಭಗವಂತ ಜ್ಞಾನದಿಂದ-ಜ್ಞಾನದಂತೆ, ದೀಪದಿಂದ-ದೀಪದಂತೆ. ಒಂದು ದೀಪದಿಂದ ಇನ್ನೊಂದು
ದೀಪ ಹಚ್ಚಿದರೆ ಮೂಲ ದೀಪದ ಪ್ರಕಾಶ ಕಡಿಮೆ ಆಗುವುದಿಲ್ಲ .ಭಗವಂತ ಒಂದು ರೂಪದಿಂದ
ಇನ್ನೊಂದು ರೂಪಕ್ಕೆ ಅಭಿವ್ಯಕ್ತ ಆಗುತ್ತಾ ಹೋಗುತ್ತಾನೆ . ಆದರೆ ಮೂಲವೂ
ಪೂರ್ಣ , ಮೂಲದಿಂದ ಬಂದ ಅವತಾರವೂ ಪೂರ್ಣ.
ಈ ರೀತಿ ಅವತಾರಕ್ಕೆ ಮೊದಲೂ ಪೂರ್ಣತೆಯಲ್ಲಿದ್ದು, ಅವತಾರದಲ್ಲೂ ಪೂರ್ಣವಾಗಿ, ಅವತಾರದ ನಂತರ ಮತ್ತೆ ಹೋಗಿ ಪೂರ್ಣತೆಯಲ್ಲೇ ಉಳಿಯುವ ಭಗವಂತ ಸ್ವಯಂಭೂಃ .
38) ಶಂಭುಃ
ಶಂ-ಭವತಿ' ಎಂದರೆ ಆನಂದ ರೂಪ,'ಶಂ-ಭವತಿ ಅನೇನ' ಎಂದರೆ ಆನಂದ ಕೊಡುವವನು
ಎಂದರ್ಥ.ಇಲ್ಲಿ 'ಶಂ' ಎಂದರೆ ಆನಂದ. ಉದಾಹರಣೆಗೆ "ಹರಿಃ ಓಮ್, ಶಂ ನೋ ಮಿತ್ರಃ, ಶಂ
ವರುಣಃ, ಶಂ ನೋ ಭವತ್ವರ್ಯಮಾ, ಶಂ ನೋ ಇಂದ್ರೋ ಬೃಹಸ್ಪತಿಃ, ಶಂ ನೋ ವಿಷ್ಣುರುರುಕ್ರಮಃ"
ಇಲ್ಲಿ ಶಂ ಎನ್ನುವ ಪದವನ್ನು ಆನಂದಮಯ ಎನ್ನುವ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಎಲ್ಲಾ
ಶಾಸ್ತ್ರಗಳೂ ಭಗವಂತನನ್ನು ಆನಂದಮಯನೆಂದು ಹೇಳುತ್ತವೆ.ಯಾರು ಸ್ವಯಂ ಆನಂದಮಯನೋ , ಯಾರು
ಎಲ್ಲರಿಗೂ ಆನಂದವನ್ನು ಕೊಡಬಲ್ಲನೂ ಅವನು ಶಂಭು.
39) ಆದಿತ್ಯಃ
ಆದಿತ್ಯ ಅಂದರೆ ಅದಿತಿಯ ಮಗ ಎಂಬುದು ಒಂದು ಅರ್ಥ. ಅದಿತಿ ಕಶ್ಯಪ ಮಹರ್ಷಿಯ ಹೆಂಡತಿ
ಹಾಗೂ ದೇವತೆಗಳ ತಾಯಿ. ಅದಿತಿಗೆ ಹನ್ನೆರಡು ಮಂದಿ ಮಕ್ಕಳು. ಅವರನ್ನು
ದ್ವಾದಶಾದಿತ್ಯರು ಎಂದು ಕರೆಯುತ್ತಾರೆ. ವಿವಸ್ವಾನ್ , ಆರ್ಯಮಾನ್, ಪೂಷನ್,
ತ್ವಷ್ಟೃ, ಸವಿತೃ, ಭಗ, ದಾತ, ವಿಧಾತ, ವರುಣ, ಮಿತ್ರ , ಶಕ್ರ, ಉರುಕ್ರಮ -ಇವರೇ ಆ
ಹನ್ನೆರಡು ಮಂದಿ ಆದಿತ್ಯರು. ಈ ಹನ್ನೆರಡು ದೇವತೆಗಳೇ ವರ್ಷದ ಹನ್ನೆರಡು ಮಾಸದ
ದೇವತೆಗಳು. ಇವರಲ್ಲಿ ಒಬ್ಬ ಸೂರ್ಯ ,ಒಬ್ಬ ವರುಣ , ಮತ್ತೊಬ್ಬ ಮಿತ್ರ ,ಮತ್ತೊಬ್ಬ
ಇಂದ್ರ , ಹಾಗೇ ಕೊನೇ ಮಗನೇ ವಾಮನ ರೂಪಿ ವಿಷ್ಣು . ಅವನು ಎಲ್ಲರಿಗಿಂತ ಕೊನೆಗೆ
ಹುಟ್ಟಿದರೂ, ಆತ ಆದಿಯಲ್ಲಿ ಇದ್ದವನು ಆದ್ದರಿಂದ ಆತ ಆದಿತ್ಯಃ. ಅವನು ಆದಿ+ತಿ+ಯ ಅಂದರೆ
ಆದಿಯಲ್ಲಿ ಜ್ಞಾನಾನಂದ ಸ್ವರೂಪನಾಗಿದ್ದವ, ಎಲ್ಲಕ್ಕೂ ಕಾರಣಕರ್ತ. ಇಷ್ಟೇ ಅಲ್ಲದೆ
ಸೂರ್ಯ ಮಂಡಲದಲ್ಲಿ (ಆದಿತ್ಯನಲ್ಲಿ) ಸನ್ನಿಹಿತನಾಗಿರುವ ಭಗವಂತನನ್ನು ಆದಿತ್ಯಃ
ಎನ್ನುತ್ತಾರೆ.
40) ಪುಷ್ಕರಾಕ್ಷಃ
ಪುಷ್ಕರ ಎಂದರೆ ಕಮಲ, ಅಕ್ಷ ಎಂದರೆ ಕಣ್ಣು . ಪುಷ್ಕರಾಕ್ಷ ಎಂದರೆ ನೀರನ್ನು ಹೀರುವ
ಬಳ್ಳಿಯಲ್ಲಿ ಈಗಷ್ಟೇ ಅರಳಿದ ಕಮಲದಂತೆ ಅರಳುಗಣ್ಣು ಉಳ್ಳವನು. 'ಅರಳುಗಣ್ಣು' ಎಂದರೆ
ಆನಂದಮಯ ವ್ಯಕ್ತಿತ್ವ, ಭಗವಂತ ಅನಂದಮಯಪೂರ್ಣ. ಕಣ್ಣು ಅರಳುವುದು
ಆನಂದದ ಜೊತೆಗೆ ಕಾರುಣ್ಯದ ಸಂಕೇತ ಕೂಡ ಹೌದು. ಪುಷ್ಟಿಕರ ನೋಟ ಉಳ್ಳವನು ಹಾಗೂ
ನಮ್ಮನ್ನು ಸದಾ ರಕ್ಷಿಸುವ ಕಾರುಣ್ಯಮೂರ್ತಿ ಭಗವಂತ ಪುಷ್ಕರಾಕ್ಷಃ.
ವೇದಗಳಲ್ಲಿ ಹೇಳುವಂತೆ ಯಾವುದರಲ್ಲಿ ಇಡೀ ಪ್ರಪಂಚ ಹುದುಗಿದೆಯೋ ಅದು “ಹುಟ್ಟದವನ
ಹೊಕ್ಕುಳಲ್ಲಿ ಹುಟ್ಟಿತು". ಹೊಕ್ಕುಳಲ್ಲಿ ಹುಟ್ಟಿದ್ದು ತಾವರೆರೂಪದ ಬ್ರಹ್ಮಾಂಡ
(ಬ್ರಹ್ಮನ ಮೊಟ್ಟೆ). 14 ಎಸಳುಗಳುಳ್ಳ ತಾವರೆ ಅಂದರೆ ಹದಿನಾಲ್ಕು ಲೋಕಗಳುಳ್ಳ ಈ
ಬ್ರಹ್ಮಾಂಡ. ಆದ್ದರಿಂದ ಭಗವಂತ ಪುಷ್ಕರದಲ್ಲಿ ತುಂಬಿರುವ ಅಕ್ಷ -ಪುಷ್ಕರಾಕ್ಷ.
41) ಮಹಾಸ್ವನಃ
ಮಹಾ ಎಂದರೆ ಮಹತ್ತಾದ , ಸ್ವನ ಎಂದರೆ ನಾದ. ಎಲ್ಲಕ್ಕಿಂತ ಮಹತ್ತಾದ ನಾದವಾದ
ವೇದವನ್ನು ಸೃಷ್ಟಿ ಮಾಡಿದವನು ಮಹಾಸ್ವನ. ಮಹಾ+ಅಸು+ಅನ=ಮಹಾಸ್ವನ.ಇಲ್ಲಿ ಅಸು ಎಂದರೆ
'ಇಂದ್ರಿಯ', ಮಹಾಅಸು ಎಂದರೆ 'ಅತ್ಯಂತ ಮುಖ್ಯ ಇಂದ್ರಿಯ. ಅನ ಎಂದರೆ 'ಚಲನೆ'.
ದೇಹದಲ್ಲಿ ಇರುವ ಎಲ್ಲಾ ಇಂದ್ರಿಯಗಳಲ್ಲಿ ಉಸಿರು(ಪ್ರಾಣ) ಅತ್ಯಂತ ಮುಖ್ಯ ಇಂದ್ರಿಯ.
ಅದ್ದರಿಂದ ಅಸುಗಳಲ್ಲಿ ಮಹಾ ಅಸು ಉಸಿರು(ಮುಖ್ಯಪ್ರಾಣ). ಈ ಮುಖ್ಯಪ್ರಾಣನಿಗೂ ಕೂಡ
ಚಲನೆ ಕೊಟ್ಟ ಭಗವಂತ ಮಹಾಸ್ವನಃ.
42) ಅನಾದಿನಿಧನಃ
ಭಗವಂತನಿಗೆ ಆದಿ-ಅಂತ, ಹುಟ್ಟು-ಸಾವು ಎನ್ನುವುದಿಲ್ಲ. ಪ್ರಾಣ(ಅನ)ನಲ್ಲಿ ಇದ್ದು, ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾದ ಭಗವಂತ ಅನಾದಿನಿಧನಃ
43) ಧಾತಾ
ಧಾತಾ ಅನ್ನುವ ಭಗವಂತನ ನಾಮ ಅನೇಕ ಅರ್ಥವನ್ನು ಕೊಡುತ್ತದೆ. ಇಡೀ ಜಗತ್ತನ್ನು ಧಾರಣೆ
ಮಾಡುವ ಮತ್ತು ಪೋಷಣೆ ಮಾಡುವ ಶಕ್ತಿ ಉಳ್ಳವನು,ಎಲ್ಲರಿಗೂ ಏನು ಬೇಕೋ
ಅದನ್ನು ಕೊಟ್ಟವನು, ಎಲ್ಲಾ ನಾಮವನ್ನು ಧರಿಸಿದವನು ಇತ್ಯಾದಿ. ಇಂತಹ ಭಗವಂತ ಧಾತಾ.
44) ವಿಧಾತಾ
ಸಂಸಾರ ಅವಸ್ಥೆಯಲ್ಲಿ ಮಾತ್ರ ಅಲ್ಲ, ವಿಶಿಷ್ಟ ಅವಸ್ಥೆಯಲ್ಲಿಯೂ ಭಗವಂತ ಧಾತಾ ಅದ್ದರಿಂದ ಆತ ವಿಧಾತಾ.
45) ಧಾತುರುತ್ತಮಃ
ಧಾತುಃ ಎಂದರೆ ಚತುರ್ಮುಖ ಬ್ರಹ್ಮನಿಗೂ ಉತ್ತಮನಾಗಿರುವವನು ಎಂದರ್ಥ. ಆತ ತ್ರಿಧಾತು
ಅಂದರೆ ಮೂರನ್ನು ಧರಿಸಿರುವವನು. ಮೂರು ವೇದಗಳನ್ನು, ಮೂರು ಕಾಲ ಮತ್ತು ಮೂರು ಲೋಕವನ್ನು
ಧರಿಸಿರುವ, ಎಲ್ಲರಿಗಿಂತ ಶ್ರೇಷ್ಠನಾಗಿರುವ ಸರ್ವಾಧಾರನಾದ ಭಗವಂತ ಧಾತುರುತ್ತಮಃ.
ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋsಮರಪ್ರಭುಃ |
ವಿಶ್ವಕರ್ಮಾ ಮನುಸ್ವ್ತಷ್ಟಾ ಸ್ಥವಿಷ್ಠಸ್ಸ್ಥವಿರೋ ಧ್ರುವಃ || 6 ||
46) ಅಪ್ರಮೇಯಃ
ಅಪ್ರಮೇಯ ಎಂದರೆ ಕೈಗೆಟುಕದ, ನಮ್ಮ ಬುದ್ಧಿಯಿಂದ ಅಳೆಯಲು ಅಸಾಧ್ಯವಾದ,
ಆದರೂ ತಿಳಿಯಲು ಸಾಧ್ಯವಾದವ ಎಂದರ್ಥ! ಉದಾಹರಣೆಗೆ - ಸಮುದ್ರದ ನೀರು ಸಂಪೂರ್ಣ ನಮ್ಮ
ಕೈಗೆಟಕದು. ಆದರೆ ನಮ್ಮಿಂದಾದಷ್ಟು ನಾವು ತಂದು ಮನೆಯಲ್ಲಿ ಶೇಖರಿಸಿಡಬಹುದು ಮತ್ತು
ತಿಳಿಯಬಹುದು. ಒಂದು ಚಮಚ ಸಮುದ್ರದ ನೀರಿನ ರುಚಿ ಉಳಿದ ನೀರಿನ ರುಚಿಗಿಂತ ಭಿನ್ನ ಅಲ್ಲ.
ಭಗವಂತ ಕೂಡ ಸಮುದ್ರದ ನೀರಿನಂತೆ ಅದ್ದರಿಂದ ಆತ ಅಪ್ರಮೇಯ.
47) ಹೃಷೀಕೇಶಃ
ಭಗವಂತನನ್ನು ಹುಡುಕುತ್ತಾ ಹೋದರೆ, ಆತ ಕ್ಷಿತಿಜದಂತೆ ದೂರ ದೂರ ಹೋಗುತ್ತಾನೆ.
ಅದ್ದರಿಂದ ಅವನನ್ನು ಎಲ್ಲೆಲ್ಲೋ ಹುಡುಕುವ ಬದಲು ನಿಂತಲ್ಲೇ ನಿಂತು ನಿನ್ನೊಳಗೆ
ಹುಡುಕು. ನಿನ್ನ ಹೃತ್ಕಮಲದಲ್ಲೇ ಅವನಿದ್ದಾನೆ!
ಹೃಷೀಕಗಳಿಗೆ ಈಶ ಹೃಷೀಕೇಶ. ಇಲ್ಲಿ ಹೃಷೀಕ ಎಂದರೆ ಇಂದ್ರಿಯಗಳು. ಆತ ಇಂದ್ರಿಯಗಳ
ಸ್ವಾಮಿ. ಆತನನ್ನು ಇಂದ್ರಿಯದಿಂದ ನೋಡದೆ, ಇಂದ್ರಿಯದಲ್ಲಿ ನೋಡಬೇಕು. ಉಪನಿಷತ್ತಿನಲ್ಲಿ
ಹೇಳುವಂತೆ- ನಮಗೆ ಪ್ರತಿಯೊಂದು ಇಂದ್ರಿಯಗಳನ್ನು ದಯಪಾಲಿಸಿ , ಅದರಲ್ಲಿ ನಿಂತು
ನೆಡೆಸುವವನು ಹೃಷೀಕಗಳ ಈಶನಾದ ಹೃಷೀಕೇಶ.
ಕೇಶ ಅನ್ನುವ ಶಬ್ದಕ್ಕೆ ಸೂರ್ಯಕಿರಣ ಎಂಬ ಅರ್ಥವನ್ನು "ಕೇಶವ" ಎಂಬಲ್ಲಿ ವಿಶ್ಲೇಷಿಸಿದ್ದೇವೆ.
ಸೂರ್ಯನ ಕಿರಣದಲ್ಲಿ ಏಳು ಬಣ್ಣವಿದೆ, ನಮ್ಮ ದೇಹದಲ್ಲಿ ಏಳು ಶಕ್ತಿ ಚಕ್ರಗಳಿವೆ
(ಸಹಸ್ರಾರ, ಆಜ್ಞ, ವಿಶುದ್ಧ, ಅನಾಹತ, ಮಣಿಪುರ, ಸ್ವಾಧಿಸ್ಟಾನ ಮತ್ತು ಮೂಲಾಧಾರ -
Pineal Gland, Pituitary Gland,Thyroid
and parathyroid, Adrenal Glands,Pancreas & Gonads). ಅದೇ ರೀತಿ
ಅಗ್ನಿಯಲ್ಲಿ ಕೂಡ ಏಳು ಬಣ್ಣವಿದೆ. ನಮ್ಮ ದೇಹದಲ್ಲಿರುವ ಏಳು ಶಕ್ತಿ ಕೇಂದ್ರಗಳಿಂದ
ಹೊರಹೊಮ್ಮುವ ಏಳು ಭಾವನೆಗಳನ್ನು ಅಗ್ನಿಯ ಏಳು ಬಣ್ಣಗಳ ಮೂಲಕ ಸೂರ್ಯಕಿರಣದ ಜೊತೆಗೆ
ಸಮ್ಮಿಲನ ಮಾಡುವ ಕ್ರಿಯೆಯನ್ನು "ಹೋಮ" ಎನ್ನುತ್ತಾರೆ (ಅದ್ದರಿಂದ ಭಗವಂತನಿಗೆ
ಸಲ್ಲಬೇಕಾದ ಯಾವುದೇ ಹೋಮವನ್ನು ರಾತ್ರಿ ಮಾಡುವುದಿಲ್ಲ). ಈ ಎಲ್ಲಾ ಏಳು ವರ್ಣದಲ್ಲಿ
ತುಂಬಿ ಬದುಕಿಗೆ ಹರ್ಷವನ್ನು ಕೊಡತಕ್ಕಂತಹ ಭಗವಂತ ಹೃಷೀಕೇಶಃ.
48) ಪದ್ಮನಾಭಃ
ತಾವರೆರೂಪದ ಹದಿನಾಲ್ಕು ಲೋಕಗಳುಳ್ಳ ಈ ಬ್ರಹ್ಮಾಂಡ ಯಾರ ನಾಭಿಯಿಂದ ಸೃಷ್ಟಿಯಾಗಿದೆಯೋ, ಅವನು ಪದ್ಮನಾಭ. ಈ ಸೃಷ್ಟಿಯ ಕಾರಣಪುರುಷ.
49) ಅಮರಪ್ರಭುಃ
"ಮರರು" ಅಂದರೆ ಮರಣ ಹೊಂದುವವರು. "ಅಮರರು" ಅಂದರೆ ಮರಣವಿಲ್ಲದವರು ಎಂದರ್ಥ.
ಮರಣ ಕೇವಲ ಬೌದ್ಧಿಕ ಶರೀರಕ್ಕೆ ಹೊರತು ಸೂಕ್ಷ್ಮ ಶರೀರಕ್ಕಲ್ಲ. ಮುಕ್ತಿ ಪಡೆದ ಎಲ್ಲಾ ಜೀವರು ಅಮರರು.
ಬ್ರಹ್ಮಾದಿ-ದೇವತೆಗಳು ಅಮೃತಪಾನದಿಂದ ಅಮರರೆನಿಸಿದ್ಧರೂ ಕೂಡ , ಅವರಿಗೂ ಹಲವು
ಕಲ್ಪಗಳ ನಂತರ ಮರಣ ಮತ್ತು ಮೋಕ್ಷವಿದೆ. ಆದರೆ ಬ್ರಹ್ಮಾದಿ-ದೇವತೆಗಳ ಆಯಸ್ಸು
ಧೀರ್ಘವಾದ್ದರಿಂದ ಅವರನ್ನು ಅಮರರು ಎನ್ನುತ್ತಾರೆ. ಇಲ್ಲಿ ಅಮರಪ್ರಭು ಎಂದರೆ ಮುಕ್ತಿ
ಪಡೆದ ಜೀವ ಹಾಗೂ ಬ್ರಹ್ಮಾದಿ-ದೇವತೆಗಳ ಒಡೆಯ(ಪ್ರಭು) ಎಂದರ್ಥ.
50) ವಿಶ್ವಕರ್ಮಾ
ವಿಶ್ವಕರ್ಮ ಎಂದರೆ ಈ ವಿಶ್ವದ ವಿನ್ಯಾಸಕಾರ (Architect). ಪ್ರಾಚೀನ ಗ್ರಂಥಗಳಲ್ಲಿ ಈ
ವಿಶ್ವವನ್ನು ಐವತ್ತೈದು ಅವಯವಗಳಿರುವ ಪ್ರವೃತ್ತಿ ಮತ್ತು ನಿವೃತ್ತಿ ಎಂಬ ಎರಡು
ಹಣ್ಣುಗಳಿರುವ ಒಂದು ಮರವನ್ನಾಗಿ ವರ್ಣಿಸಿದ್ದಾರೆ. ಇಲ್ಲಿ ಪ್ರವೃತ್ತಿ ಎಂದರೆ
ಬೌದ್ಧಿಕ ಸುಖದ ಬೆನ್ನು ಹತ್ತುವ ಕರ್ಮ ಜೀವಿ, ಹಾಗೂ ನಿವೃತ್ತಿ ಎಂದರೆ
ಬೌದ್ಧಿಕ ಸುಖಕ್ಕೆ ಬೆನ್ನು ಹಾಕಿ ಮೋಕ್ಷದತ್ತ ಪ್ರಯಾಣಿಸುತ್ತಿರುವವ ಎಂದರ್ಥ. ಭಗವಂತನ ಈ
ಅಪೂರ್ವ ವಿನ್ಯಾಸದ ಹಿಂದಿರುವ ಐವತ್ತೈದು ಪ್ರಮುಖ ಅಂಗಗಳನ್ನು ಮರದ ಉದಾಹರಣೆಯೊಂದಿಗೆ
ವರ್ಣಿಸಿದ್ದಾರೆ.
ಬನ್ನಿ, ಈ ಅಪೂರ್ವ ವಿನ್ಯಾಸವನ್ನು ಸಂಕ್ಷಿಪ್ತವಾಗಿ ನೋಡೋಣ.
1) ಏಕಾಯನಹಃ - ಈ ವಿಶ್ವಕ್ಕೆ ಮೂಲ-ಪ್ರಕೃತಿ. ಇದನ್ನೇ ಇಲ್ಲಿ ಮರವೆಂದು ಕರೆದಿರುವುದು.
2-3 ) ವಿಫಲಹಃ -ಮೇಲೆ ಹೇಳಿರುವ ಪ್ರವೃತ್ತಿ ಮತ್ತು ನಿವೃತ್ತಿ ಈ ಮರದಲ್ಲಿರುವ ಎರಡು ಹಣ್ಣುಗಳು.
4 -6 ) ತ್ರಿಮೂಲಹಃ -ಸತ್ವ , ರಜಸ್ಸು ಮತ್ತು ತಮಸ್ಸು ಎಂಬ ಮೂರು ಮೂಲಗಳು.
7-10 ) ಚತುರಸಹಃ -ಧರ್ಮ , ಅರ್ಥ , ಕಾಮ , ಮತ್ತು ಮೋಕ್ಷವೆಂಬ ನಾಲ್ಕು ರಸಗಳು.
11-15 ) ಪಂಚಶಿಖಃ -ಮಣ್ಣು , ನೀರು , ಬೆಂಕಿ , ಗಾಳಿ ಮತ್ತು ಆಕಾಶವೆಂಬ ಪಂಚಭೂತಗಳು. (ಅಥವಾ-ಶಬ್ದ , ಸ್ಪರ್ಶ ,ರೂಪ , ರಸ ಮತ್ತು ಗಂಧ)
16-21 ) ಷಡಾತ್ಮ - ಆರು ಸ್ವಭಾವಗಳಾದ ಮೋಹ , ಶೋಕ ,ಕ್ಷುತ್ (ಹಸಿವು),
ಪಿಪಾಸು(ಬಾಯಾರಿಕೆ) , ಜರ(ಅಜ್ಞಾನ) ಮತ್ತು ವ್ಯಾಧಿ, ಹಾಗೂ ಆರು
ಬೆಳವಣಿಗೆಯ ಹಂತಗಳಾದ-ಅಸ್ತಿ(ಗರ್ಭ ಪ್ರವೇಶಿಸುವ ಹಂತ ), ಜಾಯತೆ (ಹುಟ್ಟುವ ಹಂತ),
ವರ್ಧತೆ (ಬೆಳವಣಿಗೆಯ ಹಂತ), ವಿಪರಿಣಮತೆ( ದೇಹದ ಬದಲಾವಣೆಯ ಹಂತ) ಅಪಕ್ಷೀಯತೆ
(ಮುದಿತನ) ಮತ್ತು ಕೊನೆಯದಾಗಿ ನಷ್ಯತೆ .
22-28) ಸಪ್ತತ್ವಕ್ -ಏಳು ತೊಗಟೆಗಳಾದ ತ್ವಕ್ (ಚರ್ಮದ ಹೊರ ಪದರು), ಚರ್ಮ(ಒಳಚರ್ಮ), ಮಾಂಸ , ರಕ್ತ , ಮೇದಸ್ಸು ,ಮಜ್ಜ ಮತ್ತು ಅಸ್ತಿ.
29-36) ಅಷ್ಟವಿಟಪಹಃ -ಎಂಟು ಬಗೆಯ ಜೀವಜಾತಗಳು (ಉದಾಹರಣೆಗೆ- ದೇವತೆಗಳು, ರಾಕ್ಷಸರು,ಮನುಷ್ಯರು, ಧಾನವರು.. ಇತ್ಯಾದಿ).
37-45 ) ನವಾಕ್ಷಹಃ -ಒಂಬತ್ತು ಪೊಟರೆಗಳಾದ ನವದ್ವಾರಗಳು (ಕಣ್ಣು, ಕಿವಿ , ಮೂಗು , ಬಾಯಿ ,ಮಲ-ಮೂತ್ರ ದ್ವಾರ)
45-55) ದಶಸ್ಚದಹಃ -ಹತ್ತು ಎಲೆಗಳು- ಐದು ಜ್ಞಾನೇಂದ್ರಿಯ ಮತ್ತು ಐದು ಕರ್ಮೇಂದ್ರಿಯಗಳು.
ಇಂತಹ ವಾಸ್ತುಶಿಲ್ಪದ ಈ ವಿಶಿಷ್ಟವಾದ ವಿಶ್ವವನ್ನು ವಿನ್ಯಾಸಗೊಳಿಸಿರುವ ಭಗವಂತ ವಿಶ್ವಕರ್ಮ.
ಈ ಪ್ರಪಂಚದಲ್ಲಿ ಒಂದು ವಸ್ತುವಿನಂತೆ ಇನ್ನೊಂದು ವಸ್ತುವಿಲ್ಲ. ಭಗವಂತನ ಅದ್ವಿತೀಯ
ಅಖಂಡ ವಿನ್ಯಾಸಕ್ಕೆ ಉತ್ತಮ ಉದಾಹರಣೆ ಮನುಷ್ಯನ ಬೆರಳಚ್ಚು (Finger print) ಒಬ್ಬನ
ಬೆರಳಚ್ಚು ಇನ್ನೊಬ್ಬನಿಗಿಂತ ಭಿನ್ನ ! ಇದು ಸಾಮಾನ್ಯ ವಿನ್ಯಾಸವಲ್ಲ.
ಮೇಲಿನ ಅರ್ಥವಲ್ಲದೆ ಇನ್ನೂ ಅನೇಕ ಅರ್ಥಗಳನ್ನು ಈ ನಾಮದಲ್ಲಿ ನೋಡಬಹುದು. ವಿಶ್ವ
ಅನ್ನುವ ಶಬ್ದಕ್ಕೆ 'ಎಲ್ಲಾ' ಎನ್ನುವ ಅರ್ಥವಿದೆ, ಅದ್ದರಿಂದ ವಿಶ್ವಕರ್ಮ ಎಂದರೆ
ಸರ್ವ-ಕರ್ಮಗಳ ನಿಯಾಮಕ ಭಗವಂತ.
ಪುರಾಣದಲ್ಲಿ ಕಾಣುವ ದೇವ ಶಿಲ್ಪಿ-ವಿಶ್ವಕರ್ಮ. ದೇವಸ್ಥಾನ ಮತ್ತು ಮನೆಯ ವಾಸ್ತು
ವಿನ್ಯಾಸವನ್ನು ದೇವಶಿಲ್ಪಿಯ ಒಳಗೆ ನಿಂತು ನಮಗೆ ಕರುಣಿಸಿದ ಭಗವಂತ ವಿಶ್ವಕರ್ಮ
ಇತ್ಯಾದಿ.
51) ಮನುಃ
ಮನ್ವಂತರಗಳನ್ನು ಮನು ಎಂದೂ ಕರೆಯುತ್ತಾರೆ. ಮನ್ವಂತರಗಳು ಹದಿನಾಲ್ಕು. ಅವುಗಳೆಂದರೆ:
1 ) ಸ್ವಾಯಂಭುವ ಮನು, 2) ಸ್ವರೋಚಿಶ ಮನು, 3) ಉತ್ತಮ ಮನು, 4) ತಪಾಸ ಮನು 5)
ರೈವತ ಮನು, 6) ಚಕ್ಷುಶ ಮನು, 7) ವೈವಸ್ವತ ಮನು (ಈಗ ನಡೆಯುತ್ತಿರುವುದು) , 8) ಸಾವರಣಿ
ಮನು, 9) ದಕ್ಷ ಸಾವರಣಿ ಮನು, 10) ಬ್ರಹ್ಮ ಸಾವರಣಿ ಮನು, 11) ಧರ್ಮ ಸಾವರಣಿ ಮನು,
12) ಮೇರು ಸಾವರಣಿ ಮನು, 13) ದೇವ ಸಾವರಣಿ ಮನು, 14) ಇಂದ್ರ ಸಾವರಣಿ ಮನು.
1 ಮಾನವ ವರ್ಷ = ದೇವತೆಗಳ 1 ದಿನ (ಉತ್ತರಾಯಣ ಹಗಲು ಮತ್ತು ದಕ್ಷಿಣಾಯಣ ರಾತ್ರಿ).
360 ಮಾನವ ವರ್ಷ = ದೇವತೆಗಳ 360 ದಿನ = 1 ದೇವ ವರ್ಷ.
1200 ದೇವ ವರ್ಷ = 4,32,000 ಮಾನವ ವರ್ಷ = 1 ಕಲಿಯುಗದ ಅವಧಿ.
2400 ದೇವ ವರ್ಷ = 8,64,000 ಮಾನವ ವರ್ಷ = 1 ದ್ವಾಪರ ಯುಗದ ಅವಧಿ.
3600 ದೇವ ವರ್ಷ = 12,96,000 ಮಾನವ ವರ್ಷ = 1 ತ್ರೇತಾ ಯುಗದ ಅವಧಿ.
4800 ದೇವ ವರ್ಷ = 17,28,000 ಮಾನವ ವರ್ಷ = 1 ಕೃತ ಯುಗದ ಅವಧಿ.
12,000 ದೇವ ವರ್ಷ = 43,20,000 ಮಾನವ ವರ್ಷ = 1 ಮಹಾಯುಗ.
ಸುಮಾರು 71 ಮಹಾಯುಗ = 1 `ಮನ್ವಂತರ', ಒಂದು ಮನುವಿನ ವರ್ಷ.
1000 ಮಹಾಯುಗ = 1 ದಿನ ಕಲ್ಪ = ಒಂದು ಬ್ರಹ್ಮ ದಿನ (ಹಗಲು)
720 ದಿನ ಕಲ್ಪ = 1 ಬ್ರಹ್ಮ ವರ್ಷ
ಒಂದು ಬ್ರಹ್ಮನ ಅವಧಿ 100 ಬ್ರಹ್ಮ ವರ್ಷ = 43,20,000 x 1000 x 720 x 100 =
31,104,000,00,00,000 (31,104 ಸಾವಿರ ಕೋಟಿ) ಮಾನವ ವರ್ಷ !!
ಯಾವುದರ ಮೂಲಕ ಮನನ ಮಾಡುತ್ತೇವೋ ಅವನು ಮನು (ಮನನ ಮಾಡುವುದು ಮಂತ್ರಗಳ ಮೂಲಕ )
ಅದ್ದರಿಂದ ಮನು ಅಂದರೆ ಮನುವಿನೊಳಗಿದ್ದು (ಮಂತ್ರಗಳಲ್ಲಿ ಮತ್ತು ಮನ್ವಂತರಗಳಲ್ಲಿ ಇದ್ದು) , ಮನುವಾಗಿ ಎಲ್ಲವನ್ನೂ ಬಲ್ಲ ಭಗವಂತ !
52) ತ್ವಷ್ಟಾ
ತ್ವಷ್ಟೃ ಅಂದರೆ ಉಳಿಯಿಂದ ಮರವನ್ನು ಕೆತ್ತುವ ಶಿಲ್ಪಿ ಎನ್ನುವ ಅರ್ಥವನ್ನು
ಕೊಡುತ್ತದೆ. ಈ ಹಿಂದೆ ವಿಶ್ವಕರ್ಮ ನಾಮಕನಾಗಿ ಭಗವಂತನನ್ನು ಶ್ರೇಷ್ಠ ವಿನ್ಯಾಸಕಾರನಾಗಿ
ನೋಡಿದ್ದೇವೆ. ಇಲ್ಲಿ ತ್ವಷ್ಟೃ ಅಂದರೆ ಮಣ್ಣು , ನೀರು ಮತ್ತು ಬೆಂಕಿಯೆಂಬ ಉಳಿಯಿಂದ,
ಅದ್ಭುತ ಸೌಂದರ್ಯದಿಂದ ಕೂಡಿದ ಈ ವಿಶ್ವವನ್ನು ಕೆತ್ತಿದ ಅಪೂರ್ವ ಶಿಲ್ಪಿ ಎಂದರ್ಥ.
ಪ್ರಳಯ ಕಾಲದಲ್ಲಿ ಎಲ್ಲವನ್ನೂ ಸಂಹರಿಸುವ ಭಗವಂತ ತ್ವಷ್ಟಾ.
53) ಸ್ಥವಿಷ್ಠಃ
ಸ್ಥವಿಷ್ಠ ಅಂದರೆ ಸ್ಥೂಲಕಾಯ ಎನ್ನುವ ಅರ್ಥವನ್ನು ಕೊಡುತ್ತದೆ. ಭಗವಂತ
ವಿವಿಧತೆಯಾತ್-ವಿಷ್ಟಥಿ. ಅಂದರೆ ಆಕಾಶದಂತೆ ಸ್ಥೂಲನಾಗಿರುವವ ಆದರೆ
ಅನಂತ ರೂಪದಲ್ಲಿ ಅನಂತ ವಸ್ತುವಿನಲ್ಲಿ ಅದ್ವಿತೀಯ, ಅನನ್ಯ, ಅನುಪಮ ರೂಪಕನಾಗಿ
ತುಂಬಿರುವವನು. ಈ ರೀತಿ ಅಖಂಡವಾಗಿ ಉಹಿಸಲೂ ಅಸಾಧ್ಯವಾದ ಅದ್ಭುತ
ಕಾಯನಾದ ಭಗವಂತ ಸ್ಥವಿಷ್ಠ.
54) ಸ್ಥವಿರೋ ಧ್ರುವಃ
ಸ್ಥವಿರೋ ಧ್ರುವ ಅಂದರೆ- ಮೇಲೆ ಹೇಳಿರುವ ಇಷ್ಟೊಂದು ವೈವಿಧ್ಯತೆಗಳಿಂದ ಎಲ್ಲಾ
ಆಕಾರದಲ್ಲೂ ಇದ್ದು ನಿರ್ವಿಕಾರನಾಗಿರುವ ಭಗವಂತ. ಎಲ್ಲಕ್ಕಿಂತ ಮೊದಲಿದ್ದ ಅಚಲ ತತ್ವ
ಅಗ್ರಾಹ್ಯಃ ಶಾಶ್ವತಃ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ |
ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಂಗಲಂ ಪರಮ್ || 7 ||
55) ಅಗ್ರಾಹ್ಯಃ
ಭಗವಂತ ಅನಂತ ವಿಶ್ವದಲ್ಲಿ ಅನಂತ ರೂಪದಲ್ಲಿ ತುಂಬಿದ್ದರೂ ಕೂಡ ಆತ ನಿರ್ವಿಕಾರ!
ಇದನ್ನು ಹೇಗೆ ಊಹಿಸುವುದು ಅನ್ನುತೀರ? ಇಲ್ಲ , ಮನುಷ್ಯನ ಮನಸ್ಸಿನಿಂದ ಅವನನ್ನು
ಸಂಪೂರ್ಣ ಗ್ರಹಿಸಲು ಅಸಾಧ್ಯ. ಏಕೆಂದರೆ ಆತ ಅಗ್ರಾಹ್ಯ - ಗ್ರಹಿಸಲು ಅಸಾಧ್ಯವಾದವನು.
ಇಷ್ಟೇ ಅಲ್ಲ ಅವನು ಅಗ್ರ-ಅಹ್ಯ ಅಂದರೆ , ಎಲ್ಲಕ್ಕಿಂತ ಮೊದಲು ಇದ್ದವನು ಮತ್ತು
ಎಲ್ಲಕ್ಕಿಂತ ಶ್ರೇಷ್ಠನಾದವನು ಅದ್ದರಿಂದ ಅವನು ಅಗ್ರಾಹ್ಯ.
56 ) ಶಾಶ್ವತಃ
ಭಗವಂತ ಎಂದೂ ಯಾವುದೇ ಬದಲಾವಣೆಗೆ ಒಳಪಡದೆ, ಎಂದೆಂದೂ ಶಾಶ್ವತವಾಗಿರುವವನು.
ಅದ್ದರಿಂದ ಅವನು ಶಾಶ್ವತ.
57) ಕೃಷ್ಣಃ
ಕೃಷ್ಣ ಎನ್ನುವುದು ಮೇಲ್ನೋಟಕ್ಕೆ ವಸುದೇವ ದೇವಕಿಯರಲ್ಲಿ ಅವತರಿಸಿದ
ಭಗವಂತನ ಹೆಸರು. ಆದರೆ ಕೃಷ್ಣ ಎನ್ನುವುದು ಭಗವಂತನ ಮೂಲ ರೂಪದ ಹೆಸರೂ
ಹೌದು. ಗರ್ಗಾಚಾರ್ಯರು, ತಾಯಿ ಯಶೋದೆಯಲ್ಲಿ ಮಗುವಿನ ಹೆಸರಿಡುವಾಗ ಹೀಗೆ ಹೇಳುತ್ತಾರೆ
"ಈ ಮಗುವಿಗೆ ನಾನು ಹೆಸರಿಡುತ್ತಿಲ್ಲ. ಈ ಜಗತ್ತಿನಲ್ಲಿ ಇರುವ ಎಲ್ಲಾ ಹೆಸರೂ ಇವನದೇ,
ಇವನಿಗೆ ಇರುವ ಹೆಸರನ್ನೇ ನಿಮಗೆ ನೆನಪಿಸುತ್ತಿದ್ದೇನೆ, ಈತ ಶ್ಯಾಮ, ಸುಂದರ, ವಾಸುದೇವ,
ಶ್ರೀ ಕೃಷ್ಣ " ಎಂದು ಹೇಳಿ ನಾಮಕರಣ ಮಾಡುತ್ತಾರೆ. ಚತುರ್ವಂಶ ಮೂರ್ತಿಗಳಲ್ಲಿ
ಇಪ್ಪತ್ನಾಲ್ಕುನೆ ರೂಪವೂ "ಕೃಷ್ಣ" . ಧರ್ಮ ದೇವತೆಯಲ್ಲಿ ಹುಟ್ಟಿದ ಒಂದು ರೂಪ "ಕೃಷ್ಣ"
(ನರ, ನಾರಾಯಣ, ಹರಿ, ಕೃಷ್ಣ). ಭಗವಂತನ ಸಹಸ್ರ ರೂಪದಲ್ಲಿ ಕೃಷ್ಣ ರೂಪ ಕೂಡಾ ಒಂದು.
ಮೇಲಿನ ಐದು ಸಂದರ್ಭಗಳಲ್ಲಿ "ಕೃಷ್ಣ" ನಾಮಕನಾದ ಭಗವಂತನನ್ನು ಕಾಣುತ್ತೇವೆ. ಮೂಲತಃ
ಕೃಷ್ಣ ಎಂದರೆ ಕಪ್ಪು, ನೀಲ ಮೇಘ ಶ್ಯಾಮ. ಈ ನೀಲ ಕಪ್ಪು
ಅಂದದ ಪ್ರತೀಕ ಹಾಗೂ ಜ್ಞಾನದ ಪ್ರತೀಕ ಕೂಡ ಹೌದು. ದ್ರೌಪದಿ ಆ ಕಾಲದ ಅತ್ಯಂತ
ಸೌಂದರ್ಯವತಿ. ಅದ್ದರಿಂದ ಆಕೆಯನ್ನು ಕೃಷ್ಣೆ ಎಂದು ಕರೆಯುತ್ತಿದ್ದರು.
ದ್ರೋಣಾಚಾರ್ಯರು ಬಿಳಿ ಗಡ್ಡದ ಶ್ವೇತ ವಸ್ತ್ರಧಾರಿಯಾಗಿದ್ದ ಕಪ್ಪಗಿನ ಆಕರ್ಷಕ
ವ್ಯಕ್ತಿ. ಇಲ್ಲಿ ನೀಲ ಕಪ್ಪು
ಜ್ಞಾನದ ಸಂಕೇತ. ಅತೀ ಕೋಪಬಂದಾಗ ನಾವು ಕೆಂಪಾಗಿ ಕಾಣುತ್ತೇವೆ. ಅದೇ ರೀತಿ
ಸಂಪೂರ್ಣ ಜ್ಞಾನಿ ನೀಲವಾಗಿ ಕಾಣುತ್ತಾನೆ. ಅದ್ದರಿಂದ ಪರಿಪೂರ್ಣ ಜ್ಞಾನಿ ಭಗವಂತ ತನ್ನ
ಅವತಾರದಲ್ಲಿ ಕಾಣಿಸಿದ್ದು ನೀಲಮೇಘ ಶ್ಯಾಮನಾಗಿ. ಇದೇ ರೀತಿಯಲ್ಲಿ ಇನ್ನೂ ಹಲವೂ
ರೂಪದಲ್ಲಿ ಕೃಷ್ಣ ಎನ್ನುವ ನಾಮದ ಅರ್ಥವನ್ನು ಹುಡುಕಬಹುದು.
ಕೃಷ್ಣ ಹುಟ್ಟುವ ಮೊದಲು ದೇವಕಿಯ ಗರ್ಭದಲ್ಲಿ ಸಂಕರ್ಷಣ (ಬಲರಾಮ) ಇದ್ದ.
ಸಂಕರ್ಷಣನನ್ನು ಸಂಕರ್ಷಿಸಿ ಆನಂತರ ದೇವಕಿಯ ಅಷ್ಟಮ ಗರ್ಭದಲ್ಲಿ ಹುಟ್ಟಿದ
ಕಾರಣಕ್ಕೆ ಆತನನ್ನು ಕೃಷ್ಣ ಎನ್ನುತ್ತಾರೆ.
ಆತ ಹುಟ್ಟಿದ ಮೇಲೆ ಮಾಡಿದ ಪ್ರತಿಯೊಂದು ಕೆಲಸವೂ ಕರ್ಷಣವೇ. ಪೂತನಿ, ಶಕಟಾಸುರ,
ಕೇಶಿ, ಕಂಸ .. ಹೀಗೆ ದುಷ್ಟ ಶಕ್ತಿಗಳನ್ನೆಲ್ಲವನ್ನು ಕರ್ಷಣೆ ಮಾಡಿದವ ಕೃಷ್ಣ. ಹಾಗೆ
ಜ್ಞಾನ ಮೂರ್ತಿಯಾದ ಆತ ಹಕ್ಕಿಗಳು , ಹಸುಗಳು, ಗೋಪಾಲಕರು, ಗೋಪಿಕೆಯರು ಹಾಗೂ ಯಮುನಾ
ನದಿಯನ್ನೂ ಕೂಡ ತನ್ನ ಸೌಂದರ್ಯದಿಂದ ಆಕರ್ಷಸಿ ಉತ್ಕರ್ಷಣೆ ಮಾಡಿದವ. ಅದ್ದರಿಂದ ಆತ
'ಕೃಷ್ಣ'. ಅರ್ಜುನನ ರಥದಲ್ಲಿ ನಿಂತು ಹದಿನೆಂಟು ಅಕ್ಷೋಹಿಣಿ ಸೈನ್ಯವನ್ನು ಕರ್ಷಣೆ
ಮಾಡಿದ. ಹೀಗೆ ಅಸುರರನ್ನು ನಿಗ್ರಹಿಸಿ ಭೂ ಭಾರವನ್ನು ಕರ್ಷಣೆ ಮಾಡಿ, ಸಜ್ಜನರ ಹಾಗೂ
ಧರ್ಮದ ಉದ್ಧಾರಕ್ಕಾಗಿ ಅವತರಿಸಿದ ಭಗವಂತ 'ಕೃಷ್ಣ' .
ಇನ್ನು ಕೃಷ್ಣ ಪದವನ್ನು ಒಡೆದರೆ ಕೃಷಿ+ಣ=ಕೃಷ್ಣ . ಕೃಷಿ ಅಂದರೆ ಭೂಮಿ, ಣ ಅಂದರೆ ಬಲ
ಅಥವ ಆನಂದ. ಅದ್ದರಿಂದ ಕೃಷ್ಣ ಎಂದರೆ ಧರ್ಮವನ್ನು ಬಲಪಡಿಸಲು ಭೂಮಿಯಲ್ಲಿ ಅವತರಿಸಿದ
ಆನಂದಸ್ವರೂಪ ಭಗವಂತ.
58) ಲೋಹಿತಾಕ್ಷಃ
ಲೋಕ+ಹಿತ+ಅಕ್ಷ - ಅಂದರೆ ಲೋಕದ ಹಿತಕ್ಕಾಗಿ ಭಕ್ತರ ಮನೋಭಿಲಾಷೆ ಪೂರ್ತಿಗಾಗಿ
ತಾವರೆಯಂತಹ ಅರಳು ಕಣ್ಣು ಉಳ್ಳವನು ಎಂದರ್ಥ. ಈ ನಾಮದ ಅರ್ಥವನ್ನು ತಿಳಿಯಬೇಕಾದರೆ
ನಾವು ಭಗವಂತ ಕೊಪೋದ್ರಿಕ್ತನಾದ ಕೆಲವು ಘಟನೆಗಳನ್ನು ನೋಡಬೇಕಾಗುತ್ತದೆ.
ಮಹಾಭಾರತ ಯುದ್ಧದಲ್ಲಿ ಅರ್ಜುನ ಭೀಷ್ಮ ಪಿತಾಮಹರ ನಡುವೆ ಯುದ್ಧ
ಪ್ರಾರಂಭವಾದಾಗ ನಡೆದ ಒಂದು ಘಟನೆಯನ್ನು ನೋಡೋಣ. ಅರ್ಜುನ ತನ್ನನ್ನು ಮುದ್ದಿಸಿ ಆಡಿಸಿ
ಬೆಳೆಸಿದ ಪಿತಾಮಹನೊಂದಿಗೆ ಮನಸ್ಸಿಲ್ಲದ ಮನಸ್ಸಿನಿಂದ ಯುದ್ಧ ಮಾಡುತ್ತಿರುತ್ತಾನೆ.
ಇದನ್ನು ಗಮನಿಸಿದ ಸಾರಥಿ ಕೃಷ್ಣ ಕೋಪಗೊಳ್ಳುತ್ತಾನೆ. ಮಹಾಭಾರತ ಯುದ್ಧದ
ಮೊದಲು ತಾನು ಶಸ್ತ್ರ ಹಿಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಕೃಷ್ಣ,
ಕೋಪಾವೇಶದಿಂದ ಭೀಷ್ಮನನ್ನು ಸಾಯಿಸಲೆಂಬಂತೆ ಚಕ್ರವನ್ನೇ ಹಿಡಿದು ಮುಂದೊತ್ತಿ
ಬರುತ್ತಿದ್ದಾನೆ! ಆಗ ಆತನ ಕಣ್ಣು ಕೆಂದಾವರೆ ಹೂವಿನಂತೆ ಕೆಂಪಾಗಿ ಕಾಣುತ್ತಿರುತ್ತದೆ.
ಇದನ್ನು ನೋಡಿದ ಬೀಷ್ಮ ತನ್ನ ಎರಡೂ ಕೈಯನ್ನು ಜೋಡಿಸಿ ಹೀಗೆ ಹೇಳುತ್ತಾನೆ:
" ಓ ಭಗವಂತ; ನಿನ್ನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ, ಹಾಗೆ ಯುದ್ಧ ಮಾಡುತ್ತೇನೆ
ಎಂದು ನಾನು ಪ್ರತಿಜ್ಞೆ ಮಾಡಿದ್ದೆ. ಚಕ್ರ ಹಿಡಿಯುವುದಿಲ್ಲ ಎಂದಿದ್ದೆ ನೀನು. ಆದರೆ ಈಗ
ನನ್ನ ಪ್ರತಿಜ್ಞೆಯನ್ನು ಈಡೇರಿಸಲು ನೀನು ಚಕ್ರ ಹಿಡಿದಿರುವೆ. ನಿನ್ನನ್ನೇ ಮರೆತಿರುವೆ,
ಆದರೆ ನಿನ್ನ ಭಕ್ತನನ್ನು ಮರೆತಿಲ್ಲ; ನೀನಲ್ಲದೆ ನಮಗೆ ಗತಿ ಇನ್ನ್ಯಾರು?
"ಎನ್ನುತ್ತಾನೆ. ಈ ಘಟನೆಯಲ್ಲಿ ಲೋಕಕಲ್ಯಾಣಕ್ಕಾಗಿ ಭಗವಂತನ ಕೋಪ ಮತ್ತು ಅದರ ಹಿಂದಿರುವ
ಕರುಣೆ ವ್ಯಕ್ತವಾಗಿದೆ. ಇದೇ ರೀತಿ ಇನ್ನೊಂದು ಘಟನೆ ನರಸಿಂಹ ಅವತಾರದಲ್ಲಿ ಕಂಡು
ಬರುತ್ತದೆ. ಹಿರಣ್ಯಕಷಿಪುವನ್ನು ಕೊಂದು ಆತನ ಕರುಳನ್ನು ಬಗೆದು ಕೊರಳಿಗೆ ಹಾಕಿಕೊಂಡರೂ,
ಶಾಂತನಾಗದ ಭಗವಂತನ ಕೋಪೋದ್ರಿಕ್ತ ರೂಪವನ್ನು ಕಂಡು,
ದೇವತೆಗಳೆಲ್ಲರೂ ಭಯಗೊಂಡಾಗ, ಐದು ವರ್ಷದ ಪುಟ್ಟ ಬಾಲಕ ಪ್ರಹಲ್ಲಾದನ
ಪ್ರಾರ್ಥನೆಗೆ ಮಣಿದು, ಶಾಂತ ಮೂರ್ತಿಯಾಗುತ್ತಾನೆ.
ಮೇಲಿನ ಘಟನೆಯಲ್ಲಿ ಲೋಕಕಲ್ಯಾಣಕ್ಕಾಗಿ ಭಗವಂತ ದುಷ್ಟರನ್ನು
ತನ್ನ ಕೆಂಗಣ್ಣಿನಿಂದ ನಾಶಮಾಡಿ, ಭಕ್ತರ ಅಭಿಲಾಷೆಯನ್ನು
ಪೂರ್ತಿ ಮಾಡುವುದು ಕಂಡುಬರುತ್ತದೆ. ಇಂತಹ ಅರಳುಗಣ್ಣಿನ ಭಗವಂತ ಲೋಹಿತಾಕ್ಷ !
59) ಪ್ರತರ್ದನಃ
ಭಾಷೆಯಲ್ಲಿ, ಬರವಣಿಗೆಯಲ್ಲಿ, 'ಸಂಕ್ಷಿಪ್ತ ' (Abbreviation)
ಉಪಯೋಗಿಸುವುದು ಮೂಲತಃ ಬಂದಿದ್ದು ಸಂಸ್ಕೃತದಿಂದ. ಸಂಸ್ಕೃತ ಗ್ರಂಥಗಳಲ್ಲಿ ವಿಶೇಷವಾಗಿ
ಪದದ ಸಂಕ್ಷಿಪ್ತ ರೂಪವನ್ನು ಉಪಯೋಗಿಸುತ್ತಾರೆ .
ಪ್ರತರ್ದನ ಎನ್ನುವ ಪದವನ್ನು ಈ ಕೆಳಗಿನಂತೆ ಬಿಡಿಸಬಹುದು.
1) ಪ್ರ+ತರ್ದನ 2) ಪ್ರ+ತರ್ದ+ನಯತಿ
ಪ್ರ+ತರ್ದನ- ಇಲ್ಲಿ 'ಪ್ರ' ಎನ್ನುವುದು ಪ್ರಕ್ರುಷ್ಟರು ಎನ್ನುವ ಪೂರ್ಣ ಪದದ
ಸಂಕ್ಷಿಪ್ತ ರೂಪ. ಪ್ರತರ್ದನಃ ಅಂದರೆ ಪ್ರಕ್ರುಷ್ಟರಿಗೆ ಹಿಂಸೆ ಕೊಡುವ ದುಷ್ಟ
ಶಕ್ತಿಯನ್ನು ನಿರ್ಮೂಲ ಮಾಡುವವನು ಎಂದರ್ಥ.
ಪ್ರ+ತರ್ದ+ನಯತಿ- ಇಲ್ಲಿ 'ಪ್ರ' ಎನ್ನುವುದು ಪ್ರಹ್ಲಾದ ಎನ್ನುವ ಪೂರ್ಣ ಪದದ
ಸಂಕ್ಷಿಪ್ತ ರೂಪ. ತರ್ದ ಎಂದರೆ ಹಿಂಸೆ. ನಯತಿ ಎಂದರೆ ಹೋಗಲಾಡಿಸಿದವನು. ಅದ್ದರಿಂದ
ಪ್ರತರ್ದನಃ ಎಂದರೆ ಪ್ರಹ್ಲಾದನಿಗೆ ಹಿಂಸೆ
ಕೊಟ್ಟಂತಹ ಹಿರಣ್ಯಕಶಿಪುವನ್ನು ಮರ್ದಿಸಿ ಆತನ ಕಷ್ಟವನ್ನು ಪರಿಹರಿಸಿ ಲೋಕವನ್ನು
ಹಿಂಸೆಯಿಂದ ಪಾರುಮಾಡಿದವನು.
60) ಪ್ರಭೂತಃ
ಭೂಮ ಎಂದರೆ ಪರಿಪೂರ್ಣತೆ. ಪ್ರಭೂತಿ ಎಂದರೆ ಭೂತಿಗಲ್ಲಿ ಪ್ರಕ್ರುಷ್ಟವಾದ ಸ್ಥಿತಿ.
ಪ್ರಭೂತ ಎಂದರೆ ಪರಿಪೂರ್ಣವಾದ ಆನಂದಸ್ವರೂಪನಾದ, ಗುಣಗಳಿಂದ ತುಂಬಿ ತುಳುಕುವ ಭಗವಂತ.
61) ತ್ರಿಕಕುಬ್ಧಾಮ
ತ್ರಿ+ ಕಕುತ್+ ಧಾಮ= ತ್ರಿಕಕುಬ್ಧಾಮ ; ಇಲ್ಲಿ ‘ತ್ರಿ’ ಅಂದರೆ ಮೂರು, ‘ಕಕುತ್’
ಅಂದರೆ ಶಿಖೆ ಅಥವಾ ತುತ್ತ-ತುದಿ, ಧಾಮ ಎಂದರೆ ನೆಲೆಸಿರುವವನು. ತ್ರಿಕಕುಬ್ಧಾಮ ಎಂದರೆ
ಮೂರು ಶಿಖೆಗಳಲ್ಲಿ ನೆಲೆಸಿರುವವನು.
ಈಗ ನಾವು ಮೂರು ಶಿಖೆಗಳು ಯಾವುದೆಂದು ನೋಡೋಣ.
ಮೂರು ಲೋಕಗಳು - ಭೂಮಿ , ಅಂತರಿಕ್ಷ ಮತ್ತು ಸ್ವರ್ಗ. ಈ ಮೂರು
ಲೋಕಗಳ ತುದಿಯಲ್ಲಿ ಮೂರು ಸ್ಥಾನಗಳು. ಭೂಮಿಯಲ್ಲಿ ‘ಶ್ವೇತದ್ವೀಪ’, ಅಂತರಿಕ್ಷದಲ್ಲಿ
‘ಅನಂತಾಸನ’, ಸ್ವರ್ಗದಲ್ಲಿ ‘ವೈಕುಂಠ’. ಮೂರು ತೇಜೋಮಯ ಮೂರ್ತಿಗಳು-ಬ್ರಹ್ಮ, ವಿಷ್ಣು,
ಮಹೇಶ್ವರ. ಓಂಕಾರದ ಮೂರು ಅಕ್ಷರಗಳು -ಅ, ಉ, ಮ್.
ಈ ಮೇಲಿನ ಮೂರು ಅಕ್ಷರದಿಂದಾದ ಮೂರು ಪದಗಳು ‘ಭೂಃ, ಭುವಃ ಸ್ವಃ (ಭೂರ್ಭುವಃ ಸ್ವಃ
)’, ಈ ಪದಗಳಿಂದಾದ ಮೂರು ಪಾದಗಳು- “ತತ್ಸರ್ವಿತುರ್ವರೇಣ್ಯಂ, ಭರ್ಗೋದೇವಸ್ಯ ಧೀಮಹಿ,
ಧಿಯೋ ಯೋನಃ ಪ್ರಚೋದಯಾತ್”. ಮೂರು ಪಾದಗಳಿಂದಾದ ಮೂರು ವರ್ಗ (ಸೂಕ್ತಗಳಲ್ಲಿ
ಶ್ರೇಷ್ಠವಾದ ಪುರುಷ ಸೂಕ್ತದಲ್ಲಿ ಮೂರು ವರ್ಗಗಳಿವೆ. ಒಂದರಿಂದ-ಐದು ಮೊದಲ ವರ್ಗ,
ಆರರಿಂದ-ಹತ್ತು ಎರಡನೇ ವರ್ಗ, ಹನ್ನೊಂದರಿಂದ-ಹದಿನಾರು ಮೂರನೇ ವರ್ಗ).
ಸೂಕ್ತಗಳಿಂದಾದ ಅತ್ಯಂತ ಶ್ರೇಷ್ಠವಾದ ಮೂರು ವೇದಗಳು “ಋಗ್ವೇದ, ಯಜುರ್ವೇದ
ಮತ್ತು ಸಾಮವೇದ”.
ಅದ್ದರಿಂದ ತ್ರಿಕಕುಬ್ಧಾಮ ಅಂದರೆ: ಮೂರು ಲೋಕದಲ್ಲಿ ನೆಲೆಸಿರುವವನು, ಮೂರು
ಲೋಕದಲ್ಲಿರುವ ಮೂರು ನಿತ್ಯ ಸ್ಥಾನದಲ್ಲಿ ನೆಲೆಸಿರುವವನು,ಅಲ್ಲಿ ನೆಲೆಸಿರುವ ಮೂರು
ತೇಜೋಮಯ ಮೂರ್ತಿಗಳಲ್ಲಿ ನೆಲೆಸಿರುವವನು.
ಮೂರು ಅಕ್ಷರಗಳಿಂದಾದ ಓಂಕಾರದಲ್ಲಿ ಪ್ರತಿಪಾದ್ಯನಾದವನು, ಮೂರು
ವ್ಯಾಹುತಿಗಳಿಂದ ವಾಚ್ಯನಾದವನು, ಗಾಯತ್ರಿಯ ಮೂರು ಪಾದಗಳಲ್ಲಿ ವಾಚ್ಯನಾದವನು, ಪುರುಷ
ಸೂಕ್ತದ ಮೂರು ವರ್ಗದಿಂದ ವಾಚ್ಯನಾದವನು
ಮೂರು ವೇದದಿಂದ ವಾಚ್ಯನಾದವನು.
ಒಟ್ಟಾರೆ ತ್ರಿಕಕುಬ್ಧಾಮ ಎಂದರೆ ಮೂರು ಲೋಕದಲ್ಲಿ, ತ್ರಿಮೂರ್ತಿ ರೂಪನಾಗಿ, ಸಮಸ್ತ ಶಬ್ದ ಭಂಡಾರ ಮತ್ತು ಸಮಸ್ತ ಶಾಸ್ತ್ರದಿಂದ ವಾಚ್ಯನಾದ ಭಗವಂತ.
62) ಪವಿತ್ರಂ
ಈ ದೇಹದಿಂದ ಭಗವಂತ ಹೊರಟು ಹೋದ ಮೇಲೆ ಈ ದೇಹ ಅಪವಿತ್ರವಾಗುತ್ತದೆ. ಆದ್ದರಿಂದ
ಎಲ್ಲವನ್ನು ಪವಿತ್ರಗೊಳಿಸುವ ಶಕ್ತಿಯುಳ್ಳವನು "ಪವಿತ್ರ" . ಆದರೆ ಈ ಬೌದ್ಧಿಕ ಶರೀರ
ಸಂಪೂರ್ಣ ಪವಿತ್ರವಲ್ಲ. ದೇಹ ಕೆಸರಿನಲ್ಲಿ ಅರಳಿದ ತಾವರೆಯಂತೆ. ಈ ದೇಹದಲ್ಲಿರುವ ಕೆಸರು
ಅನೇಕ ! ನಿಜವಾದ ಪಾವಿತ್ರ್ಯತೆ ಸಿಗುವುದು ಈ ದೇಹದಿಂದ ಹೊರಟು ಹೋದ ಮೇಲೆ.
ಶಾಶ್ವತವಾದ ಪಾವಿತ್ರ್ಯ ಮೋಕ್ಷದಲ್ಲಿ. ಇಂತಹ ಪವಿತ್ರವಾದ ಮೋಕ್ಷವನ್ನು ಕರುಣಿಸುವ
ಭಗವಂತ "ಪವಿತ್ರಂ"
63) ಮಙ್ಗಲಂ (ಮಂಗಲಂ) ಪರಮ್
ಮಙ್ಗಲಂ ಅಂದರೆ ಕಲ್ಯಾಣ. ಕಲ್ಯಾಣ ಎಂದರೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದು
ಎಂದರ್ಥ. ಸಾಮಾನ್ಯವಾಗಿ ಮಧುವೆಗೆ ಕಲ್ಯಾಣ ಎನ್ನುತ್ತಾರೆ. ಮಧುವೆಯ
ನಂತರ ಧರಿಸುವ ತಾಳಿಯನ್ನು "ಮಂಗಳ ಸೂತ್ರ" ಎನ್ನುತ್ತಾರೆ. ಆದರೆ ಎಲ್ಲಾ ಮಧುವೆಯು
ಮಂಗಲವಲ್ಲ! ಯಾವ ವಿವಾಹದಿಂದ ಗಂಡು ಮತ್ತು ಹೆಣ್ಣು ಎತ್ತರಕ್ಕೆ ಏರುತ್ತಾರೋ
ಅಂತಹ ಮಧುವೆ ಮಾತ್ರ ಕಲ್ಯಾಣ. ನಮ್ಮನ್ನು ಅಧಃಪತನಕ್ಕೆ ಒಯ್ಯುವ ಮಧುವೆ ಅಮಂಗಲ.
ಜನ-ಸಾಮಾನ್ಯರು ಸಾಮಾನ್ಯವಾಗಿ ಸಾವನ್ನು ಅಮಂಗಲ ಎಂದು ತಿಳಿಯುತ್ತಾರೆ. ಆದರೆ ಮೋಕ್ಷ
ಪ್ರಧಾನವಾದ ಸಾವು ಮಂಗಲ. ಆತ್ಮಹತ್ಯೆ ಅಮಂಗಲ.
ತನ್ನೆಲ್ಲ ಕರ್ಮವನ್ನು ಭಗವಂತನಿಗೆ ಅರ್ಪಿಸುವ ಇಹಕರ್ಮ ಮಂಗಲ. (ಪಾಂಡವರು ಮಾಡಿದ
ಕರ್ಮ); ತನ್ನ ಸ್ವಾರ್ಥಕ್ಕಾಗಿ ಮಾಡುವ ಪರಕರ್ಮ ಅಮಂಗಲ. ಕೇವಲ ಮೇಲಕ್ಕೇರುವುದು
ಮಂಗಲವಲ್ಲ, ಕೆಳಕ್ಕೆ ಇಳಿಯದ ದಾರಿಯಲ್ಲಿ ಸಾಗುವುದು ಮಂಗಲ - ಅದೇ ಮೋಕ್ಷ. ಆದ್ದರಿಂದ
ಭಗವಂತ ಮಂಗಲ ಮತ್ತು ನಮ್ಮನ್ನು ಮಂಗಲದತ್ತ ನಡೆಸುವವನು- ಅದ್ದರಿಂದ ಆತ ಮಙ್ಗಲಂ ಪರಮ್.
ಈಶಾನಃ ಪ್ರಾಣದಃ ಪ್ರಾಣೋ ಜ್ಯೇಷ್ಠಃ ಶ್ರೇಷ್ಠಃ ಪ್ರಜಾಪತಿಃ |
ಹಿರಣ್ಯಗರ್ಭೋ ಭೂಗರ್ಭೋ ಮಾಧವೋ ಮಧುಸೂದನಃ || 8 ||
64) ಈಶಾನಃ
ಈಶ ಎಂದರೆ ನಮ್ಮನ್ನು ನಿಯಂತ್ರಿಸುವ ಪರಮ ಶಕ್ತಿಗಳು. ಈಶಾನಃ ಅಂದರೆ ಈ ಪರಮಶಕ್ತಿಗಳ ಒಡೆಯ.
65) ಪ್ರಾಣದಃ
ಪ್ರಾಣ+ದಃ=ಪ್ರಾಣದಃ. ಇಲ್ಲಿ ದಃ ಅನ್ನುವ ಪದಕ್ಕೆ "ಕೊಡುವವನು" ಮತ್ತು
"ಕಸಿದುಕೊಳ್ಳುವವನು" ಎನ್ನುವ ತದ್ವಿರುದ್ದವಾದ ಎರಡು ಅರ್ಥವಿದೆ. ಪ್ರಾಣದಃ ಅಂದರೆ
ನಮಗೆ ಈ ದೇಹದಲ್ಲಿ ಪ್ರಾಣಶಕ್ತಿಯನ್ನು ತುಂಬಿ, ಇಂದ್ರಿಯಗಳನ್ನು ಕೊಟ್ಟು , ಬದುಕಿಗೆ
ಬೇಕಾದ ಕಲೆಯನ್ನು ಕೊಡುವವನು; ಕೊನೆಗೆ ಬೌದ್ಧಿಕ ಶರೀರವನ್ನು ಕಸಿದುಕೊಂಡು,
ಮುಕ್ತಿಯನ್ನು ದಯಪಾಲಿಸುವವನು ಪ್ರಾಣದಃ.
66) ಪ್ರಾಣಃ
ಪ್ರ+ಆ+ಣ= ಪ್ರಾಣ. ‘ಪ್ರ’ ಎಂದರೆ ಪ್ರಕ್ರುಷ್ಟವಾದ, ದುಃಖ ಸ್ಪರ್ಶವಿಲ್ಲದ,
ನಿರ್ದಿಷ್ಟವಾದ. ‘ಆ’ ಎಂದರೆ ಪರಿಪೂರ್ಣನಾದ; ‘ಣ’ ಎಂದರೆ ಅನಂದಮಯನಾದ ಎಂದರ್ಥ.
ಆದ್ದರಿಂದ ಭಗವಂತ ಪ್ರಾಣ. ಇನ್ನು ‘ಆಣ’ ಅಂದರೆ ವಾಗ್ದೇವಿ. ಅದ್ದರಿಂದ ವಾಗ್ದೇವಿಯಲ್ಲಿ
ನೆಲೆಸಿ, ಎಲ್ಲಾ ವೇದವಾಣಿಗಳಲ್ಲಿ ಸನ್ನಿಹಿತನಾಗಿದ್ದು , ಜಗತ್ತಿನ ಎಲ್ಲಾ
ಚೇಷ್ಟೆಗಳನ್ನೂ ನಿಯಂತ್ರಿಸುವ ಭಗವಂತ ಪ್ರಾಣಃ .
67) ಜ್ಯೇಷ್ಠಃ
ಜ್ಯೇಷ್ಠಃ ಎಂದರೆ ಹಿರಿಯ. ಎಲ್ಲಾ ಪ್ರಾಣ ತತ್ವಗಳನ್ನು ಸೃಷ್ಟಿ ಮಾಡಿ ನಿಯಂತ್ರಿಸುವ ಭಗವಂತ-ಜ್ಯೇಷ್ಠ.
68) ಶ್ರೇಷ್ಠಃ
ಶ್ರೇಷ್ಠತೆ ವಯಸ್ಸಿನಿಂದ ಬರುವುದಲ್ಲ. ಕೆಲವರು ಜ್ಞಾನದಲ್ಲಿ ಶ್ರೇಷ್ಠರು, ಕೆಲವರು
ಹಣದಲ್ಲಿ ಶ್ರೇಷ್ಠರು, ಇನ್ನು ಕೆಲವರು ಬಲದಲ್ಲಿ ಶ್ರೇಷ್ಠರು. ಈ ರೀತಿ ಎಲ್ಲಿ ಭಗವಂತನ
ವಿಶಿಷ್ಟವಾದ ತೇಜಸ್ಸಿನ ಸನ್ನಿಧಾನವಿದೆಯೋ ಅಲ್ಲಿ ಶ್ರೇಷ್ಠತೆ ಇರುತ್ತದೆ.
ಇಂತಹ ಶ್ರೇಷ್ಠತೆಯನ್ನು ದಯಪಾಲಿಸುವ ತಂದೆ ಶ್ರೇಷ್ಠಃ
69) ಪ್ರಜಾಪತಿಃ
ಚತುರ್ಮುಖನಿಗೆ ಪ್ರಜಾಪತಿ ಎನ್ನುವ ಹೆಸರಿದೆ. ಅಂತಹ ಚತುರ್ಮುಖನೊಳಗಿದ್ದು ಸಮಸ್ತ ಜೀವಕೋಟಿಯ ಪಾಲನೆ ಮಾಡುವ ಭಗವಂತ ಪ್ರಜಾಪತಿ.
70) ಹಿರಣ್ಯಗರ್ಭಃ
ಇಲ್ಲಿ ಹಿರಣ್ಯ ಎಂದರೆ ಚಿನ್ನ ಅಥವಾ ಬಂಗಾರ ಎನ್ನುವ ಅರ್ಥವನ್ನು ಕೊಡುತ್ತದೆ. ಈ
ಹಿಂದೆ ಬ್ರಹ್ಮಾಂಡವನ್ನು ಕಮಲ ರೂಪದ ಬ್ರಹ್ಮನ ಮೊಟ್ಟೆ ಎಂದು ವರ್ಣಿಸಿರುವುದನ್ನು
ನೋಡಿದ್ದೇವೆ. ಈ ಬ್ರಹ್ಮಾಂಡ ಭಗವಂತನ ಉದರದಿಂದ ನಿರ್ಮಾಣವಾಯಿತು ಎನ್ನುವುದನ್ನು
"ನಾಭಿ-ಕಮಲ" ರೂಪದಲ್ಲಿ ಕಲ್ಪಿಸಲಾಗಿದೆ.
ಕವಿಯ ಕಲ್ಪನೆಯಂತೆ, ಈ ಬ್ರಹ್ಮಾಂಡವನ್ನು ದೂರದಲ್ಲಿ ನಿಂತು ನೋಡಿದರೆ - ನೂರು
ಸೂರ್ಯರು ಒಮ್ಮೆಲೇ ಉದಯಿಸಿದರೆ ಹೇಗೆ ಕಾಣಬಹುದೋ ಹಾಗೆ ಚಿನ್ನದ ಮೊಟ್ಟೆಯಂತೆ ಕಾಣಬಹುದು.
ಇಂತಹ ಅಪೂರ್ವವಾದ ಸೃಷ್ಟಿಯನ್ನು ತನ್ನ ಉದರಲ್ಲಿ ದರಿಸಿರುವವನು ಹಿರಣ್ಯಗರ್ಭ.
71) ಭೂಗರ್ಭಃ
ಇಲ್ಲಿ ಭೂ ಎಂದರೆ ಪ್ರಕೃತಿ ಹಾಗೂ ಭೂಮಿ ಎನ್ನುವ ಅರ್ಥವನ್ನು ಕೊಡುತ್ತದೆ. ಈ
ಪ್ರಕೃತಿಯನ್ನು ಹಾಗೂ ಅದರ ಒಂದು ಭಾಗವಾದ ಭೂಮಿಯನ್ನು ತನ್ನ ಒಡಲಲ್ಲಿ ಹೊತ್ತವನು
ಭೂಗರ್ಭ. ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಸಂಕರ್ಷಣ ಶಕ್ತಿ ಎನ್ನುತ್ತಾರೆ.
ಸಂಕರ್ಷಣ ಆದಿಶೇಷನ ಅನ್ವರ್ಥ ನಾಮ. ಸಂಕರ್ಷಣನೊಳಗಿರುವ ಭಗವಂತ ಈ ಭೂಮಿಯನ್ನು
ನಿಯಮಬದ್ಧವಾಗಿ ಹಿಡಿದಿಟ್ಟು ಕಾಪಾಡುತ್ತಿದ್ದಾನೆ. ಈ ಭೂಮಿಯ ಸೃಷ್ಟಿಕರ್ತ ಹಾಗೂ
ಸಂರಕ್ಷಕನಾದ ಭಗವಂತ ಭೂಗರ್ಭ.
72) ಮಾಧವಃ
'ಮಾ' ಎಂದರೆ ಮಾತೆ ಲಕ್ಷ್ಮಿ, ಆದ್ದರಿಂದ ಮಾಧವ ಎಂದರೆ ಲಕ್ಷ್ಮೀಪತಿ ಭಗವಂತ. ಇನ್ನು
'ಮಾ' ಎಂದರೆ ಜ್ಞಾನ ಕೂಡ ಹೌದು. ಭಗವಂತ ಜ್ಞಾನದ ಒಡೆಯ ಅದ್ದರಿಂದ ಆತ ಮಾಧವ.
ಶ್ರೀಕೃಷ್ಣ ಅವತಾರದಲ್ಲಿ ಭಗವಂತ ಮಧುವಂಶದಲ್ಲಿ ಹುಟ್ಟಿ ಬಂದದ್ದರಿಂದ ಆತನನ್ನು ಮಾಧವ
ಎಂದೂ ಕರೆಯುತ್ತಾರೆ. ವೇದದಲ್ಲಿ ಮಾತೃ ಎನ್ನುವ ಪದವನ್ನು ಮಾತು ಅಥವಾ ವಾಙ್ಮಯ ಎನ್ನುವ
ಅರ್ಥದಲ್ಲಿ ಉಪಯೋಗಿಸಿದ್ದಾರೆ. ಏಳು ಮಹಾನ್ ಗ್ರಂಥಗಳಾದ ಋಗ್ವೇದ, ಯಜುರ್ವೇದ,
ಸಾಮವೇದ, ಅಥರ್ವವೇದ , ರಾಮಾಯಣ, ಮಹಾಭಾರತ ಹಾಗೂ ಪುರಾಣಗಳನ್ನು ಮಾತೃ ಎನ್ನುತ್ತಾರೆ.
ಅದ್ದರಿಂದ ಸಮಸ್ತ ವೈದಿಕ ವಾಙ್ಮಯ ಪ್ರತಿಪಾದ್ಯನಾದ ಭಗವಂತ ಮಾಧವ.
73) ಮಧುಸೂದನಃ
ಮಧು ಎಂದರೆ ಕಾಮ (Sex), ಬಯಕೆ (Desire), ಆನಂದ (Ultimate bliss) ಎನ್ನುವ ಅನೇಕ
ಅರ್ಥವನ್ನು ಕೊಡುತ್ತದೆ. ಕಾಮ(ಮಧು)ವೇ ಕ್ರೋಧ(ಕೈತಪ)ಕ್ಕೆ ಕಾರಣ. ಈ ಮಧು-ಕೈತಪರು
ನಮ್ಮೊಳಗಿದ್ದು ನಮ್ಮೆಲ್ಲ ಕಷ್ಟ-ಕಾರ್ಪಣ್ಯಕ್ಕೆ ಮೂಲ ಕಾರಣಕರ್ತರಾಗಿದ್ದಾರೆ. ಈ
ಮಧು-ಕೈತಪರಿಂದ ನಮಗೆ ಮುಕ್ತಿ ದೊರೆಯಬೇಕಿದ್ದರೆ ನಾವು ಭಗವಂತನ ಮೊರೆ ಹೋಗಬೇಕು.
ಆತನೊಬ್ಬನೇ ಈ ಮಧುವನ್ನು ಸೂದಿಸಬಲ್ಲ (ನಾಶಮಾಡಬಲ್ಲ) . ಇಂತಹ ಭಗವಂತ ಮಧುಸೂದನ.
ಇನ್ನು ಮಧು ಎಂದರೆ ಆನಂದ ಎನ್ನುವ ಅರ್ಥವನ್ನು ವಿಶ್ಲೇಷಿಸಿದಾಗ, ಮಧುಸೂದನ ಎಂದರೆ
ಆನಂದ ನಾಶಕ ಎಂದಾಗುತ್ತದೆ! ಇದೇನಿದು -ಆನಂದ ಸ್ವರೂಪನಾದ ಭಗವಂತ ಆನಂದ ನಾಶಕ
ಅನ್ನುತ್ತಾರಲ್ಲಪ್ಪಾ ಎಂದು ಗಾಬರಿಯಾಗಬೇಡಿ! ಧರ್ಮ ಮಾರ್ಗವನ್ನು ಬಿಟ್ಟು,
ಅಧರ್ಮಿಯಾಗಿ, ಮದ(ಆಹಂಕಾರ)ದಿಂದ ಸಾಗುವವರ ಆನಂದವನ್ನು ನಾಶ ಮಾಡಿ, ಸಜ್ಜನರ ಉದ್ಧಾರ
ಮಾಡುವ ಆನಂದರೂಪಿ ಭಗವಂತ ಮಧುಸೂದನ.
ಈಶ್ವರೋ ವಿಕ್ರಮೀ ಧನ್ವೀ ಮೇಧಾವೀ ವಿಕ್ರಮಃ ಕ್ರಮಃ |
ಅನುತ್ತಮೋ ದುರಾಧರ್ಷಃ ಕೃತಜ್ಞಃ ಕೃತಿರಾತ್ಮವಾನ್ || 9 ||
74) ಈಶ್ವರಃ
ಈಶ್ವರ ಎಂದರೆ ಜಗತ್ತನ್ನು ನಿಯಂತ್ರಿಸುವ ಎಲ್ಲಾ ಶಕ್ತಿಗಳ ಈಶ ಎಂದರ್ಥ.
75) ವಿಕ್ರಮೀ
ಈ ನಾಮದ ವಿಶ್ಲೇಷಣೆ ಮಾಡಲು ನಾವು ಭಗವಂತನ ವಾಮನ ಅವತಾರದ ಕಥೆಯನ್ನು ಒಮ್ಮೆ ಮೆಲುಕು
ಹಾಕಬೇಕಾಗುತ್ತದೆ. ನಿಮಗೆ ತಿಳಿದಿರುವಂತೆ ವಾಮನ ರೂಪಿ ಭಗವಂತ, ಮಹಾ ದಾನಿ
ಬಲಿಚಕ್ರವರ್ತಿಯಲ್ಲಿ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳುತ್ತಾನೆ.
ಶುಕ್ರಾಚಾರ್ಯರ ವಿರೋಧವನ್ನು ಲೆಕ್ಕಿಸದೆ ಬಲಿ ವಾಮನನಿಗೆ ದಾನ ಮಾಡಲು
ಮುಂದಾಗುತ್ತಾನೆ . ಆಗ ವಾಮನನು ತನ್ನ ಮೊದಲ ಹೆಜ್ಜೆಯಿಂದ ಭೂಮಿಯನ್ನೂ ಮತ್ತು ಎರಡನೇ
ಹೆಜ್ಜೆಯಿಂದ ಆಕಾಶವನ್ನು ಆವರಿಸಿದಾಗ , ಮೂರನೇ ಹೆಜ್ಜೆಗೆ ಬಲಿ ತನ್ನ
ತಲೆಯನ್ನು ಅರ್ಪಿಸಿ ಪಾತಳವನ್ನು ಸೇರಿ ಉದ್ಧಾರವಾಗುತ್ತಾನೆ. ಈ ಕಾರಣಕ್ಕಾಗಿ
ಭಗವಂತನನ್ನು 'ತ್ರಿವಿಕ್ರಮ' ಎನ್ನುತ್ತಾರೆ.
ಈ ಕಥೆಯನ್ನು ನಾವು ಸ್ವಲ್ಪ ಆಳವಾಗಿ ವಿಶ್ಲೇಷಿಸಿದರೆ ಈ ರೀತಿ ಅರ್ಥೈಸಬಹುದು.
ಸಂಸಾರ ಸಾಗರದಲ್ಲಿ ಮುಳುಗಿರುವ ನಾವೆಲ್ಲರೂ ಒಂದು ರೀತಿಯಲ್ಲಿ ಬಲಿಗಳು. ಭಗವಂತನ
ಸಾಕ್ಷಾತ್ಕಾರವಾಗಲು ನಾವೆಲ್ಲರೂ ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಬಲಿಷ್ಟರಾಗಬೇಕು.
ಉಪಾಸನೆಯಲ್ಲಿ ಪ್ರಮುಖವಾಗಿ ಮೂರು ಹೆಜ್ಜೆಗಳಿವೆ. ಮೊದಲನೆಯದು ಭಗವಂತನ ಪುಟ್ಟ (ವಾಮನ)
ಮೂರ್ತಿಯನ್ನು ದೇವರು ಎಂದು ಆರಾಧಿಸುವುದು, ಎರಡನೆಯದು ಉಪಾಸನೆ ಮಾಡುತ್ತಾ ಮಾಡುತ್ತಾ ,
ಭಗವಂತ ಕೇವಲ ಮೂರ್ತಿಯಲ್ಲಿ ಅಲ್ಲದೆ, ಇಡೀ ಲೋಕದಲ್ಲಿ ವ್ಯಾಪಿಸಿರುವ ಶಕ್ತಿ ಎಂದು
ತಿಳಿಯುವುದು. ಪ್ರಮುಖವಾದ ಮೂರನೇ ಹೆಜ್ಜೆ- ಭಗವಂತ ಸರ್ವಾಂತರ್ಯಾಮಿ, ಆತ
ನನ್ನೊಳಗೂ ತುಂಬಿದ್ದಾನೆ ಎಂದು ತಿಳಿದು, ಆ ಪರಶಕ್ತಿಗೆ ತಲೆ ಬಾಗುವುದು. ಆಗ
ನಮಗೆ ನಿಜವಾದ ಭಗವಂತನ ಸಾಕ್ಷಾತ್ಕಾರವಾಗುತ್ತದೆ, ಹಾಗೂ ಭಗವಂತ ನಮ್ಮನ್ನು
ಉದ್ಧರಿಸುತ್ತಾನೆ. ಈ ಮೇಲಿನ ಮೂರು ವಿಕ್ರಮಗಳಿಂದ ನಮ್ಮನ್ನು ಉದ್ಧರಿಸುವ ಭಗವಂತ
ವಿಕ್ರಮೀ.
76) ಧನ್ವೀ
ಧನ್ವೀ ಎಂದರೆ ಧನುರ್ಧಾರಿ. ಅಂದರೆ ಧನುಸ್ಸನ್ನು ಕೈಯಲ್ಲಿ ಹಿಡಿದಿರುವವನು. ಇಲ್ಲಿ
ಧನುಸ್ಸು ದುಷ್ಟ ನಿಗ್ರಹದ ಸಂಕೇತ. ಧರ್ಮದ ಸಂಸ್ಥಾಪನೆಗಾಗಿ ಕೈಯಲ್ಲಿ ಆಯುಧ ಹಿಡಿದಿರುವ
ಭಗವಂತ- ಧನ್ವೀ. ಭಗವಂತನಿಗೆ ಯಾವುದೇ ವಿಶೇಷ ಆಯುಧದ ಅಗತ್ಯವಿಲ್ಲ. ಇಲ್ಲಿ
ದುಷ್ಕರ್ಮದ ನಾಶಕನಾಗಿರುವ ಭಗವಂತನನ್ನು ಧನ್ವೀ ಎನ್ನುತ್ತಾರೆ.
77) ಮೇಧಾವೀ
ಮೇಧಾ ಎಂದರೆ ಸ್ಮರಣಶಕ್ತಿ. ಯಾವುದನ್ನು ಕೇಳುತ್ತೆವೋ, ಯಾವುದನ್ನೂ ಓದುತ್ತೇವೋ,
ಅದನ್ನು ಶಾಶ್ವತವಾಗಿ ಮಸ್ತಕದಲ್ಲಿಟ್ಟುಕೊಳ್ಳುವುದು. ಮನಸ್ಸು ಬಯಸುತ್ತದೆ, ಬುದ್ಧಿ
ನಿಶ್ಚಯವಾಗಿ ಗ್ರಹಿಸುತ್ತದೆ, ಚಿತ್ತ ನೆನಪಿಡುತ್ತದೆ. ಗ್ರಹಿಸಿದ ವಿಷಯವನ್ನು
ಶಾಶ್ವತವಾಗಿ ನೆನಪಿನಲ್ಲಿಡುವವರು ಮೇಧಾವಿಗಳು. ಭಗವಂತ ಸ್ವತಃ ಮೇಧಾವಿ ಹಾಗೂ ನಮಗೆ
ಚಿತ್ತವನ್ನು ಕರುಣಿಸುವವ.
78) ವಿಕ್ರಮಃ
ವಿಕ್ರಮ ಎಂದರೆ ಕ್ರಮವಿಲ್ಲದವನು! ಅಂದರೆ ಭಗವಂತನು ಯಾವುದೇ ಕ್ರಮದ ನಿರ್ಭಂಧಕ್ಕೆ ಒಳಗಾಗಿಲ್ಲ. ಅವನು ನಡೆದ ದಾರಿಯೆಲ್ಲವೂ ನಮಗೆ ಕ್ರಮ.
79) ಕ್ರಮಃ
ಮೇಲೆ ಹೇಳಿದಂತೆ ಭಗವಂತ ವಿಕ್ರಮ, ಆತ ನಿರ್ಮಿಸಿರುವ ಈ ಸೃಷ್ಟಿ ಸಂಪೂರ್ಣ
ಕ್ರಮಬದ್ಧವಾಗಿದೆ. ಪ್ರತಿಯೊಂದು ಗ್ರಹದ ಚಲನೆ ಗಣಿತಬದ್ಧವಾಗಿದೆ. ಯಾವಾಗ ಗ್ರಹಣವಾಗಿದೆ,
ಯಾವಾಗ ಗ್ರಹಣವಾಗುತ್ತದೆ ಎನ್ನುವುದನ್ನು ಕರಾರುವಾಕ್ಕಾಗಿ ಗಣಿತದಿಂದ ತಿಳಿಯಬಹುದು.
ಇಂತಹ ಕ್ರಮಬದ್ಧವಾದ ಸೃಷ್ಟಿಯ ಕರ್ತನಾದ ಭಗವಂತ ಕ್ರಮಃ
80) ಅನುತ್ತಮಃ
ಭಗವಂತನ ಹೆಜ್ಜೆ ಆನೆಯ ಹೆಜ್ಜೆಯಂತೆ. ಇತರ ಎಲ್ಲಾ ಹೆಜ್ಜೆಗಳು ಅದರ ವ್ಯಾಪ್ತಿಯ ಒಳಗೆ ಸೀಮಿತ.
ಅನುತ್ತಮ ಎಂದರೆ ಉತ್ತಮರಲ್ಲಿ ಉತ್ತಮ. ಅವನಿಂದ ಉತ್ತಮರು ಯಾರೂ ಇಲ್ಲ. ಅದ್ದರಿಂದ ಆತ ಅನುತ್ತಮ.
81) ದುರಾಧರ್ಷಃ
ಧರ್ಷಣೆಗೆ ನಿಲುಕದೇ ಇರುವುದು ದುರಾಧರ್ಷ. ಭಗವಂತನನ್ನು ನಲುಗಿಸುವುದು,
ವಿಚಲಿತಗೊಳಿಸುವುದು ಅಸಾಧ್ಯ. ಆತ ತನ್ನ ಕ್ರಮದಿಂದ, ತನ್ನ ತೀರ್ಮಾನದಿಂದ, ತನ್ನ
ಸ್ಥಾನದಿಂದ ವಿಚಲಿತಗೊಳ್ಳಲಾರ. ಇಂತಹ ಭಗವಂತ ದುರಾಧರ್ಷ.
82) ಕೃತಜ್ಞಃ
ಮೇಲಿನ ಕೆಲವು ನಾಮಗಳಲ್ಲಿ ನಾವು ಭಗವಂತನಿಗೆ ಕ್ರಮವಿಲ್ಲ, ಅವನ ಕ್ರಮವನ್ನು ಯಾರೂ
ಮೀರಲಾರರು, ಅವನು ಅನುತ್ತಮ, ದುರಾಧರ್ಷ, ಇತ್ಯಾದಿ ಅರ್ಥಗಳನ್ನು ನೋಡಿದೆವು. ಈಗ
ನಮ್ಮಲ್ಲಿ ಒಂದು ಪ್ರಶ್ನೆ ಮೂಡಬಹುದು. ಭಗವಂತ ಏಕೆ ಪಕ್ಷಪಾತಿ? ಒಬ್ಬ ಬಡವ, ಒಬ್ಬ
ಶ್ರೀಮಂತ, ಒಬ್ಬರಿಗೆ ಸುಖ, ಇನ್ನೊಬ್ಬರಿಗೆ ಕಷ್ಟ. ಏಕೆ ಹೀಗೆ? ಈ ಪ್ರಶ್ನೆಗೆ ಉತ್ತರವೇ
ಕೃತಜ್ಞ ನಾಮದ ಅರ್ಥ. ಕೃತಜ್ಞ ಎಂದರೆ ಏನನ್ನೂ ಮರೆಯದೆ ಮರಳಿ ಕೊಡುವವನು ಎಂದರ್ಥ. ನಾವು
ಏನನ್ನು ಮಾಡಿದ್ದೆವೂ, ಆ ಕರ್ಮಕ್ಕನುಗುಣವಾಗಿ ಫಲವನ್ನು ಕೊಡುವ ಭಗವಂತ ಕೃತಜ್ಞ.
83) ಕೃತಿಃ
ಭಗವಂತನ ಜ್ಞಾನ, ಬಲ, ಕ್ರಿಯೆ ಎಲ್ಲವೂ ಆತನ ಸ್ವರೂಪ. ವಿಶ್ವವನ್ನೆಲ್ಲಾ ನಿರ್ಮಿಸಿದ ಕ್ರಿಯಾಸ್ವರೂಪ ಭಗವಂತ ಕೃತಿ.
84) ಆತ್ಮವಾನ್
ಆತ್ಮದ ಸ್ಥೂಲವಾದ ಅರ್ಥ ಶರೀರ. ಭಗವಂತನಿಗೆ ಮಣ್ಣು, ನೀರು ಮತ್ತು ಬೆಂಕಿಯಿಂದಾದ,
ಒಂದು ದಿನ ಬಿದ್ದು ಹೋಗುವ ಶರೀರ ಅಥವಾ ಆಕಾರವಿಲ್ಲ. ಅವನು ವಿಶ್ವಾಕಾರ. ಆತ ಯಾವ
ರೂಪದಲ್ಲಿ ಕೂಡ ಕಾಣಿಸಿಕೊಳ್ಳಬಲ್ಲ. ಜ್ಞಾನ ಆತನ ಸ್ವರೂಪ. ಎಲ್ಲಾ ಆತ್ಮರ ತಂದೆಯಾದ
ಭಗವಂತ ಆತ್ಮವಾನ್.
ಸುರೇಶಃ ಶರಣಂ ಶರ್ಮ ವಿಶ್ವರೇತಾಃ ಪ್ರಜಾಭವಃ |
ಅಹಃ ಸಂವತ್ಸರೋ ವ್ಯಾಲಃ ಪ್ರತ್ಯಯಸ್ಸರ್ವದರ್ಶನಃ || 10 ||
85) ಸುರೇಶಃ
ಸುರರು ಅಂದರೆ ದೇವತೆಗಳು. ಭಗವಂತ ಸುರರ-ಈಶ ಆದ್ದರಿಂದ ಆತ ಸುರೇಶ.
86) ಶರಣಮ್
ಶರಣು ಎಂದರೆ ಮೂಲತಃ ಆಶ್ರಯ ಅನ್ನುವ ಅರ್ಥವನ್ನು ಕೊಡುತ್ತದೆ.
ಆದರೆ ವಾಡಿಕೆಯಲ್ಲಿ ಈ ಅರ್ಥ ತಪ್ಪಿಹೋಗಿ ವಿಪರೀತ ಅರ್ಥದಲ್ಲಿ ಪ್ರಚಲಿತದಲ್ಲಿದೆ.
ಮೂಲ ಅರ್ಥದ ಪ್ರಕಾರ ದೇವರು ನಮಗೆ ಶರಣು ಹೊರತು ನಾವು ದೇವರಿಗೆ
ಶರಣಾಗಲು ಸಾಧ್ಯವಿಲ್ಲ. ಅಂದರೆ ದೇವರೇ ನಮಗೆ ಆಶ್ರಯದಾತ ಹೊರತು ನಾವು ದೇವರಿಗೆ
ಆಶ್ರಯದಾತರಾಗಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲಾ ಜೀವ ಜಂತುಗಳಿಗೂ ಆಶ್ರಯದಾತನಾದ
ಭಗವಂತ ಶರಣು.
87) ಶರ್ಮ
ಶರ್ಮ ಅಂದರೆ ಆನಂದ. ಜ್ಞಾನಾನಂದಮಯನಾದ ಭಗವಂತ ಶರ್ಮ.
88) ವಿಶ್ವರೇತಾಃ
ಭಗವಂತನ ರೇತಸ್ಸಿನಿಂದ ಈ ವಿಶ್ವ ಸೃಷ್ಟಿಯಾದ್ದರಿಂದ ಆತನನ್ನು ವಿಶ್ವರೇತಾ
ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ. ಆದರೆ ಈ ನಾಮಕ್ಕೆ ಇನ್ನೂ ಹೆಚ್ಚಿನ ಅರ್ಥವಿದೆ.
ರೇತನ್ ಅಂದರೆ ಆನಂದ ರೂಪ ಎಂದರ್ಥ. ವಿಶ್ವರೇತಾ ಎಂದರೆ ಜೀವಕೋಟಿಯ ಆನಂದದಲ್ಲಿ
ಪರಿಪೂರ್ಣ ಆನಂದ ರೂಪ ಎಂದರ್ಥ. ರೇತಸ್ಸು ಅಂದರೆ ಸಾರಭೂತವಾದದ್ದು ಎನ್ನುವ ಅರ್ಥವನ್ನೂ
ಕೊಡುತ್ತದೆ. ಆದ್ದರಿಂದ ಇಡೀ ಬ್ರಹ್ಮಾಂಡದಲ್ಲಿ ಸಾರಭೂತನಾಗಿರುವ ಭಗವಂತ ವಿಶ್ವರೇತಾ.
89) ಪ್ರಜಾಭವಃ
ಧರ್ಮದ ಮಾರ್ಗದಲ್ಲಿ, ಜ್ಞಾನದ ಹಸಿವಿನಿಂದ, ಭಗವಂತನಲ್ಲಿ ಶರಣುಕೋರಿ ಬಂದ ಭಕ್ತರನ್ನು
ಪ್ರಜಾ ಎನ್ನುತ್ತಾರೆ. ಭವ ಎಂದರೆ ಆನಂದವನ್ನು ದಯಪಾಲಿಸುವುದು ಎಂದರ್ಥ. ಆದ್ದರಿಂದ
ಪ್ರಜಾಭವ ಎಂದರೆ ಧರ್ಮ ಮತ್ತು ಜ್ಞಾನ ಮಾರ್ಗದಲ್ಲಿರುವವರಿಗೆ ಆನಂದಪ್ರದನಾದ ಭಗವಂತ
ಎಂದರ್ಥ.
90) ಅಹಃ
ಅಹಃ ಅಂದರೆ ಮೇಲ್ನೋಟದ ಅರ್ಥ 'ನಾನು' . ಪ್ರತಿಯೊಂದು ಮಾತಿನಲ್ಲೂ ನಾವು 'ನಾನು'
ಅನ್ನುವ ಪದವನ್ನು ಉಪಯೋಗಿಸುತ್ತೇವೆ. ಈಗ 'ನಾನು' ಅನ್ನುವ ಪದವನ್ನು ಸ್ವಲ್ಪ ಆಳವಾಗಿ
ಯೋಚಿಸಿ. ನಾನು ಅಂದರೆ ನನ್ನ ಕೈ , ಕಾಲು, ತಲೆ,ಹೃದಯ ....... ನನ್ನ ದೇಹ ?? ಅಲ್ಲ !
ನನ್ನ ಉಸಿರು? ಅದೂ ಅಲ್ಲ ! ನನ್ನ ಜೀವ ........?? ಅಲ್ಲ. ಏಕೆಂದರೆ ಈ ಜೀವವನ್ನು
ನೆಡೆಸುವವನು ಯಾರು? ಅವನೇ ಬಿಂಬ ರೂಪಿ ಭಗವಂತ. ಆದ್ದರಿಂದ ಆತ ಅಹಃ . ಒಂದು
ಕೆಲಸವನ್ನು ನಾನು ಮಾಡಿದೆ, ನನ್ನಿಂದಾಯಿತು ಎಂದು ಜಂಬ ಪಡುವ ನಾವು, ಆ "ನಾನು" ಅಂದರೆ
ನನ್ನೊಳಗೆ ಕುಳಿತ ಭಗವಂತ ಅನ್ನುವುದನ್ನು ಸಂಪೂರ್ಣ ಮರೆತಿರುತ್ತೇವೆ!
ಅಹಃ ಅನ್ನುವುದಕ್ಕೆ ಇನ್ನೊಂದು ಅರ್ಥ ಬೆಳಕು. ಅಂದರೆ ಬೆಳಕಿನ ಮೂಲವಾದ ಸೂರ್ಯನಲ್ಲಿ
ತುಂಬಿ ಜಗತ್ತನ್ನು ಬೆಳಗುವವವನು. ಅದ್ದರಿಂದ ಪಿಂಡಾಂಡದಲ್ಲಿ ಬಿಂಬರೂಪಿಯಾಗಿ,
ನಿಸರ್ಗದಲ್ಲಿ ಸೂರ್ಯಕಿರಣ ರೂಪದಲ್ಲಿ ತುಂಬಿರುವ ಭಗವಂತ ಅಹಃ.
91) ಸಂವತ್ಸರಃ
ಸಂವತ್ಸರ ಎಂದರೆ ಸಂಸ್ಕೃತದಲ್ಲಿ ವರ್ಷ ಎಂದು ಅರ್ಥ.ಈ ಒಂದು ಸಂವತ್ಸರದಲ್ಲಿ 360
ಹಗಲು ಹಾಗೂ 360 ರಾತ್ರಿಗಳಿರುತ್ತವೆ. ಇಂತಹ ನೂರು ಸಂವತ್ಸರಗಳು ಮನುಷ್ಯನ ಆಯಸ್ಸು
( 36,000 ಹಗಲು ಹಾಗೂ 36,೦೦೦ ರಾತ್ರಿ). ಮನುಷ್ಯ ದೇಹ 72,000 ನಾಡಿಗಳಿಂದ ಹಾಗೂ
360 ಅಸ್ಥಿಗಳಿಂದ ತುಂಬಿದೆ (ಅದಕ್ಕಾಗಿ ಯಜ್ಞ ಕುಂಡ ತಯಾರಿಸುವಾಗ 360 ಇಟ್ಟಿಗೆಗಳನ್ನು
ಉಪಯೋಗಿಸುತ್ತಾರೆ, 360 ಅಸ್ಥಿಗಳಿಂದ ತುಂಬಿದ ಈ ದೇಹವೇ ಒಂದು ಕುಂಡ). ಈ ಎಲ್ಲಾ
ನಾಡಿಗಳಲ್ಲಿ ತುಂಬಿರುವ ಕಾಲನಿಯಾಮಕನಾದ ಹಾಗೂ ಶರೀರ ನಿಯಾಮಕನಾದ ಭಗವಂತ ಸಂವತ್ಸರ.
92) ವ್ಯಾಲಃ
ನಿಘಂಟಿನಲ್ಲಿ ವ್ಯಾಲ ಅನ್ನುವ ಪದ ಈ ಕೆಳಗಿನ ಅರ್ಥವನ್ನು ಕೊಡುತ್ತದೆ. ಮತ್ತೇರಿದ
ಆನೆ, ಬುಸುಗುಡುವ ಸರ್ಪ ಅಥವಾ ಹೊಂಚು ಹಾಕಿ ಬಲಿತೆಗೆದುಕೊಳ್ಳಲು ಕಾದಿರುವ ಕ್ರೂರ
ವ್ಯಾಘ್ರ !!!!
ಮೇಲಿನ ಅರ್ಥವನ್ನು ಓದಿ ಗಾಬರಿಯಾಗಬೇಡಿ. ಭಗವಂತ ವಿ+ಆ+ಲಾ. ಅಂದರೆ ಎಲ್ಲಾ
ದೋಷಗಳನ್ನು ನಾಶ ಮಾಡುವವನು, ಪ್ರಳಯ ಕಾಲದಲ್ಲಿ ಎಲ್ಲವೂ ಅವನಲ್ಲಿ ಲೀನವಾಗುತ್ತವೆ.
ಮೇಲ್ನೋಟಕ್ಕೆ ಪ್ರಳಯ ಒಂದು ಭಯಂಕರ ಕ್ರಿಯೆ ಆದರೂ ಕೂಡ, ಈ ಕ್ರಿಯೆಯಲ್ಲಿ ಭಗವಂತ
ಎಲ್ಲವನ್ನೂ ಪ್ರೀತಿಯಿಂದ ಸ್ವೀಕರಿಸಿ , ಜೀವಕ್ಕೆ ವಿಶ್ರಾಂತಿ ಕೊಟ್ಟು, ಮರುಸೃಷ್ಟಿ
ಕಾಲದಲ್ಲಿ ಪುನಃ ಜೀವರನ್ನು ಈ ಪ್ರಪಂಚಕ್ಕೆ ಪ್ರೀತಿಯಿಂದ ಕಳುಹಿಸಿಕೊಡುತ್ತಾನೆ !
ಇಂತಹ ಅದ್ಭುತವಾದ ಶಕ್ತಿ-ವ್ಯಾಲ.
93) ಪ್ರತ್ಯಯಃ
ಪ್ರತ್ಯಯ ಎಂದರೆ ಜ್ಞಾನಸ್ವರೂಪನಾಗಿ, ಪ್ರತಿಯೊಂದನ್ನೂ ತಿಳಿದವ ಹಾಗೂ ಪ್ರತಿಯೊಂದರೊಳಗೂ ಇರುವವನು (Omnipresent , Omniscience )
94) ಸರ್ವದರ್ಶನಃ.
ಭಗವಂತ ವಿಶ್ವಚಕ್ಷು, ವಿಶ್ವತೋಮುಖ. ಆತ ಪ್ರತಿಯೊಂದನ್ನೂ ಕಣ್ಣಾರೆ
ಕಾಣುತ್ತಿರುತ್ತಾನೆ. ಅವನಿಂದ ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಸರ್ವ
ವೇದ-ಶಾಸ್ತ್ರಗಳು ಯಾರನ್ನು ವರ್ಣಿಸುತ್ತವೋ ಅಂತಹ ಭಗವಂತ ಸರ್ವದರ್ಶನಃ.
ಅಜಃ ಸರ್ವೇಶ್ವರಃ ಸಿದ್ಧಃ ಸಿದ್ಧಿಃ ಸರ್ವಾದಿರಚ್ಯುತಃ |
ವೃಷಾಕಪಿರಮೇಯಾತ್ಮಾ ಸರ್ವಯೋಗವಿನಿಸ್ಸೃತಃ || 11 ||
95) ಅಜಃ
ಅಜಃ ಅಂದರೆ ಯಾರಿಂದಲೂ ಹುಟ್ಟದವನು ಆದರೆ ಎಲ್ಲರಲ್ಲೂ ಹುಟ್ಟುವವನು ಎಂದರ್ಥ.
ತದ್ವಿರುದ್ದವಾದ ಅರ್ಥ ಎನ್ನುತೀರಾ? ಹೌದು, ಭಗವಂತ ಯಾರಿಂದಲೋ ಹುಟ್ಟಿ
ಬರುವ ವಸ್ತುವಲ್ಲ. ಆದರೆ ಬಿಂಬ ರೂಪನಾಗಿ ಪ್ರತಿಯೊಂದು ಗರ್ಭದಲ್ಲಿ ನೆಲೆಸಿ ಏಕ
ಕಾಲದಲ್ಲಿ ಅನೇಕ ರೂಪಿಯಾಗಿ ಹುಟ್ಟುವವನು. ಗರ್ಭಿಣಿಯ ಹೊಟ್ಟೆ ಹಾಗೂ ದೇವರ ಗುಡಿಯಲ್ಲಿ
ಮುಖ್ಯ ಮೂರ್ತಿ ಇರುವ ಸ್ಥಳ -ಇವೆರಡನ್ನೂ "ಗರ್ಭ" ಎನ್ನುವ ಏಕಪದದಿಂದ ಸಂಬೋದಿಸುತ್ತಾರೆ
(ಬೇರೆ ಪದ ಲಭ್ಯವಿಲ್ಲ ). ದೇವಸ್ಥಾನದ ಗರ್ಭಗುಡಿಯಲ್ಲಿರುವ ಮೂರ್ತಿಯಲ್ಲಿ ಆಹ್ವಾನ
ಮಾಡಿದಾಗ ದೇವರ ಆಗಮನವಾದರೆ, ಗರ್ಭಿಣಿಯ ಗರ್ಭದಲ್ಲಿ ಭಗವಂತ
ಬಿಂಬರೂಪನಾಗಿ ನೆಲಸಿ ಜನಿಸುತ್ತಾನೆ. ಇಂತಹ ಭಗವಂತ ಅಜಃ .
96) ಸರ್ವೇಶ್ವರಃ
ಯಾರು ತನ್ನನ್ನು ಭಕ್ತಿಯಿಂದ ಕರೆಯುತ್ತಾರೂ ಅಂತವರಿಗೆ ಸದಾಕಾಲ ಲಭ್ಯವಿರುವ, ಎಲ್ಲಾ ಈಶ್ವರರ-ಈಶ್ವರ ಸರ್ವೇಶ್ವರ.
97) ಸಿದ್ಧಃ
ಈ ಜಗತ್ತಿನಲ್ಲಿರುವ ಎಲ್ಲಾ ಶಾಸ್ತ್ರ ಹಾಗೂ ವೇದಗಳು ಸರ್ವ ಸಿದ್ಧನಾದ ಭಗವಂತನನ್ನು
ಹಾಗೂ ಅವನ ತತ್ವಗಳನ್ನು ತಿಳಿಸುತ್ತವೆ. ಈ ಎಲ್ಲಾ ವೇದ-ಶಾಸ್ತ್ರಗಳ ಮೂಲನಾಗಿರುವ,
ಭಕ್ತರ ಹೃದಯನಿವಾಸಿ, ಪರಮಪುರುಷಾರ್ಥರೂಪ, ಸದಾ ಏಕ ರೂಪನಾಗಿರುವ ಭಗವಂತ ಸಿದ್ಧಃ.
98) ಸಿದ್ಧಿಃ
ಸಮಸ್ತ ಪುರುಷಾರ್ಥ ಸಿದ್ಧಿ ಯಾರಿಂದ ಆಗುತ್ತದೋ ಅವನು ಸಿದ್ಧಿ. ಸಮಸ್ತ ಕಾರ್ಯಗಳ ಸಿದ್ಧಿದಾಯಕನಾದ ಭಗವಂತ ಸಿದ್ಧಿ.
99) ಸರ್ವಾದಿಃ
ಎಲ್ಲವುದರ ಆದಿ, ಎಲ್ಲವುದರ ಮೊದಲು ಇರುವವ, ಹಾಗೂ ಎಲ್ಲವನ್ನೂ ಸ್ವೀಕರಿಸುವ, ಎಲ್ಲಕ್ಕೂ ಮೂಲ ಕಾರಣ ನಾದ ಭಗವಂತ ಸರ್ವಾದಿ.
100) ಅಚ್ಯುತಃ
ಎಲ್ಲವನ್ನೂ ಸ್ವೀಕರಿಸಿ, ಎಲ್ಲವನ್ನೂ ನಾಶಮಾಡಿ(ಪ್ರಳಯ), ಯಾವುದೇ ಚ್ಯುತಿ ಇಲ್ಲದೇ
ಅನಂತವಾಗಿ ಅಖಂಡವಾಗಿ ಇರುವ, ಎಂದೂ ಕುಂದದ ಗುಣ-ಕ್ರಿಯೆಗಳಿಂದ ನಿತ್ಯ
ಪೂರ್ಣನಾಗಿರುವವನು ಅಚ್ಯುತಃ.
101) ವೃಷಾಕಪಿಃ
ಮೇಲ್ನೋಟಕ್ಕೆ ವೃಶ+ಕಪಿ=ವೃಷಾಕಪಿ, ಅಂದರೆ ನಾವು ಬಾಯಾರಿ ಬಳಲಿದಾಗ ನಮ್ಮ
ಪೀಪಾಸವನ್ನು ತಣಿಸುವವ. (ವೃಶ ಎಂದರೆ ಮಳೆ ಸುರಿಸುವವನು, ಕಪಿ (ಕಂ+ಪಾಯತೆ) -ಅಂದರೆ
ನೀರು ಕುಡಿಸುವವನು).
ವೃಷಾ ಎಂದರೆ 'ಧರ್ಮ ಸ್ವರೂಪ', 'ನಮ್ಮ ಅಭೀಷ್ಟದ ಮಳೆ ಸುರಿಸುವವ', ಎನ್ನುವ
ಅರ್ಥವನ್ನೂ ಕೂಡ ಕೊಡುತ್ತದೆ. ಅಕಪಿ ಎಂದರೆ ದುಃಖ ನಿವಾರಕ ಎಂದರ್ಥ. ಆದ್ದರಿಂದ ವೃಷಾಕಪಿ
ಎಂದರೆ ನಮ್ಮ ಮೇಲೆ ಧರ್ಮದ ಮೂಲಕ ಅಭೀಷ್ಟದ ಮಳೆಗರೆದು, ನಮ್ಮ ಮನಸ್ಸಿನ ದುಃಖ
ದುಗುಡವನ್ನು ನಿವಾರಿಸಿ, ಪೂರ್ಣಾನಂದವನ್ನು ಕೊಟ್ಟು, ತಾನೂ ಪೂರ್ಣಾನಂದವನ್ನು
ಅನುಭವಿಸುವವನು ಎಂದರ್ಥ.
102) ಅಮೇಯಾತ್ಮಾ
ನಮ್ಮ ಮನಸ್ಸು ಬುದ್ಧಿಗೆ ಒಂದು ಸೀಮೆ ಇದೆ. ಅದರಿಂದಾಚೆಗೆ ನಾವು ಗ್ರಹಿಸಲಾರೆವು.
ಭಗವಂತನನ್ನು ನಮ್ಮ ಬುದ್ಧಿಯಿಂದ ಅಳೆಯಲು ಅಸಾಧ್ಯ, ಅದ್ದರಿಂದ ಆತ ಅಮೇಯಾತ್ಮಾ.
ಭಗವಂತನನ್ನು ನಮಗೆ ತಿಳಿಯಲು ಅಸಾಧ್ಯವಾದರೂ ಕೂಡ, ಆತ ಅಣುವಿನಲ್ಲಿ ಅಣುವಾಗಿ ನಮ್ಮೊಳಗೇ
ತುಂಬಿದ್ದಾನೆ. ಆತ ಸೂಕ್ಷ್ಮಾತಿ ಸೂಕ್ಷ್ಮನೂ ಹೌದು. ನಮಗೆ ತಿಳಿದಿರುವುದು ಮಣ್ಣು,
ನೀರು, ಬೆಂಕಿ, ಗಾಳಿ, ಆಕಾಶ, ಹಾಗೂ ಈ ಪಂಚಭೂತಗಳಿಂದಾದ ವಸ್ತುಗಳು ಮಾತ್ರ. ಆದರೆ ಭಗವಂತ
ಇವೆಲ್ಲಕ್ಕಿಂತಲೂ ಬೇರೆ. ನಮ್ಮ ಜೀವಸ್ವರೂಪನಾದ ಭಗವಂತನ ಕಲ್ಪನೆ ನಮಗಿಲ್ಲ.
ಭಗವಂತನನ್ನು ನಮ್ಮ ಒಳಗಣ್ಣಿನಿಂದ ನೋಡುವ ಪ್ರಯತ್ನ ಮಾಡಬೇಕೇ ಹೊರತು, ಹೊರ ಪ್ರಪಂಚದಲ್ಲಿ
ಹುಡುಕಿ ಪ್ರಯೋಜನವಿಲ್ಲ.
103) ಸರ್ವಯೋಗವಿನಿಸ್ಸೃತಃ
ಇಲ್ಲಿ ಯೋಗ ಎಂದರೆ ಸಂಬಂಧ ಅಥವಾ ಉಪಾಯ ಎನ್ನುವ ಅರ್ಥವನ್ನು ಕೊಡುತ್ತದೆ. ನಾವು
ಎಲ್ಲಿ ಇರುತ್ತೇವೂ ಅದರ ಸಂಬಂಧದಲ್ಲಿರುತ್ತೇವೆ. ಭಗವಂತ ಎಲ್ಲಾಕಡೆ ಇದ್ದಾನೆ, ಆದರೆ
ಅವನು ಯಾವುದಕ್ಕೂ ಅಂಟಿಕೊಂಡಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಆಕಾಶ. ಮಣ್ಣು,
ನೀರು, ಬೆಂಕಿ ಅಥವಾ ಗಾಳಿ ಇದನ್ನು ಮುಟ್ಟಿದಾಗ ಅಂಟಿಕೊಳ್ಳುತ್ತದೆ, ಆದರೆ ಆಕಾಶ
ಎಲ್ಲಾಕಡೆ ಇದ್ದರೂ ಕೂಡಾ, ಯಾವುದಕ್ಕೂ ಅಂಟಿಕೊಂಡಿಲ್ಲ. ಭಗವಂತ ಕೂಡ ಹೀಗೆ. ಎಲ್ಲಾಕಡೆ
ಇದ್ದರೂ ಕೂಡ ಯಾವುದನ್ನೂ ಅಂಟಿಸಿಕೊಳ್ಳದವನು. ಇಂತಹ ಭಗವಂತ ಸರ್ವಯೋಗವಿನಿಸ್ಸೃತಃ.
ವಸುರ್ವಸುಮನಾಃ ಸತ್ಯಃ ಸಮಾತ್ಮಾ ಸಂಮಿತಃ ಸಮಃ |
ಅಮೋಘಃ ಪುಂಡರೀಕಾಕ್ಷೋ ವೃಷಕರ್ಮಾ ವೃಷಾಕೃತಿಃ || 12 ||
104) ವಸುಃ
ನಿಘಂಟಿನಲ್ಲಿ ವಸು ಅನ್ನುವ ಪದಕ್ಕೆ ಸಿರಿ ಅಥವಾ ಸಂಪತ್ತು ಅನ್ನುವ ಅರ್ಥವಿದೆ.
ಸಾಮಾನ್ಯವಾಗಿ ಸಿರಿ-ಸಂಪತ್ತು ಅಂದಾಗ ನಮಗೆ ದುಡ್ಡಿನ ನೆನಪಾಗುತ್ತದೆ. ಆದರೆ
ಒಬ್ಬೊಬ್ಬರಿಗೆ ಒಂದೊಂದು ಸಂಪತ್ತು. ನಮಗೆ ಜೀವನದಲ್ಲಿ ಯಾವುದು ಸುಖ-ಸಂತೋಷವನ್ನು
ಕೊಡುತ್ತದೋ ಅದನ್ನು ಸಂಪತ್ತು ಎಂದು ತಿಳಿಯುತ್ತೇವೆ. ಕೆಲವರಿಗೆ ಮಣ್ಣು ಸಂಪತ್ತಾಗಿ
ಕಾಣಿಸಿದರೆ ಇನ್ನು ಕೆಲವರಿಗೆ ಹೆಣ್ಣು-ಹೊನ್ನು ಸಂಪತ್ತು ಎನ್ನುವ ಭ್ರಮೆ ಇರುತ್ತದೆ.
ಆದರೆ ನಿಜವಾದ ಸಂಪತ್ತು ಯಾವುದು? ಯಾವುದನ್ನು ಹಂಚುವುದರಿಂದ ಬೆಳೆಯುತ್ತಾ ಹೋಗಿ
ಸಾವಿರ-ಸಾವಿರ ವರ್ಷಗಳ ತನಕ ಅಜರಾಮರವಾಗಿ ಉಳಿಯುತ್ತದೋ, ಅದು ನಿಜವಾದ ಸಂಪತ್ತು. ಅದೇ
ಜ್ಞಾನ. ಯಾವ್ಯಾವುದೋ ವ್ಯರ್ಥವಾದ ಜ್ಞಾನ ಸಂಪತ್ತಲ್ಲ. ಯಾವುದು
ನಮ್ಮನ್ನು ಉದ್ಧಾರ ಮಾಡುವ ಶಕ್ತಿಯೋ, ಅದರ ಜ್ಞಾನ ನಿಜವಾದ ಸಂಪತ್ತು. ಆದ್ದರಿಂದ
ಜಗತ್ತಿನಲ್ಲಿ ಅತ್ಯಂತ ದೊಡ್ಡ ಸಂಪತ್ತು ಭಗವಂತನ ಜ್ಞಾನ. ಇಂತಹ ಅಪರಿಮಿತ ಸಿರಿಯಾದ
ಭಗವಂತ ವಸುಃ.
105) ವಸುಮನಾಃ
ಇಲ್ಲಿ ವಸುಗಳು ಎಂದರೆ ಭಗವಂತನನ್ನು ಅರಿತವರು. ಮುಖ್ಯವಾಗಿ ದೇವತೆಗಳು ಹಾಗೂ ಯಾರು
ತನ್ನ ಹೃದಯದಲ್ಲಿ ಭಗವಂತ ವಾಸವಾಗಿದ್ದಾನೆ ಎಂದು ತಿಳಿದಿದ್ದಾರೋ ಅವರು ವಸುಗಳು.
ಪರಿಶುದ್ಧವಾದ ಮನಸ್ಸುಳ್ಳವರನ್ನೂ ಕೂಡಾ ವಸುಗಳು ಎನ್ನುತ್ತಾರೆ. ಆದ್ದರಿಂದ
ಪರಿಶುದ್ಧವಾದ, ಸತ್ವಗುಣದಿಂದ, ಅನನ್ಯವಾಗಿ ಪ್ರಾರ್ಥಿಸುವ
'ವಸುಗಳಿಗೆ' ಕಾಣಿಸಿಕೊಳ್ಳುವ ಭಗವಂತ ವಸುಮನಾ.
106) ಸತ್ಯಃ
ಸತ್ಯ ಅನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಸರ್ವಸೃಷ್ಟ, ಸರ್ವ ನಿಯಾಮಕ, ಸರ್ವ
ಸ್ಥಿತಿ ಕಾರಣ , ಸರ್ವ ಸಂಹಾರಕ ಇತ್ಯಾದಿ. ಅದೇ ರೀತಿ ಸತ್ ಅಂದರೆ
ಜ್ಞಾನ-ಅಜ್ಞಾನ-ಬಂಧ-ಮೋಕ್ಷ. ಆದ್ದರಿಂದ ಸತ್ಯಃ ಎಂದರೆ ಸೃಷ್ಟಿಪ್ರದ, ಸ್ಥಿತಿಪ್ರದ,
ಸಂಹಾರಪ್ರದ, ನಿಯಾಮಕ, ಜ್ಞಾನಪ್ರದ, ಅಜ್ಞಾನಪ್ರದ, ಬಂಧಪ್ರದ ಮತ್ತು
ಮೋಕ್ಷಪ್ರದನಾದ ಭಗವಂತ. ಸೃಷ್ಟಿ-ಸ್ಥಿತಿ-ಸಂಹಾರ ನಿಯಾಮಕನಾಗಿ,
ಜ್ಞಾನಾಜ್ಞಾನ-ಬಂದ-ಮೋಕ್ಷಗಳಿಗೆ ಕಾರಣನಾಗಿರುವ, ಸದ್ಗುಣ ಸ್ವರೂಪ
ಜ್ಞಾನಾನಂದಮಯನಾದ ಭಗವಂತ 'ಸತ್ಯಃ'.
107) ಸಮಾತ್ಮಾ
ಭಗವಂತ 'ಸರ್ವೇಶು ಸಮಾತ್ಮಾ' ಎಂದರೆ ಸರ್ವರನ್ನು ಸಮಾನಾಗಿ ತಾರತಮ್ಯ ಇಲ್ಲದೆ ಕಾಣುವವನು.
ಈ ಪ್ರಪಂಚ ಒಂದು ತೋಟವಿದ್ದಂತೆ ಹಾಗೂ ಭಗವಂತ ಒಬ್ಬ ತೋಟಗಾರ. ಈ ಜೀವರು ಬೀಜಗಳು!
ಬೀಜವನ್ನು ಮನೆಯೋಳಗಿಟ್ಟರೆ ಅದು ಫಲ ಕೊಡಲಾರದು, ಅದನ್ನು ಉತ್ತಿ-ಬಿತ್ತಿ ಪಾಲಿಸಿದಾಗ ಆ
ಚಿಕ್ಕ ಬೀಜ ಹೆಮ್ಮರವಾಗಿ ಬೆಳೆಯುತ್ತದೆ ಮತ್ತು ತನ್ನ ಗುಣ ಸ್ವಭಾವದಂತೆ ಫಲವನ್ನು
ಕೊಡುತ್ತದೆ. ಹುಣಸೆ ಹಣ್ಣು ಹುಳಿಯಾಗಿರುವುದಕ್ಕೆ ತೋಟಗಾರ ಕಾರಣನಲ್ಲ, ಅದರ ಗುಣ ಸ್ವಭಾವ
ಕಾರಣ. ಅದೇ ರೀತಿ ಈ ಪ್ರಪಂಚದಲ್ಲಿ ಬೇರೆ ಬೇರೆ ರೀತಿಯ ಜನರನ್ನು ಕಾಣುತ್ತೇವೆ. ಭಗವಂತ
ಒಬ್ಬ ತೋಟಗಾರನಂತೆ ಪ್ರತಿಯೊಬ್ಬರನ್ನು ಪಾಲಿಸಿ ಪೋಷಿಸುತ್ತಾನೆ. ಜೀವರು ಭಗವಂತನ
ಕೃಪೆಯಿಂದ ತನ್ನ ಜೀವ ಸ್ವಭಾವದಂತೆ, ತನ್ನ ಕರ್ಮಫಲದಂತೆ ಬೆಳೆಯುತ್ತಾರೆ. ಭಗವಂತ
ಜೀವರಿಗೆ ಕೊಡುವುದು ಶಿಕ್ಷೆ ಅಲ್ಲ ಶಿಕ್ಷಣ. ಭಗವಂತ ತನ್ನ ಎಲ್ಲಾ ಅವತಾರಗಳಲ್ಲಿ
ಎಲ್ಲಾ ಕ್ರಿಯೆಗಳಲ್ಲಿ ಸಮಾತ್ಮ, ಅದರಲ್ಲಿ ಅಂತರವಿಲ್ಲ. ಭಗವಂತ ಅಖಂಡ. ಅಭಿವ್ಯಕ್ತ
ಮಾತ್ರ ಬೇರೆ ಬೇರೆಯಾಗಿ ಕಾಣುತ್ತದೆ. ಎಲ್ಲರಲ್ಲೂ ಇರುವ ಬಿಂಬ ಒಂದೇ, ಆದರೆ ಪ್ರತಿಬಿಂಬ
ಬೇರೆ ಬೇರೆ. ಇರುವೆ ಒಳಗೆ ಇರುವ ಬಿಂಬ ರೂಪಿ ಭಗವಂತನಿಗೂ ಆನೆಯೊಳಗಿರುವ ಬಿಂಬ ರೂಪಿ
ಭಗವಂತನಿಗೂ ಯಾವುದೇ ರೀತಿ ವ್ಯತ್ಯಾಸವಿಲ್ಲ, ಅಭಿವ್ಯಕ್ತ ಮಾತ್ರ ಬೇರೆ ಬೇರೆ. ಇಂತಹ
ಭಗವಂತ ಸಮಾತ್ಮಾ.
108) ಸಂಮಿತಃ (ಅಸಂಮಿತಃ )
ಮೇಲೆ ಹೇಳಿದಂತೆ ಭಗವಂತ ಸಮಾತ್ಮಾ ಎಂದು ಎಲ್ಲಾ ಜ್ಞಾನಿಗಳು ಬಲ್ಲರು ಆದ್ದರಿಂದ ಆತ
ಸಂಮಿತ. ಅವನು ಎಲ್ಲಾ ಕಡೆ ಸಮನಾಗಿದ್ದರೂ ಕೂಡ ಆತನಿಗೆ ಸಮನಾದವರು ಇನ್ನೊಬ್ಬರಿಲ್ಲ
ಆದ್ದರಿಂದ ಆತ ಅಸಂಮಿತ ಕೂಡ ಹೌದು!!
109) ಸಮಃ
ಸಮಃ ಅನ್ನುವ ಶಬ್ದ ಎಲ್ಲರೂ ಎಲ್ಲಾ ಭಾಷೆಗಳಲ್ಲಿ ಉಪಯೋಗಿಸುವ ಸರ್ವೇಸಾಮಾನ್ಯ ಶಬ್ದ.
ಆದರೆ ಇದು ಭಗವಂತನ ನಾಮ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಸಮ ಎಂದರೆ ಎಲ್ಲರನ್ನು ಏಕ
ರೂಪದಲ್ಲಿ ನೋಡುವವ ಎನ್ನುವುದು ಎಲ್ಲರಿಗೂ ಹೊಳೆಯುವ ಅರ್ಥ. ಈ ಪದವನ್ನು ಒಡೆದರೆ 'ಸ'
ಮತ್ತು 'ಮ' ಎನ್ನುವ ಅಪೂರ್ವ ಅರ್ಥವುಳ್ಳ ಸಂಕ್ಷಿಪ್ತ (Abbreviation) ಪದ ಕಾಣ
ಸಿಗುತ್ತದೆ. ಸ ಎಂದರೆ ಸಾರ, ಮ ಎಂದರೆ ಜ್ಞಾನ ಅಥವಾ ಆನಂದ. ಆದ್ದರಿಂದ ಸಮ ಎಂದರೆ
ಜ್ಞಾನಾನಂದ ಸ್ವರೂಪ ಎಂದರ್ಥ. ಈ ರೀತಿ ಪದಗಳನ್ನು ಒಡೆದಾಗ ವಿಶಿಷ್ಟ ಅರ್ಥ ಕೊಡುವ
ಅಪೂರ್ವ ಭಾಷೆ ಸಂಸ್ಕೃತ. ನೀವು ಕೆಲವು ಆಮಂತ್ರಣ ಪತ್ರಿಕೆಯಲ್ಲಿ 'ಸ-ಕುಟುಂಬ'
ಅನ್ನುವ ಪದವನ್ನು ನೋಡಿರಬಹುದು. ಇಲ್ಲಿ 'ಸ' ಎಂದರೆ ಸಹಿತ ಎಂದರ್ಥ. ಇನ್ನು 'ಮಃ'
ಎಂದರೆ ಮಾತೆ, ಮಾತು, ವಾಚ್ಯ, ಮಾನ ಅಥವಾ ಪ್ರಮಾಣ ಎನ್ನುವ ಹಲವು ಅರ್ಥವನ್ನು
ಕೊಡುತ್ತದೆ. ಆದ್ದರಿಂದ ಸಮಃ ಎಂದರೆ ಸಮಸ್ತ ವೇದವಾಚ್ಯ, ಸಮಸ್ತ ಶಬ್ದ ವಾಚ್ಯ
ಎಂದಾಗುತ್ತದೆ. ಇಂತಹ ಭಗವಂತನ ನಿಜವಾದ
ಅನುಭವವಾಗದೆ ಅವನನ್ನು ಯಾವ ಯುಕ್ತಿಯಿಂದ ತಿಳಿಯಲು ಅಸಾಧ್ಯ. ಒಮ್ಮೆ ಭಗವಂತನನ್ನು ತಿಳಿದ
ಮೇಲೆ ಎಲ್ಲಾ ಯುಕ್ತಿಗಳು ಆತನನ್ನೇ ಹೇಳುತ್ತವೆ. ಇಂತಹ ಭಗವಂತ ಯಾವಾಗಲೂ ಮಾತೆ
ಲಕ್ಷ್ಮೀದೇವಿ ಸಮೇತನಾಗಿ ಇರುತ್ತಾನೆ. ಈ ಎಲ್ಲಾ ಕಾರಣದಿಂದಾಗಿ ಭಗವಂತ ಸಮಃ.
110) ಅಮೋಘಃ
ಮೋಘ ಎಂದರೆ ವ್ಯರ್ಥ, ಅಮೋಘ ಎಂದರೆ ವ್ಯರ್ಥವಲ್ಲದ್ದು. ಯಾರ ಸಂಕಲ್ಪ
ವ್ಯರ್ಥವಾಗುವುದಿಲ್ಲವೋ ಅವನು ಅಮೋಘ. ಭಗವಂತನ ಸಂಕಲ್ಪ ಎಂದೂ ವ್ಯರ್ಥವಾಗಲಾರದು. ಆತನ
ಸಂಕಲ್ಪವನ್ನು ಯಾರಿಂದಲೂ ಬದಲಿಸಲು ಅಸಾಧ್ಯ. ಭಗವಂತ ಈ ಪ್ರಪಂಚವನ್ನು ಏಕೆ ಸೃಷ್ಟಿ
ಮಾಡಿದ? ಅವನಿಗೆ ಇದರಿಂದ ಏನು ಪ್ರಯೋಜನ? ಈ ಪ್ರಪಂಚ ಭಗವಂತನಿಗೆ ಮೋಘ(ವ್ಯರ್ಥ), ಆದರೆ
ನಮಗೆ ಅಮೋಘ! ಈ ಪ್ರಪಂಚವನ್ನು ಭಗವಂತ ಎಲ್ಲಾ ಜೀವರಿಗಾಗಿಯೇ ಸೃಷ್ಟಿ ಮಾಡಿರುವುದು. ಇಂತಹ
ಭಗವಂತ ಅಮೋಘ.
111) ಪುಂಡರೀಕಾಕ್ಷಃ
ಅಮರಕೋಶದಲ್ಲಿ ಪುಂಡರೀಕಾಕ್ಷ ಎಂದರೆ ಬಿಳಿ ತಾವರೆಯಂತಹ ಕಣ್ಣುಳ್ಳವನು ಎಂದಿದೆ,
ಆದರೆ ಪುಂಡರೀಕಾಕ್ಷ ಎಂದರೆ ಕೆಂದಾವರೆಯಂತಹ ಕಣ್ಣುಳ್ಳವನು ಎಂದರ್ಥ. ಭಗವಂತನ ಕಣ್ಣು
ಯಾವಾಗಲೂ ಕೆಂದಾವರೆ ಎಸಳಿನಂತೆ ಅರಳಿ ನಳನಳಿಸುತ್ತಿರುತ್ತದೆ. ಸಾಮಾನ್ಯವಾಗಿ ನಮಗೆ
ಅತ್ಯಂತ ಸಂತೋಷವಾದಾಗ ನಮ್ಮ ಕಣ್ಣು ಅರಳುತ್ತವೆ. ಆದರೆ ಭಗವಂತ ಸದಾ ಸಂತೋಷದ ಬುಗ್ಗೆ.
ಭಗವಂತನ ಕೈಯಲ್ಲಿರುವ ನಾಲ್ಕು ಆಯುಧಗಳಲ್ಲಿ ಪದ್ಮ ಕೂಡಾ ಒಂದು. ಈ ನಾಲ್ಕು ಆಯುಧಗಳು
(ಚಕ್ರ, ಶಂಖ, ಗಧಾ, ಪದ್ಮ) ಕ್ರಮವಾಗಿ ಧರ್ಮ, ಅರ್ಥ, ಕಾಮದ ನಿಯಂತ್ರಣ ಹಾಗೂ
ಮೋಕ್ಷದ ಸಂಕೇತ ವನ್ನು ಸೂಚಿಸುತ್ತವೆ. ಆದ್ದರಿಂದ ಪುಂಡರೀಕ ಎಂದರೆ ಮೋಕ್ಷಪ್ರದಾಯಕ.
ಭಗವಂತನ ಹೊಕ್ಕುಳಿಂದ ಪದ್ಮಕೋಶ ರೂಪದ ಈ ಬ್ರಹ್ಮಾಂಡ ರಚನೆಯಾಗಿದೆ, ಆತ ಅದನ್ನು ತನ್ನ
ಹೃದಯಕಮಲದಲ್ಲಿ ತುಂಬಿಕೊಂಡಿದ್ದಾನೆ. ಇಂತಹ ಭಗವಂತ ಪುಂಡರೀಕಾಕ್ಷ.
112) ವೃಷಕರ್ಮಾ
ಭಗವಂತನ ಈ ನಾಮವನ್ನು ವಿಶ್ಲೇಷಿಸುವ ಮೊದಲು ಭಗವದ್ಗೀತೆಯ ಈ ಕೆಳಗಿನ ಶ್ಲೋಕವನ್ನು ಒಮ್ಮೆ ನೋಡೋಣ .
ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮಧರ್ಮಸ್ಯ ತದಾऽऽತ್ಮಾನಾಂ ಸೃಜಾಮ್ಯಹಮ್ | (ಅ 4- ಶ್ಲೋ 7)
ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಮ್ |
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ|| (ಅ 4- ಶ್ಲೋ 8)
ಧರ್ಮನಾಶವಾದಾಗ, ಧರ್ಮದ ಉದ್ಧಾರಕ್ಕಾಗಿ, ಸಜ್ಜನರನ್ನು ರಕ್ಷಿಸಿ, ದುಷ್ಟರನ್ನು
ಶಿಕ್ಷಿಸಿ, ಧರ್ಮ ಸ೦ಸ್ಥಾಪನೆ ಮಾಡುಲು ಪದೇ ಪದೇ ಅವತರಿಸಿಬರುತ್ತೇನೆ ಎನ್ನುವುದು ಈ
ಶ್ಲೋಕದ ಮುಖ್ಯಾರ್ಥ.
ವೃಷ ಅಂದರೆ ಧರ್ಮ. ವೃಷಕರ್ಮಾ ಎಂದರೆ ಧರ್ಮಕ್ಕಾಗಿ ಕರ್ಮ ಮಾಡುವ ಭಗವಂತ. ಧರ್ಮ
ಸ೦ಸ್ಥಾಪನೆಗಾಗಿ ಪದೇ ಪದೇ ಅವತರಿಸಿಬರುವುದು ಭಗವಂತನ ಕರ್ಮ. ಈ ರೀತಿ ಅವತರಿಸಿ ಬಂದು
ಭಕ್ತಕೋಟಿಯ ಅಭೀಷ್ಟವನ್ನು ಪೂರೈಸಿ ಧರ್ಮದ ರಕ್ಷಣೆ ಮಾಡುವ ಶ್ರೇಷ್ಠ ಭಗವಂತ ವೃಷಕರ್ಮಾ.
113) ವೃಷಾಕೃತಿಃ
ಮೇಲೆ ಹೇಳಿದಂತೆ ಭಗವಂತ ಅವತರಿಸಿ ಬರುತ್ತಾನೆ. ಈ ರೀತಿ ಧರ್ಮದ ರಕ್ಷಣೆಗಾಗಿ ನಾನಾ
ಆಕೃತಿಯಲ್ಲಿ ಧರೆಗಿಳಿದು ಬರುವ ಭಗವಂತ ವೃಷಾಕೃತಿ. ಆತ ಧರಿಸುವ ಎಲ್ಲಾ ಆಕೃತಿಗಳು ಆತನ
ಭಕ್ತಕೋಟಿಯ ಅಭೀಷ್ಟಕ್ಕೆ ತಕ್ಕನಾಗಿರುತ್ತದೆ. ಈ ರೀತಿ
ಭಕ್ತರ ಕೋರಿಕೆಯಂತೆ ವಿಶಿಷ್ಟ ಆಕೃತಿಯನ್ನು ಧರಿಸುವ ಭಗವಂತ ವೃಷಾಕೃತಿಃ
ರುದ್ರೋ ಬಹುಶಿರಾ ಬಭ್ರುರ್ವಿಶ್ವಯೋನಿಃ ಶುಚಿಶ್ರವಾಃ |
ಅಮೃತಃ ಶಾಶ್ವತಃ ಸ್ಥಾಣುರ್ವರಾರೋಹೋ ಮಹಾತಪಾಃ || 13 ||
114) ರುದ್ರಃ
ರುದ್ರ ಎಂದರೆ ಮೇಲ್ನೋಟಕ್ಕೆ ದುಃಖ ಕೊಡುವವನು, ಸುಡುವವನು ಎನ್ನುವ ಅರ್ಥವನ್ನು ಕೊಡುತ್ತದೆ.
ವೇದಗಳಲ್ಲಿರುವ ರುದ್ರಸೂಕ್ತಗಳಿಗೆ ಸಾಯಣರು ಅರ್ಥ ಬರೆಯುವಾಗ, ರುದ್ರ ಎಂದರೆ
ಅಗ್ನಿ ಎಂದು
ಬರೆಯುತ್ತಾರೆ. ಮುಟ್ಟಿದರೆ ಕಣ್ಣೀರು ಬರುವುದು ಪಂಚಭೂತಗಳಲ್ಲಿ ಅಗ್ನಿಯಿಂದ ಮಾತ್ರ.
ಆದ್ದರಿಂದ ಅಗ್ನಿ ಕೂಡ ರುದ್ರ. ಆದರೆ ಭಗವಂತ ಏಕೆ ದುಃಖ ಕೊಡುತ್ತಾನೆ? ಭಗವಂತ ದುಃಖ
ಕೊಡುವುದು ಪಾಪಿಗಳಿಗೆ ಮಾತ್ರ. ದುಃಖ ಕೊಡುವ ಉದ್ದೇಶ ಶಿಕ್ಷಣ.
ಇನ್ನು ಈ ಪದವನ್ನು ಒಡೆದು ನೋಡಿದಾಗ ರುಕ್+ದ್ರಾ, ಇಲ್ಲಿ 'ರುಕ್' ಎಂದರೆ ಭವರೋಗ,
ಹಾಗೂ 'ದ್ರಾ' ಎಂದರೆ ನಾಶಕ ಅಥವಾ ಪಾರುಮಾಡುವವನು ಎಂದರ್ಥ . ಆದ್ದರಿಂದ ರುದ್ರ ಎಂದರೆ
ಭವರೋಗ ನಾಶಕ. ಈ ನಾಮವನ್ನು ನಾವು ರುತ್+ದ್ರಾ ಎಂದೂ ಒಡೆದು ಅರ್ಥೈಸಬಹುದು. ಇಲ್ಲಿ
ರುತ್ ಎಂದರೆ ದುಃಖ. ಆದ್ದರಿಂದ ರುದ್ರ ಅಂದರ ದುಃಖನಾಶಕ.
115) ಬಹುಶಿರಾಃ
‘ಸಹಸ್ರ ಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್ ಎಂದು ಭಗವಂತನನ್ನು
ಪುರುಷಸೂಕ್ತದಲ್ಲಿ ವರ್ಣಿಸಿದ್ದಾರೆ. ಇಲ್ಲಿ ಬಹುಶಿರ ಎಂದರೆ ಸಹಸ್ರ-ಸಹಸ್ರ
ಶಿರಸ್ಸನ್ನು ಹೊಂದಿರುವವನು ಎಂದರ್ಥ. ಈ ಹಿಂದೆ ಹೇಳಿದಂತೆ ಭಗವಂತ ಬಿಂಬ ರೂಪಿಯಾಗಿ
ಪ್ರತಿಯೊಂದೂ ಜೀವರಲ್ಲಿ ತುಂಬಿದ್ದಾನೆ. ಆದ್ದರಿಂದ ಆತ ಬಹುಶಿರಾ.
ತಲೆಯನ್ನು ಐದು ಶ್ರೀಗಳು (ಚಕ್ಷು-ಕಣ್ಣು,
ಶ್ರೋತ್ರ-ಕಿವಿ, ಮನಃ-ಮನಸ್ಸು , ವಾಕ್-ಮಾತು, ಪ್ರಾಣ-ಉಸಿರು)
ಆಶ್ರಿಸಿರುವುದರಿಂದ ಅದನ್ನು ಶಿರಸ್ಸು ಎನ್ನುತ್ತಾರೆ. ಭಗವಂತ ಸರ್ವಾಶ್ರಯದಾತ
ಆದ್ದರಿಂದ ಆತ ಬಹುಶಿರಾ.
116) ಬಭ್ರುಃ
ಈ ನಾಮ ಭಗವಂತನ ಚಿದಾನಂದ ಸ್ವರೂಪವನ್ನು ಹೇಳುತ್ತದೆ. ಭಗವಂತ ಉದಿಸುವ ಸೂರ್ಯನಂತೆ
ನಸುಗೆಂಪು ಬಣ್ಣದವನು, ಆತ ನೀಲಮೇಘಶ್ಯಾಮ. ಸಾಮಾನ್ಯವಾಗಿ ದೇವಸ್ತಾನಗಳಲ್ಲಿ ಮೂರ್ತಿ
ಕಪ್ಪಗಿದ್ದು (ನೀಲ), ಪ್ರಭಾವಳಿ ಚಿನ್ನದಿಂದ ಮಾಡಿರುತ್ತಾರೆ. ಇಲ್ಲಿ ನೀಲ
ಅಘಾದತೆಯನ್ನು, ಅನಂತತೆಯನ್ನು ಸೂಚಿಸುತ್ತದೆ. ನಸುಗೆಂಪು ಜ್ಞಾನಾನಂದದ ಸಂಕೇತ. ಬಭ್ರು
ಎನ್ನುವುದು ಬಲಸ್ವರೂಪ(ಬ), ಪೂರ್ಣಕಾಮ(ಭ್ರು-ಸರ್ವ ಕಾಮನೆಗಳನ್ನು
ಈಡೇರಿಸುವವನು), ಎನ್ನುವ ಅರ್ಥವನ್ನೂ ಕೊಡುತ್ತದೆ. ಇಂತಹ ಅಗಾಧ, ಅನಂತ, ಜ್ಞಾನಾನಂದಮಯ,
ಬಲಸ್ವರೂಪ ಮತ್ತು ಪೂರ್ಣಕಾಮನಾದ ಭಗವಂತ ಬಭ್ರು.
117) ವಿಶ್ವಯೋನಿಃ
ಸಂಸ್ಕೃತದಲ್ಲಿ ಯೋನಿ ಎಂದರೆ ಕಾರಣ ಕರ್ತ. ಇಡೀ ವಿಶ್ವಕ್ಕೆ ಕಾರಣಪುರುಷನಾದ ಭಗವಂತ ವಿಶ್ವಯೋನಿ.
118) ಶುಚಿಶ್ರವಾಃ
ಶ್ರವಸ್ಸು ಎಂದರೆ ಕೀರ್ತಿ. ಭಗವಂತ ಪುಣ್ಯಕೀರ್ತಿ. ಪವಿತ್ರವಾದ
ಕೀರ್ತಿಯುಳ್ಳ ಭಗವಂತನನ್ನು ಎಲ್ಲರೂ ಕೀರ್ತನೆ ಮಾಡುತ್ತಾರೆ. ಭಗವಂತನ ಗುಣ ಕೀರ್ತನ
ಶ್ರವಣದಿಂದ ನಾವು ಪವಿತ್ರವಾಗುತ್ತೇವೆ. ಇಂತಹ ಪವಿತ್ರವಾದ ಹಾಗೂ ನಮ್ಮನ್ನು ಪವಿತ್ರ
ಮಾಡುವ ಭಗವಂತ ಶುಚಿಶ್ರವಾ.
119 ) ಅಮೃತಃ
ಅಮೃತಃ ಅಂದಾಗ ನಮಗೆ ತಕ್ಷಣ ಹೊಳೆಯುವುದು 'ಎಂದೆಂದೂ ಸಾವಿಲ್ಲದವರು' ಎನ್ನುವ ಅರ್ಥ.
ಸಾಮಾನ್ಯವಾಗಿ ಸಂಸ್ಕೃತದಲ್ಲಿ ಮನುಷ್ಯರನ್ನು ಮರ್ತ್ಯರು ಎಂದು ಕರೆಯುತ್ತಾರೆ. ಅಂದರೆ
ಒಂದು ದಿನ ಸಾಯುವವರು ಎಂದರ್ಥ. ಈ ಸಾವಿನಲ್ಲಿ ನಾಲ್ಕು ವಿಧ.
೧. ಸ್ವರೂಪ ನಾಶ. ಅಂದರೆ ಮಣ್ಣಿನಿಂದ ಮಾಡಿದ ಮಡಿಕೆ ಕೈಜಾರಿ ಬಿದ್ದಾಗ ಅದರ ಸ್ವರೂಪವಾದ ಆಕಾರ ನಾಶವಾಗುತ್ತದೆ.
೨. ದೇಹ ನಾಶ. ಅಂದರೆ ನಮ್ಮ ದೇಹದಿಂದ ಪ್ರಾಣ ಪಕ್ಷಿ ಹಾರಿ ಹೋದಮೇಲೆ ನಮ್ಮ ದೇಹ ನಾಶವಾಗುತ್ತದೆ.
೩. ದುಃಖ ಪ್ರಾಪ್ತಿ. ದುಃಖ ಕೂಡಾ ಒಂದು ರೀತಿಯ ಸಾವು.
೪. ಅಪೂರ್ಣತೆ (Imperfection is death)
ಆದರೆ ಭಗವಂತ ಈ ನಾಲ್ಕು ರೀತಿಯ ನಾಶವಿಲ್ಲದ ನಿತ್ಯ ಸ್ವರೂಪ. ಆದ್ದರಿಂದ ಆತ ಅಮೃತ.
ಉಪನಿಷತ್ತುಗಳು ಹೇಳುವಂತೆ ಭಗವಂತನಿಗೆ ಮೂರು ಸ್ಥಾನಗಳಿವೆ. ಅಮೃತ, ಕ್ಷೇಮ ಹಾಗೂ ಅಭಯ.
ಇಂತಹ ಅಮೃತ ಸ್ಥಾನದಲ್ಲಿರುವ ಭಗವಂತ ಅಮೃತಃ.
ದೇವತೆಗಳ ಆಯಸ್ಸು ಅತೀ ದೀರ್ಘ, ಅದರಲ್ಲೂ ವಾಯುದೇವರ ಮತ್ತು ಚತುರ್ಮುಖನ ಆಯಸ್ಸು
ಮತ್ತೂ ದೀರ್ಘ. ಈ ರೀತಿ ಪ್ರಾಣದೇವರಿಗೆ, ಚತುರ್ಮುಖನಿಗೆ, ದೇವತೆಗಳಿಗೆ,
ಮುಕ್ತಿ ಪಡೆದ ಜೀವರಿಗೆ, ಅಮರತ್ವವನ್ನು ಕರುಣಿಸಿದ, ಲಕ್ಷ್ಮೀ ಪತಿ ಭಗವಂತ ಅಮೃತಃ.
120) ಶಾಶ್ವತಸ್ಥಾಣು
ಶಾಶ್ವತ ಎಂದರೆ ಎಂದೆಂದೂ ಬದಲಾವಣೆ ಹೊಂದದೆ, ಒಂದೇ ರೀತಿಯಾಗಿ ಇರುವವನು ಎಂದರ್ಥ.
ಸ್ಥಾಣು ಎಂದರೆ ಸ್ಥಿರ. ನಮಗೆ ಬಾಲ್ಯ, ಯವ್ವನ, ಪ್ರೌಢ ಹಾಗೂ ವೃದ್ದಾಪ್ಯ, ಹೀಗೆ ಒಂದು
ರೂಪದಲ್ಲಿ ಅನೇಕ ಬದಲಾವಣೆಗಳಿವೆ. ಆದರೆ ಭಗವಂತ ಬಿಂಬ ರೂಪನಾಗಿ ಎಲ್ಲರ
ಒಳಗೂ-ಹೊರಗೂ ತುಂಬಿದ್ದರೂ ಸಹ, ಆತನಿಗೆ ಯಾವುದೇ ತರಹದ ವಿಕಾರವಿಲ್ಲ. ಅವನು ಶಾಶ್ವತ
ಮತ್ತು ಸ್ಥಿರ(ಸ್ಥಾಣು).
121) ವರಾರೋಹಃ
ಯಾರು ತನ್ನ ಸಾಧನೆ ಮೂಲಕ ಮೋಕ್ಷಕ್ಕೆ ಅರ್ಹರಾಗುತ್ತಾರೋ, ಅಂತವರನ್ನು
ಮೇಲಕ್ಕೆತ್ತುವವ ವರಾರೋಹ. ವರಂ-ಆರೋಹತಿ, ಅಂದರೆ ಯಾರು ಯಾವ ಪದವಿಗೆ ಅರ್ಹರೋ,
ಅಂತವರನ್ನು ಆ ಪದವಿಗೇರಿಸುವವ. ಬ್ರಹ್ಮನಿಗೆ ಸತ್ಯಲೋಕದ ಪದವಿ, ಇಂದ್ರನಿಗೆ ದೇವ ಲೋಕದ
ಪದವಿಯನ್ನು ಕರುಣಿಸಿ, ಸ್ವತಃ ತಾನು ಲಕ್ಷ್ಮಿ ಸಮೇತನಾಗಿ ನಿತ್ಯಲೋಕದ ಅಧಿಪತಿ
ಎನಿಸಿರುವ ಭಗವಂತ ವರಾರೋಹ.
122) ಮಹಾತಪಾಃ
ಯಾವುದೇ ವಿಷಯವನ್ನು ಆಳವಾಗಿ ಚಿಂತಿಸಿ ತಿಳಿಯುವುದು ತಪಸ್ಸು. ಪ್ರತಿಯೊಬ್ಬರ
ಆವಿಷ್ಕಾರ ಅವರ ತಪಸ್ಸಿನ ಫಲ. ತಪಸ್ಸಿಗೆ ವೇಷ ಮುಖ್ಯವಲ್ಲ, ಆದರೆ ಆಳವಾದ
ಚಿಂತನೆ ಅತ್ಯಗತ್ಯ. ಕಾಮ-ಕ್ರೋಧಗಳನ್ನು ಗೆದ್ದು, ಪ್ರಶಾಂತಚಿತ್ತದಿಂದ, ವಿಷಯವನ್ನು
ಆಳವಾದ ಚಿಂತನೆ ಮೂಲಕ ತಿಳಿದುಕೊಳ್ಳುವುದು ನಿಜವಾದ ತಪಸ್ಸು.
ಸಾಮಾನ್ಯವಾಗಿ ಕಾಮವನ್ನು ಗೆಲ್ಲುವುದು ಸುಲಭ. ಆದರೆ ಕ್ರೋಧವನ್ನು ಗೆಲ್ಲುವುದು
ತುಂಬಾ ಕಷ್ಟ. ನಮಗೆ ಕೋಪ ಬರಲು ಕಾರಣ ನಮ್ಮಲ್ಲಿ ಹುದುಗಿರುವ ಅಪೇಕ್ಷೆ, ಕಳೆದು
ಕೊಳ್ಳುತ್ತೇನೆ ಎನ್ನುವ ಭಯ. ಮಹಾನ್ ಋಷಿ ಮುನಿಗಳು ಕೋಪವನ್ನು ಗೆಲ್ಲಲಿಲ್ಲ. ಉದಾಹರಣೆಗೆ
ವಿಶ್ವಾಮಿತ್ರ . ಮೇನಕೆಯ ಪ್ರೇಮ ಪಾಶದಿಂದ ಹೊರಬಂದ ವಿಶ್ವಾಮಿತ್ರ ಪುನಃ ತಪಸ್ಸು
ಮಾಡುತ್ತಾನೆ. ಆಗ ರಂಬೆ ಆತನ ತಪಸ್ಸನ್ನು ಕೆಡಿಸಲು ಬರುತ್ತಾಳೆ. ಸಿಟ್ಟಿಗೆದ್ದ
ವಿಶ್ವಾಮಿತ್ರ "ನೀನು ಕಲ್ಲಾಗು" ಎಂದು ಆಕೆಗೆ ಶಾಪ ಕೊಡುತ್ತಾನೆ.. ಇಲ್ಲಿ ಆತ ಕಾಮಕ್ಕೆ
ಸಮಾನಾದ ಕ್ರೋಧವನ್ನು ಗೆಲ್ಲದೆ ಸೋಲುತ್ತಾನೆ . ಭಗವಂತ ನಿಜವಾದ ತಪಸ್ಸು ಹೇಗಿರಬೇಕು
ಎನ್ನುವುದನ್ನು ಸ್ವತಃ ಲೋಕಕ್ಕೆ ತೋರಿಸಿರುವ ಘಟನೆ ನಮಗೆ ತಿಳಿದಿದೆ. ಧರ್ಮ ಮತ್ತು
ಮೂರ್ತಿಯ ಮಕ್ಕಳಾದ ನರ-ನಾರಾಯಣರ ದೀರ್ಘ ತಪಸ್ಸು, ಎಲ್ಲಾ ಋಷಿ-ಮುನಿಗಳಿಗೆ ಒಂದು ಅಮೂಲ್ಯ
ದೃಷ್ಟಾಂತ. ನರ-ನಾರಾಯಣರ ತಪಸ್ಸನ್ನು ಕೆಡಿಸಲು ಬಂದ ತಿಲೋತ್ತಮೆಯನ್ನು, ಆದರದಿಂದ
ಸತ್ಕರಿಸಿದ ನಾರಾಯಣ, ತನ್ನ ತೊಡೆಯಿಂದ ಉರ್ವಶಿಯನ್ನು ಸೃಷ್ಟಿ ಮಾಡಿ, ಇಂದ್ರನಿಗೆ
ಕಾಣಿಕೆಯಾಗಿ ಕಳುಹಿಸುತ್ತಾನೆ. ಕಾಮ ಮತ್ತು ಕ್ರೋಧವನ್ನು ಸಂಪೂರ್ಣ ಗೆದ್ದು, ತಪಸ್ಸಿನ
ಮೂಲಕ ನಾವು ಕಂಡುಕೊಳ್ಳುವ ಪರಬ್ರಹ್ಮ ಶಕ್ತಿಯಾದ ಭಗವಂತ ಮಹಾತಪಾಃ.
ತಪಸ್ಸಿನ ಅಭಿಮಾನಿ ದೇವತೆ ಶಿವ(ಹರ). ಹರಿ-ಹರ ಶಕ್ತಿಗಳು ಹಾಲಿನಲ್ಲಿ ಬೆಣ್ಣೆ
ಇರುವಂತೆ. ಶಿವ ಶಕ್ತಿ ಭಗವಂತನ ಹೃದಯದಿಂದ ಆವಿಷ್ಕಾರವಾಗಿರುವುದು. ಇಂತಹ ಭಗವಂತನನ್ನು
ಮಹಾತಪಾ ಎನ್ನುತ್ತೇವೆ.
ಸರ್ವಗಃ ಸರ್ವವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ |
ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್ ಕವಿಃ || 14 ||
123) ಸರ್ವಗಃ
ಸರ್ವಗಃ ಎಂದರೆ ಎಲ್ಲಾ ಕಡೆ ಇರುವ, ಪರಿಪೂರ್ಣ ಜ್ಞಾನವುಳ್ಳ, ಎಲ್ಲವನ್ನೂ ತಿಳಿದಿರುವ, ಕೊನೆಗೆ ಎಲ್ಲವನ್ನೂ ಸಂಹಾರ ಮಾಡುವ ಭಗವಂತ.
124) ಸರ್ವವಿದ್ಭಾನುಃ
ಸರ್ವವಿತ್+ಭಾನು. ಇಲ್ಲಿ ಸರ್ವವಿತ್ ಎಂದರೆ ಎಲ್ಲವನ್ನೂ ಪಡೆದ ಸತ್ಯಸಂಕಲ್ಪ
ಆಪ್ತಕಾಮ. ಭಾನು ಎಂದರೆ ಎಲ್ಲಾ ಬೆಳಕನ್ನು ಬೆಳಗಿಸುವ ಮೂಲ ಕಾರಣನಾದ ಸೂರ್ಯ.
ಸರ್ವವಿದ್ಭಾನುಃ ಎಂದರೆ ಸತ್ಯಸಂಕಲ್ಪ ಹಾಗೂ ಎಲ್ಲಾ ಬೆಳಕನ್ನು ಪ್ರೇರೇಪಿಸುವ ಮೂಲ
ಬೆಳಕು.
125) ವಿಷ್ವಕ್ಸೇನಃ
ಭಗವಂತನ ಕಣ್ಣು ತಪ್ಪಿಸಿ ಏನನ್ನೂ ಮಾಡಲು ಸಾಧ್ಯವಿಲ್ಲ. ಆತನ ಸೇನೆ ಪ್ರಪಂಚದ ಮೂಲೆ
ಮೂಲೆಗಳಲ್ಲಿ, ಅಂಡಾಂಡ-ಪಿಂಡಾ೦ಡಗಳಲ್ಲಿ, ಇಡೀ ಬ್ರಹ್ಮಾಂಡದಲ್ಲಿ ವ್ಯಾಪಿಸಿ ನಿಂತಿದೆ.
ಭಗವಂತ ನಮ್ಮ ಹೃತ್ಕಮಲದಲ್ಲಿ ನೆಲೆಸಿದ್ದಾನೆ, ಹಾಗೂ ಆತನ ಸುತ್ತ ಅವನ ಪರಿವಾರ
ದೇವತೆಗಳು ವ್ಯಾಪಿಸಿದ್ದಾರೆ. ಕಣ್ಣಿನಲ್ಲಿ ಸೂರ್ಯ, ಕಿವಿಯಲ್ಲಿ ಚಂದ್ರ ,
ಮೂಗಿನಲ್ಲಿ ವಾಯು, ನಾಲಿಗೆಯಲ್ಲಿ ವರುಣ, ಬಾಯಲ್ಲಿ ಅಗ್ನಿ, ಕೈಯಲ್ಲಿ ಇಂದ್ರ,
ಕಾಲಲ್ಲಿ ಜಯಂತ, ಹೀಗೆ ಸಮಸ್ತ ಇಂದ್ರಿಯಗಳಲ್ಲಿ ಭಗವಂತನ ಸೇನೆ ತುಂಬಿದೆ. ಪಂಚಭೂತಗಳಿಂದ
ಮತ್ತು ಪಂಚ ಕೋಶಗಳಿಂದ (ಅನ್ನಮಯ ಕೋಶ, ಪ್ರಾಣಮಯ ಕೋಶ ,ವಿಜ್ಞಾನಮಯ ಕೋಶ, ಮನೋಮಯ ಕೋಶ
ಹಾಗೂ ಆನಂದಮಯ ಕೋಶ) ಆದ ನಮ್ಮ ದೇಹದಲ್ಲಿ ನೆಲೆಸಿರುವ ಎಲ್ಲಾ ದೇವತೆಗಳನ್ನು,
ಪುಂಡರೀಕಾಕ್ಷನಾಗಿ, ಲಕ್ಷ್ಮಿ ಜೊತೆಗಿದ್ದು, ಆ ಭಗವಂತ ನಿಯಂತ್ರಿಸುತ್ತಿರುತ್ತಾನೆ.
ಸೂರ್ಯಮಂಡಲದಲ್ಲಿದ್ದು, ಸೂರ್ಯ ಕಿರಣದೊಂದಿಗೆ ಈ ಬ್ರಹ್ಮಾಂಡದಲ್ಲಿ
ವ್ಯಾಪಿಸಿರುವ ಭಗವಂತನನ್ನು ವಿಷ್ವಕ್ಸೇನ ಎನ್ನುತ್ತಾರೆ.
126) ಜನಾರ್ದನಃ
ಜನ+ಅರ್ದನ-ಜನಾರ್ದನ. ಇಲ್ಲಿ ಅರ್ದನ ಎಂದರೆ ಕೊನೆಗೊಳಿಸುವವನು ಎನ್ನುವ ಅರ್ಥವನ್ನು ಕೊಡುತ್ತದೆ.
'ಜನ' ಅನ್ನುವ ಪದಕ್ಕೆ ಅನೇಕ ಅರ್ಥಗಳಿವೆ.
೧. ಜನ ಎಂದರೆ ದುರ್ಜನ. ಜನಾರ್ದನ ಎಂದರೆ ದುರ್ಜನ ನಾಶಕ.
೨. ಜನ ಎಂದರೆ ಜನನ ಉಳ್ಳವರು. ಜನಾರ್ದನ ಎಂದರೆ ಜನನ ಮುಕ್ತಗೊಳಿಸುವವನು ಅಂದರೆ ಮುಕ್ತಿಪ್ರದಾಯಕ.
೩. ಜನ ಎಂದರೆ ದೇಹ. ಜನಾರ್ದನ ಎಂದರೆ ಜೀವರಿಗೆ ದೇಹದಿಂದ ಮುಕ್ತಿ ಕೊಡುವವನು.
೪. ಜನ ಎಂದರೆ ಸಜ್ಜನ. ಜನಾರ್ದನ ಎಂದರೆ ಸಜ್ಜನರ ಪ್ರಾರ್ಥನೆ ಸ್ವೀಕರಿಸಿ ಅವರ ಅಭೀಷ್ಟವನ್ನು ಪೂರೈಸುವವನು.
127) ವೇದಃ
ಭಗವಂತ ಸಮಸ್ತ ವೇದಗಳಿಂದ ಪ್ರತಿಪಾದ್ಯನಾದವನು. ಅವನು ಆನಾದಿನಿತ್ಯ, ಎಲ್ಲವನ್ನೂ
ತಿಳಿದವನು, ಎಲ್ಲವನ್ನು ನಮಗೆ ತಿಳಿಯುವಂತೆ ಮಾಡುವವನು, ನಮಗೆ ಜ್ಞಾನದ ಜೊತೆಗೆ
ಸ್ಮರಣಶಕ್ತಿ ದಯಪಾಲಿಸುವ ಭಗವಂತ ವೇದಃ
128) ವೇದವಿತ್
ಭಗವಂತ ಗೀತೆಯಲ್ಲಿ ತಾನೇ ಹೇಳುವಂತೆ, ಆತ ಮಾತ್ರ ವೇದದ ಸಂಪೂರ್ಣ
ಅರ್ಥವನ್ನು ತಿಳಿದವನು. ವೇದಗಳಲ್ಲಿ ಭಗವಂತನ ಅನಂತ ಗುಣಗಳನ್ನು ಹೇಳಿದ್ದಾರೆ. ಆದರೆ
ನಮಗೆ ಎಲ್ಲವೂ ಅರ್ಥವಾಗುವುದಿಲ್ಲ. ಏಕೆಂದರೆ ನಮ್ಮ ಬುದ್ಧಿ ಸೀಮಿತ ಮತ್ತು
ಅನುಭವವಿಲ್ಲದೆ ಯಾವುದೂ ಅರ್ಥವಾಗುವುದಿಲ್ಲ. ವೇದಮಂತ್ರಗಳಿಗೆ ಕನಿಷ್ಠ ಮೂರು
ಅರ್ಥಗಳಿವೆ. ಆದರೆ ಎಲ್ಲವನ್ನೂ ತಿಳಿದವನು ಕೇವಲ ಭಗವಂತನೊಬ್ಬನೆ. ಸಾಮಾನ್ಯರಾದ ನಾವು
ನಮ್ಮ ಜೀವಿತ ಕಾಲದಲ್ಲಿ ವೇದದ ಅಲ್ಪ-ಸ್ವಲ್ಪ ಅರ್ಥವನ್ನು ಮಾತ್ರ ತಿಳಿಯಲು ಸಾಧ್ಯ. ಈ
ರೀತಿ ವೇದದ ಸಂಪೂರ್ಣ ಅರ್ಥವನ್ನು ತಿಳಿದ ಭಗವಂತ ವೇದವಿತ್.
129) ಅವ್ಯಂಗಃ .
ಮೇಲ್ನೋಟಕ್ಕೆ ಅವ್ಯಂಗ ಎಂದರೆ ಪರಿಪೂರ್ಣವಾದ ಅಂಗ ಎಂದರ್ಥ. ಇಲ್ಲಿ ವ್ಯಂಗ ಎಂದರೆ
ವಿಕಲಾಂಗ. ಭಗವಂತನ ಒಂದೊಂದು ಅಂಗವೂ ಅವನ ಸ್ವರೂಪ, ಆದ್ದರಿಂದ ಆತ ಅವ್ಯಂಗ. ಇನ್ನು
'ಅವಿ' ಎಂದರೆ ಸೂರ್ಯ, 'ಅವಿಹಿ' ಎಂದರೆ ಅಗ್ನಿ. ಸೂರ್ಯ ಆಕಾಶದಲ್ಲಿ , ವಾಯು
ಉಸಿರಿನಲ್ಲಿ ಹಾಗೂ ಅಗ್ನಿ ಭೂಮಿಯಲ್ಲಿ ಭಗವಂತನ ಮೂರು ಜ್ಯೋತಿರ್ಮಯ ಸ್ವರೂಪಗಳು. ಹಿಂದೆ
ಋಷಿಗಳು ಸಾಮಾನ್ಯವಾಗಿ ಭಗವಂತನನ್ನು ಸೂರ್ಯನಲ್ಲಿ ಉಪಾಸನೆ ಮಾಡುತ್ತಿದ್ದರು. ಅಗ್ನಿ
ಮುಖೇನ ಉಪಾಸನೆ ಸರ್ವೇ ಸಾಮಾನ್ಯ. ಆದ್ದರಿಂದ ಗಾಯತ್ರಿ ಹೀಗೆ ಹೇಳುತ್ತದೆ:
ಓಂ ಭೂರ್ಭುವಃ ಸ್ವಃ | ತತ್ಸವಿತುರ್ವರೇಣ್ಯಂ |
ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ||
ಹೀಗೆ ಮೂರು ರೂಪದಲ್ಲಿ ಜಗತ್ತನ್ನು ರಕ್ಷಣೆ ಮಾಡುವ ಭಗವಂತ ಅವ್ಯಂಗಃ .
130) ವೇದಾಂಗಃ
ವೇದಗಳ ಅಂಗಗಳು ಯಾರನ್ನು ಪ್ರತಿಪಾದಿಸುತ್ತವೆಯೋ ಅವನು ವೇದಾಂಗ. ಈಗ ವೇದದ ಆರು
ಮುಖ್ಯ ಅಂಗಗಳನ್ನು ನೋಡೋಣ.
೧. ಶಿಕ್ಷಾ : ಶಿಕ್ಷಾ ಎಂದರೆ ಶಿಕ್ಷಣ. ನಮ್ಮ ಧ್ವನಿಯಿಂದ ನಮ್ಮ
ಅನುಭವದಿಂದ ವೇದಮಂತ್ರಗಳನ್ನು ಉಚ್ಚರಿಸುವುದು ಹೇಗೆ ಎಂದು ತಿಳಿಸುವ
ಶಾಸ್ತ್ರ-ಶಿಕ್ಷಾ. ಸಂಸ್ಕೃತದಲ್ಲಿ ನಾವು ಉಚ್ಛಾರವನ್ನು ಸ್ವಲ್ಪ ತಪ್ಪಾಗಿ
ಹೇಳಿದರೆ ಅದು ವ್ಯತಿರಿಕ್ತ ಅರ್ಥವನ್ನು ಕೊಡುತ್ತದೆ. ಉದಾಹರಣೆಗೆ ಫಲ ಮತ್ತು ಪಲ.
ಇಲ್ಲಿ ಫಲ ಎಂದರೆ ಹಣ್ಣು, ಪಲ ಎಂದರೆ ಮಾಂಸ. ಆದ್ದರಿಂದ ನಾವು ತುಂಬಾ ಎಚ್ಚರವಾಗಿ
ವೇದಮಂತ್ರಗಳನ್ನು ಉಚ್ಚರಿಸಬೇಕು. ಇದಕ್ಕಾಗಿ ತಪ್ಪನ್ನು ಕ್ಷಮಿಸುವಂತೆ ಪ್ರಾಯಶ್ಚಿತ
ಮಂತ್ರವನ್ನು ಜಪದ ಕೊನೆಗೆ ಹೇಳುತ್ತೇವೆ.
ಸ್ವರ ವರ್ಣ ಲೋಪ ದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯಮಂತ್ರಜಪಂ ಕರಿಷ್ಯೇ-ಎಂದು ಹೇಳಿ, ಈ ಕೆಳಗಿನಂತೆ ಮೂರು ಬಾರಿ ಹೇಳುತ್ತೇವೆ.
| ಅಚ್ಯುತಾಯ ನಮಃ | ಅನಂತಾಯ ನಮಃ | ಗೋವಿಂದಾಯ ನಮಃ |
|ಅಚ್ಯುತಾನಂತ ಗೋವಿಂದೇಭ್ಯೋ ನಮಃ | .
೨. ಕಲ್ಪ: ಕಲ್ಪ ಯಾವ ಮಂತ್ರವನ್ನು ಯಾವ ವಿಧಾನದಲ್ಲಿ ಉಪಯೋಗಿಸಿ ಆರಾಧನೆ ಮಾಡಬೇಕು ಎನ್ನುವುದನ್ನು ತಿಳಿಸುತ್ತದೆ.
೩. ವ್ಯಾಕರಣ: ಶಬ್ದವನ್ನು ಸರಿಯಾಗಿ ಉಚ್ಛಾರ ಮಾಡುವುದಕ್ಕೆ ಬೇಕಾದ ಅಂಶಗಳನ್ನು ವ್ಯಾಕರಣ ತಿಳಿಸುತ್ತದೆ.
೪. ನಿರುಕ್ತ: ಶಬ್ದವನ್ನು ಒಡೆದಾಗ ಅದು ಯಾವ ಯಾವ ಧಾತುವಿನಿಂದ ಹುಟ್ಟಿದೆ, ಅದರ ಅರ್ಥ ವಿಸ್ತಾರ ಏನು ಎನ್ನುವುದನ್ನು ನಿರುಕ್ತ ತಿಳಿಸುತ್ತದೆ.
೫. ಜ್ಯೋತಿಷ: ಜ್ಯೋತಿಷ -ಪುಣ್ಯ ಕರ್ಮ ಮಾಡಲು ಯಾವ ಕಾಲ ಹೆಚ್ಚು ಪ್ರಾಶಸ್ತ್ಯವಾದ
ಕಾಲ ಎಂದು ತಿಳಿಸುತ್ತದೆ. ವಾತಾವರಣದಲ್ಲಿ ಕೆಲವೊಮ್ಮೆ ಪ್ರತಿಬಂಧಕ ಶಕ್ತಿಗಳಿರುತ್ತವೆ
ಹಾಗೂ ಇನ್ನು ಕೆಲವೊಮ್ಮೆ ಅನುಕೂಲಕರ ಶಕ್ತಿಗಳಿರುತ್ತವೆ. ವಾತಾವರಣದಲ್ಲಿ ಅನುಕೂಲಕರ
ಶಕ್ತಿಗಳಿರುವಾಗ ಮಾಡಿದ ಕರ್ಮ ಕೈಗೂಡುತ್ತದೆ. ಇದನ್ನು ತಿಳಿಸುವ ಶಾಸ್ತ ಜ್ಯೋತಿಷ.
೬. ಛಂದಸ್ಸು: ಭಗವಂತನ ಗುಣಗಾನ ಮಾಡುವ ಮಂತ್ರಗಳು ಶೃತಿಬದ್ಧವಾಗಿ, ಲಯಬದ್ಧವಾಗಿ ಹೇಗೆ ಹೇಳಬೇಕು ಎನ್ನುವುದನ್ನು ಛಂದಸ್ಸು ತಿಳಿಸುತ್ತದೆ.
ಆದ್ದರಿಂದ ಈ ಮೇಲಿನ ಆರು ಅಂಶಗಳು ವೇದದಲ್ಲಿ ಯಾರಿಗೋಸ್ಕರ ಇವೆಯೋ ಅವನು ವೇದಾಂಗಾ.
131) ವೇದವಿತ್
ಈ ನಾಮ ಒಂದೇ ಶ್ಲೋಕದಲ್ಲಿ ಎರಡನೇ ಬಾರಿ ಬಂದಿದೆ. ಇಲ್ಲಿ ವೇದ ಎಂದರೆ ಜ್ಞಾನ ಹಾಗೂ
ವಿತ್ ಎಂದರೆ ಜ್ಞಾನಿ. ಭಗವಂತ ಜ್ಞಾನವುಳ್ಳವನೂ ಹೌದು, ಹಾಗೂ ಜ್ಞಾನ
ಸ್ವರೂಪನೂ ಹೌದು. ಜ್ಞಾನವೂ ಅವನೇ, ಜ್ಞಾನಿಯೂ ಅವನೇ. ವೇದವನ್ನು ನಮಗೆ ಋಷಿ-ಮುನಿಗಳ
ಮೂಲಕ ಕೊಟ್ಟವನು ಮತ್ತು ವೇದಗಳಿಂದ ಪ್ರತಿಪಾದ್ಯನಾದವನು ವೇದವಿತ್.
132) ಕವಿಃ
ನಾವು ದೇವರ ಪೂಜೆ ಪ್ರಾರಂಭದಲ್ಲಿ ಗಣಪತಿ ಸ್ತೋತ್ರ ಹೇಳುತ್ತೇವೆ.
"ಗಣಾನಾಂ ತ್ವಾ ಗಣಪತಿಂ ಹವಾಮಹೇ, ಕವಿಂ ಕವೀನಾಂ ಉಪಮಶ್ರಮವಸ್ತಮಂ" ಎನ್ನುವ ಗಣಪತಿ
ಸ್ತೋತ್ರದಲ್ಲಿ ಗಣಪತಿಯನ್ನು ಕವಿಗಳ ಕವಿ ಎಂದು ವರ್ಣಿಸಿದ್ದಾರೆ. ಅದೇ ರೀತಿ "ಗಣಗಳಲ್ಲಿ
ಶ್ರೇಷ್ಠನಾದ, ಕವಿಗಳ ಕವಿಯಾದ ನೀನು ನನ್ನಲ್ಲಿ ಬಂದು ಕೂಡು" ಎಂದು
ಪೂಜೆ ಪ್ರಾರಂಭದಲ್ಲಿ ಹೇಳುತ್ತೇವೆ. ಏನಿದರ ಅರ್ಥ? ಭಗವಂತನನ್ನು ಗಣಪತಿ ಎಂದು ಕರೆಯಲು
ಕಾರಣವೇನು? ಪೂಜೆಯನ್ನು ಗಣಪತಿ ಸ್ತೋತ್ರದಿಂದ ಯಾಕೆ ಪ್ರಾರಂಭಿಸಬೇಕು?
ಗಣಪತಿ ಆಕಾಶ ತತ್ವ ದೇವತೆ. ಆತ ಜೀವಗಣ, ಇಂದ್ರಿಯಗಣ, ಜ್ಞಾನಗಣ ಮತ್ತು ಭೂತಗಣ. ಇಡೀ
ವಿಶ್ವ ಆಕಾಶದಿಂದ ಪ್ರಾರಂಭವಾಗುತ್ತದೆ. ಗಣಪತಿ ಪಂಚಭೂತಗಳ ಒಡೆಯ. ಪಂಚಭೂತಗಳಿಂದಾದ ಈ
ನಮ್ಮ ದೇಹ ಮತ್ತು ಇಂದ್ರಿಯಗಳ ಅದಿಪತಿ ಆತ. ಇಂದ್ರಿಯಗಳ ಒಡೆಯನಾದ ಆತನನ್ನು ಮೊದಲು
ಸ್ಮರಿಸಿ, "ಬಾರಯ್ಯ , ನನ್ನ ಇಂದ್ರಿಯಗಳಲ್ಲಿ ಕುಳಿತು, ನನ್ನ ಕೈಯಿಂದ ನಿನ್ನ
ಪೂಜೆಯನ್ನು ಮಾಡುವಂತೆ, ನನ್ನ ಕಣ್ಣಿನಿಂದ ನಿನ್ನನ್ನು ನೋಡುವಂತೆ, ನನ್ನ
ಬಾಯಿಯಿಂದ ನಿನ್ನ ಗುಣಗಾನ ಮಾಡುವಂತೆ ಮಾಡು. ಎಂದು ಪ್ರಾರ್ಥಿಸಿ ಕೊಳ್ಳುತ್ತೇವೆ.
ಭಗವಂತ ಅನಾದಿಕವಿ ಹಾಗೂ ಚತುರ್ಮುಖ ಬ್ರಹ್ಮ ಆದಿಕವಿ. ಇಲ್ಲಿ ಕವಿ ಎಂದರೆ ಎಲ್ಲವನ್ನೂ ಬಲ್ಲವನು (omniscient) ಎಂದರ್ಥ.
ಇದಲ್ಲದೆ ಇನ್ನೂ ಅನೇಕ ಅರ್ಥ ಕವಿ ಎನ್ನುವ ಪದಕ್ಕಿದೆ. ಶಬ್ದ ಸೃಷ್ಟಿಮಾಡುವವನು,
ಶಬ್ದಾರ್ಥ ಸಂಬಂಧ ತಿಳಿದವನು, ಶಬ್ದಗಳಿಗೆ ಹೊಸ ಆಯಾಮ ಕೊಡುವವನು ಇತ್ಯಾದಿ.
ಜನಸಾಮಾನ್ಯರಾದ ನಾವು ದೈನಂದಿನ ಕಾರ್ಯದಲ್ಲಿ ಅನೇಕ ಶಬ್ದಗಳನ್ನು ಅರ್ಥ ತಿಳಿಯದೇ
ಉಪಯೋಗಿಸುತ್ತೇವೆ. ನಮ್ಮ ಈಗಿನ ಶಿಕ್ಷಣ ಪದ್ದತಿ ಕೂಡ ಇದಕ್ಕೆ ಮೂಲ ಕಾರಣ.
ಉದಾಹರಣೆಗೆ ಪತ್ರ ಬರೆಯುವಾಗ, "ನಾನು ಕ್ಷೇಮ, ನಿಮ್ಮ ಯೋಗ-ಕ್ಷೇಮದ ಬಗ್ಗೆ ತಿಳಿಸಿ"
ಎಂದು ಬರೆಯುತ್ತೇವೆ. ಇಲ್ಲಿ ಯೋಗ-ಕ್ಷೇಮ ಎಂದರೆ ಏನು ಎನ್ನುವುದು ನಮ್ಮಲ್ಲಿ
ಹೆಚ್ಚಿನವರಿಗೆ ತಿಳಿದೇ ಇಲ್ಲ!! ಇಲ್ಲದ್ದನ್ನು ಪಡೆಯುವುದು ಯೋಗ (ಅಪ್ರಾಪ್ತಂ
ಪ್ರಾಪ್ತಿಹೀ ಯೋಗಃ ). ಪಡೆದದ್ದನ್ನು ಉಳಿಸಿಕೊಳ್ಳುವುದು ಕ್ಷೇಮ. ಶಬ್ದದ ಅಂತರಾಳದ
ಅರ್ಥವನ್ನು ಅರಿತು ಮಾತನಾಡುವವರು ಕವಿಗಳು. ಭಗವಂತ ಕವಿಗಳ ಕವಿ, ಸರ್ವನಾಮರೂಪಾತ್ಮಕನಾದ
ಸರ್ವಜ್ಞ. ಸಂಸ್ಕೃತದ ಏಕಾಕ್ಷರ ಕೋಶದಲ್ಲಿ ನೋಡಿದರೆ ಆ ,ಕ, ಯ, ಪ್ರ, ವಿ, ಸಂ,
ಭೂ, ಮಾ, ಸಾ , ಹಾ .. ಇತ್ಯಾದಿ ಏಕಾಕ್ಷರಗಳು ಭಗವಂತನ ಗುಣವನ್ನು ವರ್ಣಿಸುತ್ತವೆ.
ಇಲ್ಲಿ 'ಕ' ಎಂದರೆ ಆನಂದ, 'ವ' ಎಂದರೆ ಜ್ಞಾನ, 'ವಿ' ಎಂದರೆ ವಿಶಿಷ್ಟವಾದ ಜ್ಞಾನ.
ಆದ್ದರಿಂದ ಕವಿ ಎಂದರೆ 'ವಿಶಿಷ್ಟವಾದ ಜ್ಞಾನಾನಂದ ಸ್ವರೂಪ'.
ಲೋಕಾಧ್ಯಕ್ಷಃ ಸುರಾಧ್ಯಕ್ಷೋ ಧರ್ಮಾಧ್ಯಕ್ಷಃ ಕೃತಾಕೃತಃ |
ಚತುರಾತ್ಮಾ ಚತುರ್ವ್ಯೂಹಶ್ಚತುರ್ದಂಷ್ಟ್ರಶ್ಚತುರ್ಭುಜಃ. || 15 ||
ಈ ಶ್ಲೋಕದಲ್ಲಿ ಭಗವಂತನನ್ನು ಅಧ್ಯಕ್ಷ ಎನ್ನುತ್ತಾರೆ. ಇಲ್ಲಿ ಅಧ್ಯಕ್ಷ ಎಂದರೆ
ಎಲ್ಲರನ್ನೂ ನೋಡುವವ, ಎಲ್ಲರ ಮೇಲೆ ನಿಗಾ ಇರಿಸುವವ,
ಪ್ರತಿಯೊಂದು ಕ್ರಿಯೆಯನ್ನು ನಿರ್ವಹಿಸುವವ ಎಂದರ್ಥ.
133) ಲೋಕಾಧ್ಯಕ್ಷಃ
ಭಗವಂತ ಲೋಕಾಧ್ಯಕ್ಷ. ಇಲ್ಲಿ ಲೋಕ ಎಂದರೆ ಈ ಭೂಲೋಕ, ಈ ಬ್ರಹ್ಮಾಂಡ, ಈ ಪಿಂಡಾ೦ಡ. ಆತ ಎಲ್ಲವುದರ ಅಧ್ಯಕ್ಷ.
134) ಸುರಾಧ್ಯಕ್ಷಃ
ಸುರರು ಎಂದರೆ ದೇವತೆಗಳು. ಈ ಬ್ರಹ್ಮಾಂಡ
ಹಾಗೂ ಪಿಂಡಾ೦ಡದಲ್ಲಿ ಅನೇಕ ದೇವತೆಗಳಿದ್ದಾರೆ. ಈ ಹಿಂದೆ ಹೇಳಿದಂತೆ, ನಮ್ಮ ದೇಹದ ಒಳಗೆ
ಹಾಗೂ ಹೊರಗೆ ದೇವತೆಗಳು ಭಗವಂತನ ನಿಯಮದಂತೆ ಎಲ್ಲವನ್ನು ನಿಯಂತ್ರಿಸುತ್ತಿರುತ್ತಾರೆ.
ದೇಹದ ಹೊರಗೆ ಸೂರ್ಯ ಬೆಳಕಿನ ದೇವತೆಯಾದರೆ, ಆತನೇ ದೇಹದಲ್ಲಿ ಕಣ್ಣಿನ ದೇವತೆ.
ಸೋಮ ದೇಹದ ಹೊರಗೆ ಶಬ್ದದ ದೇವತೆ ಹಾಗೂ ದೇಹದಲ್ಲಿ ಕಿವಿಯ ದೇವತೆ. ವರುಣ ನೀರಿನ ದೇವತೆ
ಹಾಗೂ ಬಾಯಲ್ಲಿ ನೀರೂರಿಸುವ ನಾಲಗೆಯ ಅಭಿಮಾನಿ ದೇವತೆ. ಇದೇ ರೀತಿ ಅಗ್ನಿ-ಮಾತಿನ,
ಇಂದ್ರ-ಕೈಯ, ಇಂದ್ರನ ಮಗ ಯಜ್ಞ-ಕಾಲಿನ, ಯಮ-ಮಲಮೂತ್ರ ವಿಸರ್ಜನಾಂಗದ ಮತ್ತು ದಕ್ಷ
ಸಂತಾನಕ್ಕೆ ಸಂಬಂಧಪಟ್ಟ ಅಂಗದ ದೇವತೆ. ಇವರಲ್ಲದೆ ಇಂದ್ರ ಮತ್ತು ಕಾಮರು ಮನಸ್ಸಿನ,
ಗರುಡ-ಶೇಷ-ರುದ್ರರು ಮನಸ್ಸು-ಬುದ್ಧಿ-ಅಹಂಕಾರದ ದೇವತೆಗಳು.
ಸರಸ್ವತಿ-ಭಾರತಿ-ಪಾರ್ವತಿಯರು ವಾಕ್ ದೇವಿಯರು. ಇನ್ನು ಬ್ರಹ್ಮ-ವಾಯು ಚಿತ್ತದ
ದೇವತೆಗಳು. ಈ ರೀತಿ ದೇಹದ ಪ್ರತಿಯೊಂದು ಇಂದ್ರಿಯ ನಿರ್ವಹಣೆ ಒಬ್ಬೊಬ್ಬ ದೇವತೆಗಳ
ಅಧೀನ. ಇಂತಹ ಸುರರ ಅದಿಪತಿಯಾದ ಭಗವಂತ ಸುರಾಧ್ಯಕ್ಷ.
135) ಧರ್ಮಾಧ್ಯಕ್ಷಃ
ಭಗವಂತನ ಪ್ರತೀ ಅವತಾರ ಈ ಭೂಮಿಯಲ್ಲಿ ಧರ್ಮಸಂಸ್ಥಾಪನೆಗಾಗಿ ಆಗಿದೆ. ಇಡೀ ಲೋಕವನ್ನು
ಧಾರಣೆ ಮಾಡಿ ಈ ಭೂಮಿಯಲ್ಲಿ ಧರ್ಮ ಸಂಸ್ಥಾಪನೆ ಮಾಡಿದ ಭಗವಂತ ಧರ್ಮಾಧ್ಯಕ್ಷ.
ಇನ್ನು ಆದಿಶೇಷ ಮತ್ತು ಪ್ರಾಣದೇವರನ್ನೂ ಕೂಡ ಧರ್ಮ ಎನ್ನುತ್ತಾರೆ. ದೇಹದ ಒಳಗೆ
ಪ್ರಾಣಶಕ್ತಿಯಾಗಿ, ದೇಹದ ಹೊರಗೆ ವಾತಾವರಣದಲ್ಲಿ ತುಂಬಿರುವ ಪ್ರಾಣದೇವರು, ಭೂಮಿಯ
ಆಕರ್ಷಣ ಶಕ್ತಿಯಾದ(Gravity) ಸಂಕರ್ಷಣ(ಶೇಷ). ಇವರಿಬ್ಬರ ಮುಖಾಂತರ ಈ ಭೂಮಿಯನ್ನು
ಧಾರಣೆ ಮಾಡಿರುವ ಭಗವಂತ ಧರ್ಮಾಧ್ಯಕ್ಷ.
136) ಕೃತಾಕೃತಃ
ಎರಡು ತದ್ವಿರುದ್ದ ಅರ್ಥವಿರುವ ಪದಗಳಿಂದ ಈ ನಾಮವಾಗಿದೆ. ಒಂದು ಕೃತ(ಕರ್ತ) ಹಾಗೂ
ಇನ್ನೊಂದು ಅಕೃತ (ಅಕರ್ತ). ಭಗವಂತ ಸೃಷ್ಟಿಕರ್ತ, ಆದರೆ ಆತನಿಗೆ ಯಾವುದೇ ಪುಣ್ಯ ಪಾಪಗಳ
ಲೇಪವಿಲ್ಲ. ಎಲ್ಲವನ್ನೂ ಮಾಡುವವ ಆತ, ಆದರೆ ಯಾವುದರ ಲೇಪವೂ
ಅವನಿಗಿಲ್ಲ. ನಮ್ಮೊಳಗಿದ್ದು, ನಮ್ಮಿಂದ ಎಲ್ಲವನ್ನೂ ಮಾಡಿಸಿ,
ಪುಣ್ಯ-ಪಾಪಗಳಿಗೆ ನಮ್ಮನ್ನು ಭಾದ್ಯರನ್ನಾಗಿ ಮಾಡಿ, ತಾನು ನಿರ್ಲಿಪ್ತನಾಗಿ ದೂರ
ನಿಲ್ಲುವ ಭಗವಂತ ಕೃತಾಕೃತಃ. ಭಗವಂತನಿಗೆ ಸ್ವಯಂ ಕೃತದ ಅಗತ್ಯವಿಲ್ಲ, ಆದರೆ ಭಕ್ತರ
ಅಭಿಲಾಷೆಗಾಗಿ ಅವತಾರವನ್ನು ಧರಿಸುತ್ತಾನೆ, ಭಕ್ತರ ಅಭೀಷ್ಟವನ್ನು ಪೂರೈಸುತ್ತಾನೆ. ಇಂತಹ
ಭಗವಂತ ಕೃತಾಕೃತಃ
137) ಚತುರಾತ್ಮಾ
ಭಗವಂತನು ನಾಲ್ಕು ರೂಪಗಳಲ್ಲಿ ಈ ಜಗತ್ತನ್ನು ನಿಯಂತ್ರಿಸುತ್ತಾನೆ. ನಮ್ಮ
ಬದುಕಿನಲ್ಲಿ ಸಹಜವಾದ ಸ್ಥಿತಿ ಮೂರು. ಎಚ್ಚರ-ಕನಸು-ನಿದ್ದೆ. ಈ ಮೂರು ಸ್ಥಿತಿಗಳನ್ನು
ಎಲ್ಲರೂ ನಿರಂತರ ಅನುಭವಿಸುತ್ತಾರೆ. ಆದರೆ ಈ ಮೂರನ್ನೂ ಮೀರಿದ ನಾಲ್ಕನೇ ಸ್ಥಿತಿ ತುಂಬಾ
ಪ್ರಮುಖವಾದದ್ದು. ಅದೇ ತುರೀಯ ಸ್ಥಿತಿ.
೧.ಎಚ್ಚರ ನಿಯಂತ್ರಣಕ್ಕಾಗಿ ನಮ್ಮ ಆಜ್ಞಾಚಕ್ರದಲ್ಲಿ ವಿಶ್ವ ನಾಮಕನಾಗಿ ಕುಳಿತ ಭಗವಂತ ಓಂಕಾರದ ಮೊದಲ ಅಕ್ಷರನಾಮಕ (ಆ-ಆಪ್ತಿ) ವಿಶ್ವಾತ್ಮ.
೨.ವಿಶುದ್ಧಿಚಕ್ರದ ತುದಿಯಲ್ಲಿ ಕಿರುನಾಲಿಗೆಯ ಕೆಳಗೆ ಇಂದ್ರಯೋನಿಯಲ್ಲಿ,
ಎಚ್ಚರಾವಸ್ಥೆಯಲ್ಲಿ ಸೆರೆ ಹಿಡಿದ ಪಡಿಯಚ್ಚನ್ನು, ನಾವು ಮಲಗಿದ್ದಾಗ ನಮಗೆ ಕನಸಿನ
ಮೂಲಕ ತೋರಿಸುವ ಭಗವಂತ ತೈಜಸಾತ್ಮ.
೩.ಮನಸ್ಸಿನ ನಿಯಂತ್ರಣದಿಂದ ಆಚೆಗೆ ಇರುವ ನಿದ್ರಾವಸ್ಥೆಯನ್ನು ನಿಯಂತ್ರಿಸುವ ಭಗವಂತ ಪ್ರಾಜ್ಞಾತ್ಮ.
೪.ನಮ್ಮ ಎಚ್ಚರ-ಕನಸು ಮನಸ್ಸಿನ ವ್ಯವಹಾರವಾದರೆ, ನಿದ್ದೆ ಮನಸ್ಸಿನ
ನಿಯಂತ್ರಣವಿಲ್ಲದೆ, ಆತ್ಮವೇ ತನ್ನನ್ನು ತಾನು ಅನುಭವಿಸುವ ಸ್ಥಿತಿ. ಎಚ್ಚರದಲ್ಲೂ,
ಕನಸಿನಲ್ಲೂ, ಎಲ್ಲಾ ಸ್ಥಿತಿಯಲ್ಲೂ, ಮನಸ್ಸಿನ ಹತೋಟಿಯನ್ನು ದಾಟಿನಿಲ್ಲುವ ನಾಲ್ಕನೇ
ಸ್ಥಿತಿ ತುರೀಯಾವಸ್ಥೆ. ಈ ಸ್ಥಿತಿಯಲ್ಲಿ ನಾವು ನಮ್ಮನ್ನು ಬಂಧಿಸಿದ ಆ ಹದಿನೈದು
ಬೇಲಿಗಳನ್ನು ದಾಟಿ ನಿಂತು, ಜ್ಞಾನಾನಂದಮಯವಾದ ನಮ್ಮ ಸ್ವರೂಪವನ್ನು ನೋಡುತ್ತೇವೆ. ಈ
ಸ್ಥಿತಿಯಲ್ಲಿ ನಾವು ಕೇವಲ ಪ್ರತಿಬಿಂಬ ಎನ್ನುವ ಸತ್ಯವನ್ನು ತಿಳಿಯುತ್ತೇವೆ, ಹಾಗೂ
ಮೂಲಬಿಂಬ ಭಗವಂತ ಎನ್ನುವ ಸತ್ಯದ ಅರಿವಾಗುತ್ತದೆ. ಈ ಸ್ಥಿತಿಯಲ್ಲಿ ನಾವು ದೇವರನ್ನು
ನೋಡಬಹುದು ಹಾಗೂ ದೇವರಲ್ಲಿ ಮಾತನಾಡಬಹುದು. ನಮ್ಮ ಸ್ವರೂಪ ದೃಷ್ಟಿಯಿಂದ ಭಗವಂತನನ್ನು
ಕಾಣುವ ಈ ನಾಲ್ಕನೇ ಸ್ಥಿತಿಯನ್ನು ತುರೀಯಾವಸ್ಥೆ ಎನ್ನುತ್ತೇವೆ.
ಈ ರೀತಿ ವಿಶ್ವ, ತೈಜಸ, ಪ್ರಾಜ್ಞ, ತುರೀಯ, ಈ ನಾಲ್ಕು ಸ್ಥಿತಿಗಳಲ್ಲಿ ನಮ್ಮನ್ನು ನಿಯಂತ್ರಿಸುವ ಭಗವಂತ ಚತುರಾತ್ಮಾ.
ಇದಲ್ಲದೆ ಪ್ರಪಂಚದ ಅನುಭವಕ್ಕಾಗಿ ನಾಲ್ಕು ಬಗೆಯ ದೇಹವನ್ನು ಭಗವಂತ ಜೀವರಿಗೆ ಕರುಣಿಸಿದ್ದಾನೆ.
೧. ಕಣ್ಣಿಗೆಕಾಣುವ ಪಂಚ ಭೂತಗಳಿಂದಾದ ಸ್ಥೂಲ ಶರೀರ.
೨. ಕಣ್ಣಿಗೆ ಕಾಣದ ಸೂಕ್ಷ್ಮ ಶರೀರ (Arial body). ಸೂಕ್ಷ್ಮ ಶರೀರ ಸ್ಥೂಲ ದೇಹವನ್ನು ತ್ಯೆಜಿಸಿದಾಗ ಮಾನವನ ಸ್ಥೂಲ ಶರೀರ ಸಾಯುತ್ತದೆ.
೩. ಸೃಷ್ಟಿಗೆ ಮೊದಲು ಅನಾದಿಯಾಗಿ ಬಂದ ಲಿಂಗರೂಪಿ ಶರೀರ.
೪. ಸ್ವರೂಪಭೂತವಾದ ಶರೀರ.
ಈ ರೀತಿ ಪ್ರಪಂಚದ ಅನುಭವಕ್ಕಾಗಿ ಸ್ಥೂಲ, ಸೂಕ್ಷ್ಮ, ಲಿಂಗ ಹಾಗೂ ಸ್ವರೂಪ ಎನ್ನುವ ನಾಲ್ಕು ಬಗೆಯ ಶರೀರವನ್ನು ಕೊಟ್ಟ ಭಗವಂತ ಚತುರಾತ್ಮಾ.
ಜೀವ ಸೃಷ್ಟಿಯಲ್ಲಿ ಚತುರ್ವಿಧ.
೧. ಜರಾಯುಜ: ಗರ್ಭದಲ್ಲಿ ಸಂಪೂರ್ಣ ಬೆಳವಣಿಗೆಯಾಗಿ ಹುಟ್ಟುವುದು (ಉದಾ: ಮನುಷ್ಯ ,ಹಸು ಇತ್ಯಾದಿ)
೨. ಅಂಡಜ: ಮೊಟ್ಟೆಯ ರೂಪದಲ್ಲಿ ಭೂಮಿಗೆ ಬಂದು, ನಂತರ
ಮೊಟ್ಟೆಗೆ ಕಾವು ಕೊಟ್ಟಾಗ ಸಂಪೂರ್ಣ ಬೆಳೆದು, ಮೊಟ್ಟೆಯೊಡೆದು ಹುಟ್ಟುವುದು (ಉದಾ:
ಕೋಳಿ, ಕಾಗೆ ಇತ್ಯಾದಿ)
೩. ಸ್ವೇದಜ: ನೀರಿನ ಪಸೆ, ಬೆವರಿನಿಂದ ಹುಟ್ಟುವುದು (ಉದಾ: ವೈರಸ್, ಬ್ಯಾಕ್ಟೀರಿಯ ಇತ್ಯಾದಿ).
೪. ಉದ್ಬಿಜ : ಬೀಜ ರೂಪದಲ್ಲಿದ್ದು, ಬೀಜ ಒಡೆದು ಬೆಳೆಯುವವು (ಉದಾ: ವೃಕ್ಷ)
ಈ ರೀತಿ ಅಂಡಜ-ಸ್ವೇದಜ-ಉದ್ಬಿಜ ಮತ್ತು ಜರಾಯುಜ ಎನ್ನುವ ನಾಲ್ಕು ಬಗೆಯಲ್ಲಿ ಜೀವಜಾತದ ಸೃಷ್ಟಿ ಮಾಡುವ ಭಗವಂತ ಚತುರಾತ್ಮಾ.
138) ಚತುರ್ವ್ಯೂಹಃ
ಭಗವಂತ ನಾಲ್ಕು ವ್ಯೂಹ(ಗುಂಪು ಅಥವಾ ಸಮುದಾಯ)ದಿಂದ ಉಪಾಸ್ಯನಾಗಿದ್ದಾನೆ.
೧. ಸೃಷ್ಟಿಗೆ ಕಾರಣನಾದ ಪ್ರದ್ಯುಮ್ನ,
೨. ಸ್ಥಿತಿಗೆ ಕಾರಣನಾದ ಅನಿರುದ್ಧ,
೩. ಸಂಹಾರಕ್ಕೆ ಕಾರಣನಾದ ಸಂಕರ್ಷಣ,
೪. ಮೋಕ್ಷಪ್ರದನಾದ ವಾಸುದೇವ.
ಜೀವವು ಮೊದಲು ಅನಿರುದ್ಧನನ್ನು ಸೇರಿ ಅನ್ನಮಯಕೋಶದಿಂದ ಸಂಬಂಧವನ್ನು
ಕಳಚಿಕೊಳ್ಳುತ್ತದೆ. ನಂತರ ಪ್ರದ್ಯುಮ್ನನನ್ನು ಸೇರಿ ಮನೋಮಯ ಕೋಶದ ಸಂಬಂಧವನ್ನು
ಕಳಚಿಕೊಂಡು, ಸಂಕರ್ಷಣನಿಂದ ವಿಜ್ಞಾನಮಯಕೋಶದ ಬಿಡುಗಡೆಯನ್ನು ಪಡೆದು, ಕೊನೆಗೆ
ವಾಸುದೇವನನ್ನು ಸೇರಿ ಸ್ವಯಂ ಆನಂದಮಯನಾಗುತ್ತಾನೆ. ಈ ರೀತಿ ವಾಸುದೇವ, ಸಂಕರ್ಷಣ,
ಪ್ರದ್ಯುಮ್ನ ಹಾಗೂ ಅನಿರುದ್ಧ ಎನ್ನುವ ನಾಲ್ಕು
ವ್ಯೂಹಗಳಿಂದ ಉಪಾಸ್ಯನಾದ ಭಗವಂತ ಚತುರ್ವ್ಯೂಹ.
ಭಗವಂತ ಪ್ರಪಂಚದಲ್ಲಿ ನಾಲ್ಕು ವರ್ಣದ ಸೃಷ್ಟಿಗೆ ಕಾರಣಕರ್ತ. ಇಲ್ಲಿ ವರ್ಣ ಎಂದರೆ
ಜಾತಿ ಅಲ್ಲ. ಜಾತಿ ಪದ್ಧತಿ ಜನರಿಂದ ಬಂದ ಪದ್ಧತಿ. ಆದರೆ ವರ್ಣ ಭಗವಂತನ ಸೃಷ್ಟಿ.
ನಾಲ್ಕು ವರ್ಣವನ್ನು ನಾವು ಪ್ರಪಂಚದ ಎಲ್ಲಾ ಭಾಗದಲ್ಲಿ ಕಾಣಬಹುದು. ಅವುಗಳೆಂದರೆ:
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ.
೧. ಬ್ರಾಹ್ಮಣ: ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆ ಮಾಡುವ ಜ್ಞಾನಿಗಳು (Intellects)
೨. ಕ್ಷತ್ರಿಯ: ರಕ್ಷಣೆ ಮತ್ತು ವ್ಯವಸ್ಥಾಪಕ ಗುಣ ಇರುವವರು (Defence & Administrators)
೩. ವೈಶ್ಯ: ಉತ್ಪಾದನೆ ಮತ್ತು ವಿತರಣೆಯಲ್ಲಿ ಚಾಣಾಕ್ಷರು (Production and Sale)
೪. ಶೂದ್ರ: ಶುಶ್ರೂಷೆ ಅಥವಾ ಸೇವೆಯಲ್ಲಿ ಚಾಣಾಕ್ಷರು (Service)
ಈ ಮೇಲಿನ ನಾಲ್ಕು ವರ್ಣಗಳನ್ನು ಒಂದೇ ಕುಟುಬದಲ್ಲಿ ನೋಡಬಹುದು. ಹಾಗೂ ಅವರವರ ಜೀವ
ಗುಣಕ್ಕೆ ಸರಿಹೊಂದುವ ಕೆಲಸವನ್ನು ಮಾಡುವವರು ಶೀಘ್ರ ಯಶಸ್ಸನ್ನು ಕಾಣುತ್ತಾರೆ. ಈ
ರೀತಿ ಈ ಪ್ರಪಂಚ ನಡೆಯಲು ಅನಿವಾರ್ಯವಾಗಿ ಬೇಕಾಗುವ ನಾಲ್ಕು ವರ್ಣಗಳನ್ನು
ನಿರ್ಮಿಸಿದ ಭಗವಂತ ಚತುರ್ವ್ಯೂಹ.
139) ಚತುರ್ದಂಷ್ಟ್ರ
ಭಗವದ್ಗೀತೆಯ ವಿಶ್ವರೂಪ ದರ್ಶನದಲ್ಲಿ ಅರ್ಜುನನು ಹೇಳುವಂತೆ:
ದಂಷ್ಟ್ರಾಕರಾಳಾನಿ ಚ ತೇ ಮುಖಾನಿ ದೃಷ್ಟ್ವೈವ ಕಾಲಾನಲಸನ್ನಿಭಾನಿ |
ದಿಶೋ ನ ಜಾನೇ ನ ಲಭೇ ಚ ಶರ್ಮ ಪ್ರಸೀದ ದೇವೇಶ ಜಗನ್ನಿವಾಸ || 11.25 ||
ಅಂದರೆ “ಪ್ರಳಯ ಕಾಲದ ಬೆಂಕಿಯಂತೆ ಕೋರೆದಾಡೆಗಳ ಅಬ್ಬರದ ನಿನ್ನ ಮೋರೆಗಳನ್ನು
ಕಂಡದ್ದೇ ದಿಕ್ಕು ತಿಳಿಯದಾಗಿದೆ, ನೆಮ್ಮದಿ ಇಲ್ಲವಾಗಿದೆ. ಓ ಸಗ್ಗಿಗರೊಡೆಯನೆ, ಜಗದ
ಆಸರೆಯೇ, ದಯೆ ತೋರು”.ಇಲ್ಲಿ ಯುದ್ಧನಿರತ ಕೌರವಸೇನೆ ಭಗವಂತನ ಕೋರೆದಾಡೆಗಳ ಮಧ್ಯೆ
ಸಿಕ್ಕಿ ನುಚ್ಚು ನೂರಾಗುವುದನ್ನು ಕಂಡ
ಅರ್ಜುನ, ತಾನು ಕೇವಲ ನೆಪಮಾತ್ರ ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತಾನೆ. ಇಲ್ಲಿ
ದಂಷ್ಟ್ರ ಎಂದರೆ ಕೋರೆದಂತ ಉಳ್ಳವನು ಎಂದರ್ಥ. ಚತುರ್ದಂಷ್ಟ್ರ ಎಂದರೆ ನಾಲ್ಕು ಕೋರೆ
ಹಲ್ಲುಗಳಿರುವವನು ಎಂದರ್ಥ.
ಭಗವಂತನು ವರಾಹ ಅವತಾರಿಯಾಗಿ ಹಿರಣ್ಯಾಕ್ಷನನ್ನು ಹಾಗೂ ನರಸಿಂಹ ಅವತಾರಿಯಾಗಿ ಹಿರಣ್ಯಕಶಿಪು-ವನ್ನು
ತನ್ನ ಕೋರೆ ಹಲ್ಲುಗಳಿಂದ ಸಂಹಾರ ಮಾಡಿದವನು. ನಮ್ಮೊಳಗೆ ಕೂಡಾ ಈ ಹಿರಣ್ಯಕಶಿಪು
ಮತ್ತು ಹಿರಣ್ಯಾಕ್ಷರಿದ್ದಾರೆ!! ಇಲ್ಲಿ ಹಿರಣ್ಯ ಎಂದರೆ ಚಿನ್ನ, ಅಂದರೆ ದುಡ್ಡು ಅಥವಾ
ಸಂಪತ್ತು. ಯಾವಾಗಲೂ ದುಡ್ಡಿನ ಮೇಲೆ ಕಣ್ಣನ್ನಿಟ್ಟು,
ಅದರಿಂದಾಚೆಗೆ ಏನನ್ನೂ ಯೋಚಿಸದೆ, ದುಡ್ಡಿನ ಆಸೆಯಲ್ಲಿ ಇರುವ ಮನುಷ್ಯನ ಗುಣವೇ
ಆತನಲ್ಲಿರುವ ಹಿರಣ್ಯಾಕ್ಷ. ಇನ್ನು ಒಮ್ಮೆ ದುಡ್ಡು ಬಂದಿತು, ಅದನ್ನು ತನ್ನ
ತಲೆದಿಂಬನ್ನಾಗಿ(ಕಶಿಪು) ಇಟ್ಟು-ಕೊಂಡು ದುಡ್ಡಿನ ಲೋಭದಲ್ಲಿ ಮುಳುಗುವ, ಹಾಗೂ ತಮ್ಮ
ಲೋಭಕ್ಕೆ ಅಡ್ಡಿ ಆದಾಗ, ಕ್ರೋಧಗೊಳ್ಳುವ ಮನುಷ್ಯ ಗುಣವೇ
ಆತನಲ್ಲಿರುವ ಹಿರಣ್ಯಕಶಿಪು. ನಮ್ಮಲ್ಲಿರುವ ಈ ಕಾಮ-ಕ್ರೋಧ-ಲೋಭವನ್ನು ಸಂಹಾರ
ಮಾಡಬಲ್ಲ ಭಗವಂತ ಚತುರ್ದಂಷ್ಟ್ರ.
140) ಚತುರ್ಭುಜಃ
ಸಾಮಾನ್ಯವಾಗಿ ದೇವರ ಮೂರ್ತಿಗಳಲ್ಲಿ ನಾವು ನಾಲ್ಕು ಕೈ ಹಾಗೂ ನಾಲ್ಕು ಆಯುಧವನ್ನು
ನೋಡುತ್ತೇವೆ. ಉದಾಹರಣೆಗೆ ವಿಷ್ಣು- ಶಂಖ, ಚಕ್ರ, ಗಧಾ, ಪದ್ಮಧಾರಿ. ಹಾಗೇ ಗಣಪತಿ- ಪಾಶ,
ದಂತ, ಅಂಕುಶ ಮತ್ತು ಅಭಯಧಾರಿ. ಏನಿದು ? ಏನಿದರ ಅರ್ಥ?
೧. ಚಕ್ರ: ಚಕ್ರ 'ಧರ್ಮದ' ಸಂಕೇತ. ಅಧರ್ಮವನ್ನು ಸಂಹಾರಮಾಡುವ, ನಿರಂತರ ತಿರುಗುವ ವಿಷ್ಣು ಚಕ್ರ, ಸಂಹಾರಶಕ್ತಿ ಮಾತೆ ದುರ್ಗೆಯ ಸಂಕೇತ.
೨. ಶಂಖ: ಧರ್ಮದ ಪಂಚಾಂಗದಲ್ಲಿ ನಮ್ಮ ಬದುಕು ಸಮೃದ್ಧಿಯಾಗಿರುವ 'ಅರ್ಥದ' ಸಂಕೇತ.
೩. ಗಧಾ: ಭಗವಂತನ ಗಧೆ ಸ್ವಚ್ಚಂದ 'ಕಾಮದ ನಿಯಂತ್ರಣದ' ಸಂಕೇತ.
೪. ಪದ್ಮ: 'ಶಾಂತಿಯ ಮತ್ತು ಮೋಕ್ಷದ' ಸಂಕೇತ
ಇದೇ ರೀತಿ ಗಣಪತಿಯನ್ನು ನೋಡಿದರೆ:
೧. ಪಾಶ: ನಮ್ಮ ಬದುಕಿಗೆ ಬೇಕಾದ ಧರ್ಮದ ಬಿಗಿ (ಪಾಶ).
೨. ದಂತ: ಸಂಪತ್ತಿನ ಜೊತೆಗೆ ಆತ್ಮ ಸಂಯಮ (ತನ್ನ ಧಾಡೆಯನ್ನು ಮುರಿದು ಹಿಡಿದಿರುವುದು).
೩. ಅಂಕುಶ: ಸ್ವಚ್ಚಂದ ಕಾಮಕ್ಕೆ ಅಂಕುಶ.
೪. ಅಭಯ: ಈ ಮೇಲಿನ ಮೂರನ್ನು ಪಾಲಿಸಿದರೆ ಮೋಕ್ಷದ ಅಭಯ.
ವಿಷ್ಣುವಿನ ಕೈಯಲ್ಲಿನ ನಾಲ್ಕು ಆಯುಧಗಳನ್ನು ಇಪ್ಪತ್ನಾಲ್ಕು ವಿಧದಲ್ಲಿ ಇಡಲು
ಬರುತ್ತದೆ. ಚಕ್ರ(ಬಲ ಕೈ), ಶಂಖ ಗಧಾ ಪದ್ಮಧಾರಿ-ಜನಾರ್ದನ ಮೂರ್ತಿಯಾದರೆ, ಶಂಖ(ಬಲ ಕೈ)
ಚಕ್ರ ಗಧಾ ಪದ್ಮಧಾರಿ-ಕೇಶವ ಮೂರ್ತಿ. ಈ ರೀತಿ ವಿಷ್ಣುವಿನ ಇಪ್ಪತ್ನಾಲ್ಕು
ಮೂರ್ತಿಗಳಿವೆ. ಅವುಗಳೆಂದರೆ ೧) ಕೇಶವ ೨) ನಾರಾಯಣ ೩) ಮಾಧವ ೪) ಗೋವಿಂದ. ೫) ವಿಷ್ಣು
೬) ಮಧುಸೂದನ ೭) ತ್ರಿವಿಕ್ರಮ ೮) ವಾಮನ ೯) ಶ್ರೀಧರ ೧೦) ಹೃಷೀಕೇಶ ೧೧) ಪದ್ಮನಾಭ
೧೨) ದಾಮೋದರ ೧೩) ಸಂಕರ್ಷಣ ೧೪) ವಾಸುದೇವ ೧೫) ಪ್ರದ್ಯುಮ್ನ ೧೬) ಅನಿರುದ್ಧ ೧೭)
ಪುರುಷೋತ್ತಮ ೧೮) ಅಧೋಕ್ಷಜ ೧೯) ನಾರಸಿಂಹ ೨೦) ಅಚ್ಚುತ ೨೧) ಜನಾರ್ದನ ೨೨)
ಉಪೇಂದ್ರ ೨೩) ಹರಿ ೨೪) ಕೃಷ್ಣ.
ಈ ರೀತಿ ವಿಶಿಷ್ಟವಾದ ನಾಲ್ಕು ಬಾಹುವುಳ್ಳ ಭಗವಂತನನ್ನು ಚತುರ್ಭುಜ
ಎನ್ನುತ್ತಾರೆ. ಭುಜ ಎನ್ನುವುದಕ್ಕೆ ಭೋಜನ ಎನ್ನುವ ಅರ್ಥ ಕೂಡಾ ಇದೆ. ನಾಲ್ಕು ವಿಧದಲ್ಲಿ
ತಿನ್ನುವವನು ಹಾಗೂ ತಿನ್ನಿಸುವವನು ಚತುರ್ಭುಜ. ಭಗವಂತನು ಗೀತೆಯಲ್ಲಿ ಹೇಳಿರುವಂತೆ-
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ |
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ || 15.14 ||
ಇಲ್ಲಿ 'ಪಚಾಮ್ಯನ್ನಂ ಚರ್ತುವಿಧಮ್' ಎಂದರೆ ನಾಲ್ಕು ಬಗೆಯ ಅನ್ನವನ್ನು ಅರಗಿಸುವೆ"
ಎಂದರ್ಥ. ಅನ್ನವೆಂದರೆ ಎಲ್ಲಾ ರೀತಿಯ 'ಆಹಾರ’. "ಪ್ರಾಣಿನಾಂ ದೇಹಮಾಶ್ರಿತಃ" ಎಂದರೆ
'ಪ್ರಾಣಿ’ಗಳು ತಿನ್ನಬಲ್ಲ ಆಹಾರ ಎಂದರ್ಥ. ಪ್ರಾಣಿಗಳ ಅಹಾರವನ್ನು ನಾಲ್ಕು
ವಿಧಗಳಲ್ಲಿ ವಿಂಗಡಿಸಬಹುದು- ಭಕ್ಷ್ಯ, ಭೋಜ್ಯ, ಲೇಹ್ಯ ಮತ್ತು ಚೋಷ್ಯ.
ಭಕ್ಷ್ಯ = ಅಗಿದು, ಕಡಿದು ತಿನ್ನಲು ಯೋಗ್ಯವಾದುದು (ತಿನ್ನುವುದು)
ಭೋಜ್ಯ = ಅಗಿಯದೆಯೇ, ನವಣಿಸಿ ತಿನ್ನಲು ಯೋಗ್ಯವಾದುದು (ಉಣ್ಣುವುದು).
ಲೇಹ್ಯ = ನೆಕ್ಕಿ ತಿನ್ನಲು ಯೋಗ್ಯವಾದುದು.
ಚೋಷ್ಯ = ಕುಡಿಯಲು ಯೋಗ್ಯವಾದುದು.
ಈ ನಾಲ್ಕು ವಿಧದ ’ಅನ್ನ’ವನ್ನು ಸೇವಿಸುವ ಎಲ್ಲಾ ಜೀವಿಗಳ
ಜಠರದಲ್ಲಿ ಅಗ್ನಿಯ ರೂಪದಲ್ಲಿದ್ದು, ನಾಲ್ಕು ಬಗೆಯ ಅನ್ನವನ್ನು ಮೂರು ಬಗೆಯಲ್ಲಿ
ವಿಭಾಗಮಾಡಿ, ದೇಹಕ್ಕೆ ಉಣಬಡಿಸಿ ನಮಗೆ ಬದುಕಲು ವ್ಯವಸ್ಥೆ ಮಾಡಿಸುವವನು ಚತುರ್ಭುಜ.
ಎಲ್ಲಾ ಆಹಾರ ಮಣ್ಣು-ನೀರು-ಬೆಂಕಿಯಿಂದ ಆಗಿರುತ್ತದೆ. ಆಹಾರದ ಮಣ್ಣಿನ ಸೂಕ್ಷ್ಮ ಭಾಗ
ಮೆದುಳಿಗೆ, ಮಧ್ಯ ಭಾಗ ಮಾಂಸ-ಚರ್ಮಕ್ಕೆ, ಹಾಗೂ ಸ್ಥೂಲ ಭಾಗ
ಮಲವಾಗಿ ವಿಸರ್ಜನೆಯಾಗುತ್ತದೆ. ಅದೇ ರೀತಿ ನೀರಿನ ಸೂಕ್ಷ್ಮ ಭಾಗ ಉಸಿರಾಗಿ, ಮಧ್ಯ ಭಾಗ
ನೆತ್ತರಾಗಿ ಹಾಗೂ ಸ್ಥೂಲ ಭಾಗ ಮೂತ್ರವಾಗಿ ವಿನಿಯೋಗವಾಗುತ್ತದೆ. ಇನ್ನು ಬೆಂಕಿಯ
ಸೂಕ್ಷ್ಮ ಭಾಗ ವಾಕ್ ಶಕ್ತಿಯಾಗಿ, ಮಧ್ಯ ಭಾಗ ಅಸ್ಥಿಮಜ್ಜೆಯಾಗಿ , ಸ್ಥೂಲ ಭಾಗ ಹಲ್ಲು
ಮತ್ತು ಅಸ್ಥಿಯಾಗಿ ವಿನಿಯೋಗವಾಗುತ್ತದೆ. ಈ ರೀತಿ, ಚಿನ್ನದ ಗಣಿಯಿಂದ ಚಿನ್ನವನ್ನು
ಬೇರ್ಪಡಿಸುವುದಕ್ಕಿಂತ ಕಠಿಣವಾದ ಈ ಕಾರ್ಯವನ್ನು ನಮ್ಮೊಳಗಿದ್ದು ವ್ಯವಸ್ಥಿತ
ರೀತಿಯಲ್ಲಿ ಮಾಡಿ , ನಾಲ್ಕು ಬಗೆಯ ಆಹಾರವನ್ನು ಮೇಲಿನ ಮೂರು ರೀತಿಯಲ್ಲಿ ವಿನಿಯೋಗ
ಮಾಡುವ ಭಗವಂತ ಚತುರ್ಭುಜ.
ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾದಿಜಃ |
ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ || 16 ||
141) ಭ್ರಾಜಿಷ್ಣುಃ
ಭ್ರಾಜಿಷ್ಣು ಎಂದರೆ ಬೆಳಕಿನ ಪುಂಜವಾಗಿ ಪ್ರಕಾಶಿಸುವವನು ಎಂದರ್ಥ. ಗೀತೆಯಲ್ಲಿ ಕೃಷ್ಣ ಹೇಳುವಂತೆ:
ಆದಿತ್ಯಾನಾಮಹಂ ವಿಷ್ಣುರ್ಜ್ಯೋತಿಷಾಂ ರವಿರಂಶುಮಾನ್ ।
ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ ||ಅ-೧೦, ಶ್ಲೋ-೨೧||
ಅಂದರೆ ರವಿಯಲ್ಲಿ ರವಿಯಾಗಿ ಪ್ರತೀ ಕಿರಣದಲ್ಲಿ ನಾನಿದ್ದೇನೆ ಎಂದರ್ಥ.
ಇನ್ನು ಈ ಪದವನ್ನು ಒಡೆದರೆ ಭ್ರಾ+ವಿಷ್ಣು, ಇಲ್ಲಿ 'ಭ್ರಾ' ಎಂದರೆ 'ಭರಣ'.
ಆದ್ದರಿಂದ ಭ್ರಾಜಿಷ್ಣು ಎಂದರೆ ಎಲ್ಲವನ್ನೂ ಧರಿಸಿದವನು, ಈ ಪದವನ್ನು
ಮುಂದಕ್ಕೆ ಒಡೆದರೆ, ಭ+ಆಜಿ+ಷ್ಣು. ಇಲ್ಲಿ ‘ಆಜಿ’ ಎಂದರೆ ಯುದ್ಧ, ‘ಭ’ ಎಂದರೆ
ಗೆಲ್ಲುವಂತೆ ಮಾಡುವವನು, ‘ಷ್ಣು’ ಎಂದರೆ ಎಲ್ಲರ ಒಳಗೆ ನಿಂತು ಪ್ರೇರಣೆ ಮಾಡುವವ.
ಆದ್ದರಿಂದ ಭ್ರಾಜಿಷ್ಣು ಎಂದರೆ , ನಾವು ನಮ್ಮ ಒಳಗೇ ಇರುವ
ವೈರಿಗಳಾದ ಕಾಮ, ಕ್ರೋಧ, ಮದ, ಮತ್ಸರ, ಇತ್ಯಾದಿ
ವೈರಿಗಳ ವಿರುದ್ಧ ಹೋರಾಟದಲ್ಲಿ ನಮಗೆ ಗೆಲುವನ್ನು ತಂದು ಕೊಡುವವನು. ಇದು ನಮಗೆ ಭಗವಂತ
ಕೊಡುವ ಶಿಕ್ಷಣ. ದೇವತೆಗಳು ನಮ್ಮನ್ನು ಪರೀಕ್ಷೆಗೆ ಒಡ್ಡಿ ನಮಗೆ ಶಿಕ್ಷಣ ಕೊಡುತ್ತಾರೆ.
ಇಂತಹ ಪರೀಕ್ಷೆಯಲ್ಲಿ ನಾವು ಉತ್ತೀರ್ಣರಾಗಿ ಹೊರಬರಲು ಭಗವಂತ ನಮಗೆ ಸದಾ ಸಹಕಾರವನ್ನು
ಕೊಡುತ್ತಾನೆ. ಆದ್ದರಿಂದ ಇದು ಶಿಕ್ಷೆ ಅಲ್ಲ ಶಿಕ್ಷಣ. ಇಂತಹ ಭಗವಂತ ಭ್ರಾಜಿಷ್ಣು
142) ಭೋಜನಂ
ಭಗವಂತ ಅನ್ನವೂ ಹೌದು, ಉಣ್ಣುವವನೂ ಹೌದು!!
ಗೀತೆಯಲ್ಲಿ ಹೇಳುವಂತೆ:
ಬ್ರಹ್ಮಾರ್ಪಣಂ ಬ್ರಹ್ಮಹವಿಃ, ಬ್ರಹ್ಮಾಗ್ನೌಬ್ರಹ್ಮಣಾ ಹುತಮ್ |
ಬ್ರಹ್ಮೈವತೇನ ಗಂತವ್ಯಂ, ಬ್ರಹ್ಮಕರ್ಮ ಸಮಾಧಿನಾ ||ಅ-೪,ಶ್ಲೋ-೨೪||
ಅಂದರೆ ಅರ್ಪಣವೂ ಭಗವಂತ, ಅರ್ಪಿಸುವ ಹವಿಸ್ಸೂ ಭಗವಂತ. ಭಗವಂತನ ಸನ್ನಿಧಾನವಿಲ್ಲದ
ಯಾವ ವಸ್ತುವೂ ಇಲ್ಲ. ಅನ್ನವೂ ಭಗವಂತ, ಅನ್ನವನ್ನು ತಿನ್ನುವವನೂ ಭಗವಂತ. ನಮಗೆ
ತಿನ್ನುವ ಯೋಗ ಬಂದಿದ್ದೂ ಭಗವಂತನಿಂದ. ಈ ರೀತಿ ಎಲ್ಲರಿಗೂ ಆನಂದವನ್ನು ಕೊಡುವ(ಭೋಜಯತಿ)
ಭಗವಂತನನ್ನು
ಭೋಜನಂ ಎನ್ನುತ್ತಾರೆ.
Note: ಇಲ್ಲಿ ಅನ್ನ ಎಂದರೆ ಅಕ್ಕಿಯಿಂದ ಮಾಡಿದ ಅನ್ನ ಮಾತ್ರವಲ್ಲ. ಸಂಸ್ಕೃತದಲ್ಲಿ ಅನ್ನ ಎಂದರೆ ತಿನ್ನುವಂತಹ ವಸ್ತು (Eatables) ಎಂದರ್ಥ.
143) ಭೋಕ್ತಾ
ಭೋಕ್ತಾ ಎಂದರೆ ಆಹಾರವನ್ನು ಸ್ವೀಕರಿಸುವವ. ಜಗತ್ತಿನ ಎಲ್ಲಾ ಸಾರವನ್ನೂ ಸ್ವೀಕರಿಸುವವ.
ಗೀತೆಯಲ್ಲಿ ಹೇಳುವಂತೆ:
ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ | (ಅ-೯ ಶ್ಲೋ ೨೪)
ಯಜ್ಞದಲ್ಲಿ ನಾವು ಮಾಡುವ ಎಲ್ಲಾ ಆಹುತಿಯನ್ನು ಸ್ವೀಕರಿಸುವವ ಆ ಭಗವಂತ. ಆದ್ದರಿಂದ
ಆತ ಯಜ್ಞ, ಯಜ್ಞಪುರುಷ, ಯಜ್ಞಭಾವನ, ಯಜ್ಞಭೋಕ್ತ. ನಾವು ದೇವರಿಗೆ ಅರ್ಪಿಸುವ
ನೈವೇದ್ಯ/ಹವಿಸ್ಸನ್ನು ನಮಗೆ ಕೊಟ್ಟವನೂ ಅವನೇ ಸ್ವೀಕರಿಸುವವನೂ ಅವನೇ. ಹೀಗೆ ಆನಂದ
ಭೋಕ್ತ ನಾದ ಭಗವಂತನನ್ನು ನಾವು ಭೋಕ್ತಾ ಎನ್ನುವ ನಾಮದಿಂದ ಉಪಾಸನೆ ಮಾಡುತ್ತೇವೆ.
144) ಸಹಿಷ್ಣುಃ
ಸಹಿಷ್ಣು ಎಂದರೆ ಸಹನೆ ಉಳ್ಳವನು ಎಂದರ್ಥ. ಯಾವುದಕ್ಕೂ ಮಣಿಯದ, ತಾಕತ್ತಿದ್ದರೂ
ಇನ್ನೊಬ್ಬರ ತಪ್ಪನ್ನು ಕ್ಷಮಿಸುವ, ಮಹತ್ತಾದ ಗುಣ ಸಹಸ್ಸು. ನಾವು ಮಾಡುವ ಕಾರ್ಯದ
ಹಿಂದಿನ ಭಾವ ಪಾಪ ಅಥವಾ ಪುಣ್ಯಗಳನ್ನು ನಿರ್ಧರಿಸುತ್ತದೆ. ಸಾಮಾಜಿಕವಾಗಿ ಕಾಣುವ ಕೆಟ್ಟ
ಕೆಲಸವನ್ನು ಮಾಡಿದ ನಮ್ಮ ಭಾವಕ್ಕನು- ಗುಣವಾಗಿ, ನಮ್ಮನ್ನು ಭಗವಂತ ಕ್ಷಮಿಸಿ, ಪಾಪದ
ಲೇಪದಿಂದ ವಿಮುಕ್ತನಾಗಿಸುತ್ತಾನೆ. ಭಗವಂತ 'ಸರ್ವ ಭಕ್ತಾಪರಾಧ ಸಹಿಷ್ಣು'
ಆತನ ಕ್ಷಮಾಗುಣಕ್ಕೆ ಅಜಾಮಿಳನ ಕಥೆ ಉತ್ತಮ ದೃಷ್ಟಾಂತ.
ಅಜಾಮಿಳ ಒಬ್ಬ ಬ್ರಾಹ್ಮಣ. ಸರಳ, ಮಿತಭಾಷಿ, ಸಾತ್ತ್ವಿಕ, ವಿದ್ವಾಂಸನಾಗಿದ್ದ .
ಗುರು, ಅತಿಥಿ, ಹಿರಿಯರ ಸೇವೆ ಮಾಡುತ್ತಿದ್ದ. ತನ್ನ ಕೈ
ಹಿಡಿದ ಹೆಂಡತಿಯನ್ನೂ ಪ್ರೀತಿಸುತ್ತಿದ್ದ. ಒಂದು ದಿನ ಆತ ಕಾಡಿನಲ್ಲಿ ಸುಂದರಿಯಾದ
ಒಬ್ಬಳು ಹೆಣ್ಣನ್ನು, ಅರೆನಗ್ನ ಸ್ಥಿತಿಯಲ್ಲಿ ನೋಡಿ ಆಕರ್ಷಣೆಗೊಳಪಟ್ಟ.
ತನ್ನ ಹೆಂಡತಿ ಮತ್ತು ತಂದೆ ತಾಯಿಯರನ್ನು ಮರೆತು, ತಾನು ಕಂಡ ಕಾಡಿನ ಹುಡುಗಿಯ
ಸಂಗದಲ್ಲಿ, ಲೋಕವನ್ನು ಮರೆತ. ಆಕೆಯನ್ನು ಸಂತೋಷಪಡಿಸಲು ಮಾಡಬಾರದ
ಕೆಲಸವನ್ನೆಲ್ಲಾ ಮಾಡಿದ. ಕುಡುಕನಾದ, ಕಳ್ಳತನ ಮಾಡಿದ ಜೂಜಾಡಿದ.
ಕಾಡಿನಲ್ಲಿ ಆಕೆಯೊಂದಿಗೆ ಸಂಸಾರ ಬೆಳೆಯಿತು, ಮಕ್ಕಳಾದವು. ಕೊನೆಯ ಮಗನ ಹೆಸರು
'ನಾರಾಯಣ'. ಒಂದು ರಾತ್ರಿ ಅಜಾಮಿಳನಿಗೆ ಘೋರ ರೂಪದ ಯಮದೂತರೇ ಕಣ್ಣೆದುರು ನಿಂತಂತಾ-
ಯಿತು. ಅವರ ಕೈಯಲ್ಲಿ ಯಮಪಾಶ! ಅಜಾಮಿಳನಿಗೆ ನಿಜಕ್ಕೂ ಭಯವಾಯಿತು. ತನ್ನ ಮಗ
ನಾರಾಯಣನನ್ನು ಕೂಗಿ ಕರೆದ! - ಆಗ ಮಗನ ಬದಲು ಪ್ರತ್ಯಕ್ಷರಾದ ವಿಷ್ಣು
ದೂತರು, ಹಳಿತಪ್ಪಿ ಚಲಿಸುತ್ತಿದ್ದ ಆತನನ್ನು ಪುನಃ ಸರಿಯಾದ ದಾರಿಯಲ್ಲಿ ತಂದು ಉದ್ಧಾರ
ಮಾಡುತ್ತಾರೆ. ನಂತರದ ದಿನಗಳಲ್ಲಿ ಆತ ಮಹಾತ್ಮನಾಗಿ ಬದುಕುತ್ತಾನೆ.
ನಮ್ಮಲ್ಲಿ ಸಾತ್ವಿಕತೆ ಮತ್ತು ಜ್ಞಾನ ಅನೇಕ ಜನ್ಮಗಳ ಫಲದಿಂದ ಬಂದಿರುತ್ತದೆ. ಯಾವೊದೋ
ಕೆಟ್ಟ ಕಾರಣದಿಂದ ನಾವು ದಾರಿತಪ್ಪಿದಾಗ, ಕರುಣಾಮಯನಾದ ಭಗವಂತ ನಮ್ಮನ್ನು ಶಿಕ್ಷಿಸುವ
ಬದಲು ಕ್ಷಮಿಸಿ ಉದ್ಧಾರ ಮಾಡುತ್ತಾನೆ. ಎಂತಹ ತಪ್ಪನ್ನೂ ಕೂಡ ಕ್ಷಮಿಸುವ
ಕಾರುಣ್ಯಮೂರ್ತಿ ಆ ಭಗವಂತ. ಆತ ನಮಗೆ ಕೊಡುವ ದುಃಖ ತಾಯಿ ತನ್ನ ಮಗುವನ್ನು ತಿದ್ದಲು
ಕೊಡುವ ಶಿಕ್ಷೆಯಂತೆ. ಆತನ ಶಿಕ್ಷೆ ಕಾರುಣ್ಯದ ರಕ್ಷೆ. ಆತ ಯಾರನ್ನೂ
ದ್ವೇಷಿಸುವುದಿಲ್ಲ. ಎಲ್ಲರ ಅಪರಾಧವನ್ನೂ ಸಹಿಸುವ ಭಗವಂತ ಸಹಿಷ್ಣು.
145) ಜಗದಾದಿಜಃ
ಜಗದಾದಿಜ ಎಂದರೆ ಸೃಷ್ಟಿಯ ಮೊದಲು ಇದ್ದವ ಹಾಗೂ ಜಗತ್ತನ್ನು ಸೃಷ್ಟಿಸುವ ಮೊದಲು
ಚತುರ್ವ್ಯೂಹ ಮೂರ್ತಿಗಳಾದ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಹಾಗೂ ಅನಿರುದ್ಧ ಎನ್ನುವ
ನಾಲ್ಕು ರೂಪದಲ್ಲಿ ತನ್ನನ್ನು ತಾನು ಸೃಷ್ಟಿ ಮಾಡಿಕೊಂಡವ. ಇಲ್ಲಿ
ಸೃಷ್ಟಿಯಾಗುವುದು ಎಂದರೆ ಇದ್ದದ್ದು ಕಾಣುವ ರೂಪ- ತಳೆಯುವುದು . ಭಗವಂತ ಮೊದಲು
ಪುರುಷನಾಮಕ ರೂಪವನ್ನು ಧರಿಸಿ , ನಂತರ ಮಹಾತತ್ವದ ಸೃಷ್ಟಿ ಮಾಡಿದ. ಆನಂತರ ಅಹಂಕಾರ
ತತ್ವ(ಶಿವ)ದ ಸೃಷ್ಟಿಯಾಯಿತು. ಅಹಂಕಾರ ತತ್ವದಿಂದ ಪಂಚಭೂತಗಳ ಸೃಷ್ಟಿಯಾಯಿತು.
ಪಂಚಭೂತಗಳಿಂದ ಪ್ರಪಂಚ ಪುರುಷನ ಸೃಷ್ಟಿ ಹಾಗೂ ಬ್ರಹ್ಮಾಂಡ ಸೃಷ್ಟಿಯಾಯಿತು.
ಬ್ರಹ್ಮಾಂಡದಿಂದ ಪಿಂಡಾಂಡ ಸೃಷ್ಟಿಯಾಯಿತು. ಭಗವಂತ ಒಂದೊಂದು ಪಿಂಡಾಂಡದಲ್ಲಿ ಬಿಂಬ
ರೂಪಿಯಾಗಿ ನೆಲೆಸಿದ.
ಸೂಕ್ಷ್ಮ ಸೃಷ್ಟಿ ಭಗವಂತನ ನಾಭಿ ಕಮಲ. ಈ ಸೂಕ್ಷ್ಮ ಪ್ರಪಂಚವನ್ನು ಚತುರ್ಮುಖ
ಮಹಾತತ್ವದಿಂದ ವಿಸ್ತಾರಗೊಳಿಸಿ, ಸ್ಥೂಲ ಪ್ರಪಂಚ ಸೃಷ್ಟಿ ಮಾಡಿದ. ಮಹಾತತ್ವದಿಂದ ಅಹಂಕಾರ
ತತ್ವದ ಒಡೆಯನಾಗಿ ಶಿವ ಬಂದ. ಶಿವನಿಂದ ಅಹಂಕಾರ ತತ್ವದ ಮೂರು ರೂಪಗಳ ಸೃಷ್ಟಿಯಾಯಿತು.
ಅವುಗಳೆಂದರೆ: ೧. ಸಾತ್ವಿಕ ಅಹಂಕಾರ ತತ್ವ ೨.ರಾಜಸ ಅಹಂಕಾರ ತತ್ವ ೩.ತಾಮಸ ಅಹಂಕಾರ
ತತ್ವ. ಸಾತ್ವಿಕ ಮತ್ತು ರಾಜಸ ಅಹಂಕಾರ ತತ್ವದಿಂದ ಪಂಚ ಜ್ಞಾನೇಂದ್ರಿಯ, ಪಂಚ
ಕರ್ಮೇಂದ್ರಿಯ ಹಾಗೂ ಅದರ ತತ್ವಾಭಿಮಾನಿ ದೇವತೆಗಳ ಸೃಷ್ಟಿಯಾಯಿತು. ತಾಮಸ
ಅಹಂಕಾರತತ್ವದಿಂದ ಪಂಚ ಭೂತಗಳ ಹಾಗೂ ಅದರ ತತ್ವಾಭಿಮಾನಿ ದೇವತೆಗಳ ಸೃಷ್ಟಿಯಾಯಿತು. ಈ
ರೀತಿ ನಮಗೆ ಕಾಣುವ ಈ ಪ್ರಪಂಚ ಸೃಷ್ಟಿಯಾಯಿತು.
ಈ ಜಗತ್ತಿಗೆ ಮೂಲ ಕಾರಣನಾಗಿ ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣನಾಗಿರುವ ಎಲ್ಲರ ಜನಕನಾದ ಭಗವಂತ ಜಗದಾದಿಜ.
146) ಅನಘಃ
ಅಘ ಎಂದರೆ ಪಾಪ, ದುಃಖ, ವ್ಯಸನ ಇತ್ಯಾದಿ . ಇಲ್ಲಿ ವ್ಯಸನ ಎಂದರೆ ಚಾಳಿ ಅಥವಾ
ಚಟ. ಭಗವಂತನಿಗೆ ಯಾವ ಪಾಪದ ಲೇಪವೂ ಇಲ್ಲ. ಆತ ಸಂಹಾರ ಮಾಡುವುದು ಕಾರುಣ್ಯದಿಂದ
ಹೊರತು ದ್ವೇಷ- ದಿಂದಲ್ಲ. ಉದಾಹರಣೆಗೆ ಕೃಷ್ಣ ದ್ರೋಣಾಚಾರ್ಯರನ್ನು "ಅಶ್ವತ್ಥಾಮ
ಸತ್ತ" ಎಂದು ಧರ್ಮರಾಯನಲ್ಲಿ ಹೇಳಿಸಿ ಕೊಲ್ಲುತ್ತಾನೆ. ಇದರ ಹಿಂದಿರುವ ಕಾರುಣ್ಯ
ಅಪಾರವಾದದ್ದು. ದುರ್ಯೋದನನಂತಹ ದುಷ್ಟ, ಸಮಾಜಕಂಟಕ, ದ್ರೋಹಿಯ- ಅನ್ನದ ಋಣಕ್ಕೋಸ್ಕರ,
ಪ್ರತಿದಿನ ಹತ್ತು ಸಾವಿರ ಸೈನಿಕರನ್ನು ಸಾಯಿಸುತ್ತೇನೆ ಎಂದು ಪ್ರತಿಜ್ಞೆ
ಮಾಡಿದ್ದ ದ್ರೋಣರನ್ನು, ಪಾಪದ ಕಡಲಿನಿಂದ ರಕ್ಷಿಸಲು ಭಗವಂತ ಆತನನ್ನು ಸಾಯಿಸಿ
ರಕ್ಷಿಸುತ್ತಾನೆ. ಇಲ್ಲಿ ಭಗವಂತ ನಿರ್ವಿಕಾರ ಹಾಗೂ ನಿರ್ಲಿಪ್ತ. ಆತನಿಗೆ ಸಾಯಿಸುವುದು
ವ್ಯಸನವಲ್ಲ ಹಾಗೂ ದುಃಖ-ಪಾಪದ ಲೇಪ ಅವನಿಗಿಲ್ಲ. ಇಂತಹ ಭಗವಂತ ಅನಘ.
147) ವಿಜಯಃ
ಅರ್ಜುನನನ್ನು 'ವಿಜಯ'ಎಂದು ಕರೆಯುತ್ತಾರೆ.
ಹೆಚ್ಚು ಯುದ್ಧಗಳಲ್ಲಿ ಪಾಲ್ಗೊಂಡು ಕಪ್ಪ-ಕಾಣಿಕೆ ಸಂಗ್ರಹಿಸಿದ್ಧರಿಂದ ಆತನಿಗೆ
ಈ ಅನ್ವರ್ಥ ನಾಮ. ಸೂಕ್ಷ್ಮವಾಗಿ ನೋಡಿದರೆ ಅತೀ ಹೆಚ್ಚು ಸಂಪತ್ತು ಹಾಗೂ ಅತಿದೊಡ್ಡ ವಿಜಯ
ಪಾಂಡವರಿಗೆ ಭೀಮಸೇನ ಜರಾಸಂಧ ನನ್ನು ಜಯಿಸಿದಾಗ ಬಂದಿರುವುದು. ಆದರೂ ರೂಢಿಯಲ್ಲಿ
ಅರ್ಜುನನನ್ನು 'ವಿಜಯ', 'ಧನಂಜಯ' ಎಂದು ಕರೆಯುತ್ತಾರೆ. ಅರ್ಜುನನಲ್ಲಿ 'ನರ' ನಾಮಕ
ಭಗವಂತನ ಸನ್ನಿಧಾನವಿದ್ದದರಿಂದ, ಆಂಜನೇಯ ರೂಪಿ ಪ್ರಾಣದೇವರು
ಆತನ ರಥದ ದ್ವಜದಲ್ಲಿದ್ದದರಿಂದ, ಅರ್ಜುನ ವಿಜಯನಾದ. ಭಾಗವತದಲ್ಲಿ ಹೇಳುವಂತೆ ಅರ್ಜುನನ
ಹಾಗೂ ಭೀಮನ ಒಳಗೆ ಕುಳಿತು, ವಿಜಯ ಸಾರಥಿಯಾಗಿ, ಧರ್ಮ ಸಂಸ್ಥಾಪನೆ ಮಾಡಿದ ಭಗವಂತ
ನಿಜವಾದ ವಿಜಯ. ಪಾಂಡವರನ್ನು ಹೆಜ್ಜೆ ಹೆಜ್ಜೆಗೂ ವಿಜಯ ಪಥದತ್ತ ಕೊಂಡೊಯ್ದ ಭಗವಂತ ವಿಜಯ.
ಇಷ್ಟೇ ಅಲ್ಲದೆ, ರಾಮಾವತಾರದಲ್ಲಿ ರಾವಣ-ಕುಂಭಕರ್ಣರನ್ನು, ನರಸಿಂಹ ಅವತಾರಿಯಾಗಿ
ಹಿರಣ್ಯ- ಕಷಿಪುವನ್ನು, ವರಾಹ ಅವತಾರದಲ್ಲಿ ಹಿರಣ್ಯಾಕ್ಷನನ್ನು, ಹೀಗೆ ಅನೇಕ
ರಾಕ್ಷಸರನ್ನು ವಿಶಿಷ್ಟವಾದ ರೂಪದಲ್ಲಿ ಜಯಿಸಿದ ಭಗವಂತ ವಿಜಯ.
148 ) ಜೇತಾ
ಜೇತೃ ಎಂದರೆ ಎಲ್ಲವನ್ನು ಗೆದ್ದವನು. ಮೇಲೆ ವಿಜಯ ನಾಮದಲ್ಲಿ ನೋಡಿದಂತೆ ಭಗವಂತ
ಎಲ್ಲರನ್ನೂ ಗೆದ್ದವನು. ಎಲ್ಲರನ್ನೂ ಗೆದ್ದು, ಎಲ್ಲರಿಗಿಂತ ಎತ್ತರದಲ್ಲಿದ್ದು,
ನಮ್ಮನ್ನು ಎತ್ತರಕ್ಕೇರಿಸುವ ಅರಿಗಳನ್ನು ಗೆದ್ದ ಭಗವಂತ ಜೇತಾ.
149) ವಿಶ್ವಯೋನಿಃ
ಈ ನಾಮ ಹಿಂದೊಮ್ಮೆ ಬಂದಿದೆ. ಇಲ್ಲಿ 'ವಿ' , 'ಶ್ವ' ಎಂದರೆ ಹಕ್ಕಿಯ ಮೇಲೆ ಕೂರುವವ, ಹಾಗೂ ಯೋನಿ ಎಂದರೆ ಎಲ್ಲಕ್ಕೂ ಕಾರಣಕರ್ತ, ಜಗದ ಜನಕ ಎಂದರ್ಥ.
ಗೀತೆಯಲ್ಲಿ ಹೇಳುವಂತೆ:
ಮಮ ಯೋನಿರ್ಮಹದ್ ಬ್ರಹ್ಮ ತಸ್ಮಿನ್ ಗರ್ಭಂ ದಧಾಮ್ಯಹಮ್ (ಅ-೧೪, ಶ್ಲೋ ೩)
ಬ್ರಹ್ಮ ಶಬ್ದ ವಾಚ್ಯಳಾದ ಚಿತ್ತ್ ಪೃಕೃತಿ ಯಾರ ಪತ್ನಿಯೋ, ಇಡೀ ವಿಶ್ವವು ಯಾರ
ಅಭಿವ್ಯಕ್ತಿಗೆ ಕಾರಣವೋ, ಅವನು ವಿಶ್ವಯೋನಿ. ಈ ರೀತಿ
ಮುಖ್ಯಪ್ರಾಣಾಂತರ್ಗತನಾದ ನಾರಾಯಣನನ್ನು ವಿಶ್ವಯೋನಿ ಎನ್ನುತ್ತಾರೆ.
150) ಪುನರ್ವಸುಃ
ಇಲ್ಲಿ ವಸು ಎಂದರೆ ಸಂಪತ್ತು.
ಭಗವಂತ ಒಮ್ಮೆ ಬಡತನ ಕೊಟ್ಟರೆ ಪುನಃ ಸಂಪತ್ತನ್ನು ಕೊಡುತ್ತಾನೆ.
ದೇವತೆಗಳ ಸಂಪತ್ತನ್ನೆಲ್ಲಾ ಅಪಹಾರ ಮಾಡಿದ ಬಲಿಯನ್ನು ಸೋಲಿಸಿ, ದೇವತೆಗಳಿಗೆ ಅವರ
ಸಂಪತ್ತನ್ನು ಪುನಃ ಹಿಂತಿರುಗಿಸಿದ ಭಗವಂತ, ತಲೆಯನ್ನು ತನ್ನ ಪಾದ ಪೀಠವನ್ನಾಗಿ ಮಾಡಿದ
ಬಲಿಯನ್ನು ಮುಂದಿನ ಮನ್ವಂತರದಲ್ಲಿ ಇಂದ್ರನನ್ನಾಗಿ ಮಾಡಿದ.
ಹೀಗೆ ಒಮ್ಮೆ ಜ್ಞಾನವನ್ನು, ಇನ್ನೂಮ್ಮೆ ಅಜ್ಞಾನವನ್ನು, ಒಮ್ಮೆ ಸಂಪತ್ತನ್ನೂ,
ಇನ್ನೊಮ್ಮೆ ಬಡತನವನ್ನು ಕೊಟ್ಟು, ನಮ್ಮನ್ನು ಪರಿಣತರನ್ನಾಗಿ ಮಾಡುವ ಭಗವಂತ
ಪುನರ್ವಸುಃ.
ಉಪೇಂದ್ರೋ ವಾಮನಃ ಪ್ರಾಂಶುರಮೋಘಃ ಶುಚಿರೂರ್ಜಿತಃ |
ಅತೀಂದ್ರಃ ಸಂಗ್ರಹಃ ಸರ್ಗೋ ಧೃತಾತ್ಮಾ ನಿಯಮೋ ಯಮಃ || 17 ||
151) ಉಪೇಂದ್ರಃ
ಉಪೇಂದ್ರ ಎನ್ನುವ ಭಗವಂತನ ನಾಮ ತುಂಬಾ ರೋಚಕವಾದ ಅರ್ಥವನ್ನು ಕೊಡುವ ನಾಮ.
ಹಿಂದೆ ನೋಡಿದಂತೆ(39ನೇ ನಾಮ ನೋಡಿ) ಅದಿತಿ-ಕಶ್ಯಪರ ಹನ್ನೆರಡು ಮಂದಿ
ಮಕ್ಕಳಲ್ಲಿ ಒಬ್ಬ ಇಂದ್ರ ಹಾಗೂ ಕೊನೆಯ ಮಗ ವಾಮನ ರೂಪಿ ಭಗವಂತ.
ಇಲ್ಲಿ ಇಂದ್ರನ ತಮ್ಮನಾಗಿ ಹುಟ್ಟಿದ ಭಗವಂತನನ್ನು ಉಪೇಂದ್ರ ಎನ್ನುತ್ತಾರೆ.
ಅಜಗನ್ಯಹ ಜಗನ್ಯಜಃ - ಅಂದರೆ ಯಾರಿಗೂ ಚಿಕ್ಕವನಲ್ಲ ಆದರೆ ಹುಟ್ಟಿನಲ್ಲಿ ಎಲ್ಲರಿಗಿಂತ
ಚಿಕ್ಕವ ವಾಮನ.
ಚತುರ್ಮುಖನ ಒಂದು ದಿನ ಅಂದರೆ 432 ಕೋಟಿ ವರ್ಷಗಳ ಹಗಲು(ಸೃಷ್ಟಿ) ಹಾಗೂ 432 ಕೋಟಿ
ವರ್ಷಗಳ ರಾತ್ರಿ (ಪ್ರಳಯ). ಈ 432 ಕೋಟಿ ವರ್ಷಗಳ ಹಗಲಿನಲ್ಲಿ 14
ಮನ್ವಂತರಗಳಿರುತ್ತವೆ. ಪ್ರತೀ ಮನ್ವಂತರಕ್ಕೆ ಒಬ್ಬ ಇಂದ್ರ. ಹಾಗೂ ಪ್ರತೀ ಮನ್ವಂತರಕ್ಕೆ
ಒಮ್ಮೆ ಸಂಪೂರ್ಣ ದೇವಗಣ ಬದಲಾಗುತ್ತದೆ. ಪ್ರತೀ ಮನ್ವಂತರದಲ್ಲಿ ಇಂದ್ರನಿಗೆ
ಸಹಾಯಕನಾಗಿ ಭಗವಂತ ಅವತರಿಸುತ್ತಾನೆ. ಹೀಗೆ ಇಂದ್ರನ ಬೆಂಬಲಕ್ಕಾಗಿ ಅವತರಿಸುವ
ಭಗವಂತನನ್ನು ಉಪೇಂದ್ರ ಎನ್ನುತ್ತಾರೆ. ಮೊದಲನೇ ಮನ್ವಂತರದಲ್ಲಿ ಭಗವಂತ ಸ್ವತಃ
ಇಂದ್ರನಾಗಿದ್ದದರಿಂದ ಅಲ್ಲಿ ಉಪೇಂದ್ರ ಕಾಣಸಿಗುವುದಿಲ್ಲ. ವೈವಸ್ವತ
ಮನ್ವಂತರದ ಉಪೇಂದ್ರರೂಪ ವಾಮನ. ಆದ್ದರಿಂದ, ಇಂದ್ರನಿಂದ ಬಲಿ ರಾಜ್ಯವನ್ನು
ಕಿತ್ತುಕೊಂಡಾಗ, ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿ, ಇಂದ್ರನ ಸಂಪತ್ತನ್ನೂ ಮರಳಿ
ಇಂದ್ರನಿಗೆ ಕೊಟ್ಟವ ಉಪೇಂದ್ರನಾದ ವಾಮನ ರೂಪಿ ಭಗವಂತ.
ಇನ್ನು ಉಪೇಂದ್ರ ಎನ್ನುವ ನಾಮದಲ್ಲಿ 'ಉಪ' ಎಂದರೆ 'ಉಪರಿ' ಅಂದರೆ
ಉತ್ಕೃಷ್ಟ ಎಂದರ್ಥ. ಈ ಸಂಸ್ಕೃತ ಶಬ್ದ ಇಂಗ್ಲೀಷಿನಲ್ಲಿ up ಅಥವಾ upper ಎಂದಾಯಿತು.
ಜರ್ಮನ್ ಭಾಷೆಯಲ್ಲಿ Über (Ueber ) ಎಂದಾಯಿತು. ಹಿಂದಿಯಲ್ಲಿ ऊपर ಎಂದಾಯಿತು.
ಎಲ್ಲಾ ಭಾಷೆಗಳ ಮೂಲ ಸಂಸ್ಕೃತ. ಉಪ ಎಂದರೆ ಎತ್ತರ ಎನ್ನುವ ಅರ್ಥವನ್ನು ಅನೇಕ ಕಡೆ
ಬಳಸುತ್ತೇವೆ. ಉದಾಹರಣೆಗೆ 'ಉಪನಿಷತ್ತು ' ಅಂದರೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವ
ಗ್ರಂಥ, 'ಉಪನಯನ' ಅಂದರೆ ಜ್ಞಾನಗಳಿಸಲು ಬೇಕಾದ, ಎತ್ತರಕ್ಕೆ ಏರುವ ಕ್ರಿಯೆ,
'ಉಪವಾಸ 'ಅಂದರೆ ಮನಸ್ಸನ್ನು ಎತ್ತರಕ್ಕೇರಿಸಲು ನಮ್ಮ ಹೊಟ್ಟೆಯನ್ನು ಖಾಲಿ ಇಡುವುದು,
ಇತ್ಯಾದಿ. ಆದ್ದರಿಂದ ಇಲ್ಲಿ ಉಪೇಂದ್ರ ಎಂದರೆ ಸ್ವರ್ಗದ ಒಡೆಯನಾದ ಇಂದ್ರನಿಗಿಂತ
ಮೇಲಿರುವ, ಮೂರುಲೋಕದ ಒಡೆಯನಾದ, ಬ್ರಹ್ಮಾಂಡ ನಾಯಕ ಭಗವಂತ ಎಂದರ್ಥ.
152) ವಾಮನಃ
ಬಲಿ ಚಕ್ರವರ್ತಿಯನ್ನು ವಾಮನರೂಪಿ ಭಗವಂತ ಮೂರು
ಹೆಜ್ಜೆ ಭೂಮಿ ಕೇಳಿ, ಸೋಲಿಸಿ ಉದ್ಧಾರ ಮಾಡಿದ
ಕಥೆಯನ್ನು ನಾವು ಭಗವಂತನ ವಿಕ್ರಮೀ ಎನ್ನುವ ನಾಮ(75 ನೇ ನಾಮ)ದಲ್ಲಿ ನೋಡಿದ್ದೇವೆ.
ಇಲ್ಲಿ ವಾಮನ ಎಂದರೆ ಚಿಕ್ಕ ಗಾತ್ರದವ ಎಂದರ್ಥ. ಭಗವಂತ ಅಣುವಿಗಿಂತ ಅಣುವಾಗಿ ನಮ್ಮ
ಹೃದಯಕಮಲದಲ್ಲಿ ತುಂಬಿದ್ದಾನೆ.
'ವಾಮ' ಎಂದರೆ ಸೌಂದರ್ಯ. ವಾಮನ ಎಂದರೆ ಸೌಂದರ್ಯವನ್ನು ಕೊಡುವವನು. ಸೌಂದರ್ಯದ
ಕೇಂದ್ರಬಿಂದು ಕಣ್ಣು. ಭಗವಂತನ ಸನ್ನಿಧಾನ ಕಣ್ಣಿನಲ್ಲಿರುತ್ತದೆ. ಎಷ್ಟೇ
ಸೌಂದರ್ಯವಿದ್ದರೂ, ಕಣ್ಣಿಲ್ಲದವ ಕುರೂಪಿಯಾಗಿರುತ್ತಾನೆ. ಈ ರೀತಿ
ಸೌಂದರ್ಯಸಾರಭೂತನಾದ ಭಗವಂತ ವಾಮನ. ಈ ಪದವನ್ನು ವಾ+ಅಮ+ನ ಎಂದು ಒಡೆದು
ಅರ್ಥೈಸಬಹುದು. ಇಲ್ಲಿ 'ವಾ' ಎಂದರೆ ಜ್ಞಾನ, 'ಅಮ' ಎಂದರೆ ಅಜ್ಞಾನ ಹಾಗೂ 'ನ' ಎಂದರೆ
ನಯತಿ. ಆದ್ದರಿಂದ ಜ್ಞಾನವನ್ನಾಗಲಿ, ಅಜ್ಞಾನವನ್ನಾಗಲಿ, ಅವರವರ ಯೋಗ್ಯತೆಗೆ ತಕ್ಕಂತೆ
ಕರುಣಿಸುವ, ಜ್ಞಾನಮೂರ್ತಿಯೂ, ಆನಂದಮೂರ್ತಿಯೂ, ಆದ ಭಗವಂತ ವಾಮನ.
153) ಪ್ರಾಂಶುಃ
ಪ್ರಾಂಶುಃ ಎಂದರೆ ಪ್ರಕೃಷ್ಟವಾದ ಕಿರಣಗಳುಳ್ಳವ, ಹಾಗೂ ಎತ್ತರದಲ್ಲಿರುವವ ಎಂದರ್ಥ.
ಸೂರ್ಯನಲ್ಲಿ, ಚಂದ್ರನಲ್ಲಿ, ಎಲ್ಲಾ ಜೀವರಲ್ಲಿ, ಎಲ್ಲೆಲ್ಲೂ ತುಂಬಿರುವ ಭಗವಂತ
ಪ್ರಾಂಶುಃ. ಬಲಿ ಚಕ್ರವರ್ತಿ ಭಗವಂತನ ಈ ರೂಪವನ್ನು ತಿಳಿದ ಮರುಕ್ಷಣದಲ್ಲಿ ಭಗವಂತನ
ಪಾದಕಮಲಕ್ಕೆ ತಲೆಯೊಡ್ಡಿ ಶರಣಾಗುತ್ತಾನೆ.
154) ಅಮೋಘಃ
ಮೋಘ ಎಂದರೆ ವ್ಯರ್ಥ ಎಂದರ್ಥ. ಭಗವಂತನ ಯಾವ ಕ್ರಿಯೆಯೂ ವ್ಯರ್ಥವಲ್ಲ ಅದು ಅಮೋಘ.
ಭಗವಂತನಿಗೆ ಅರ್ಪಿಸಿ ನಾವು ಮಾಡುವ ಯಾವ ಕೆಲಸವೂ ಎಂದೂ ವ್ಯರ್ಥವಲ್ಲ. ಗೀತೆಯಲ್ಲಿ
ಹೇಳುವಂತೆ:
ನೇಹಾಭಿಕ್ರ ಮನಾಶೋऽಸ್ತಿ ಪ್ರತ್ಯವಾಯೋ ನ ವಿದ್ಯತೇ (ಅ-೨ ಶ್ಲೋ-೪೦)
ಎಂದರೆ "ಭಗವದ್ಸಾಧನೆಯ ಒಂದು ತೊದಲು ಹೆಜ್ಜೆ ಕೂಡಾ ವ್ಯರ್ಥವಲ್ಲ" .
ನಾವು ಕೋಟ್ಯಾಧಿಪತಿಯಾಗಬೇಕು ಎಂದು ದೇವರನ್ನು ಮರೆತು, ಜೀವನ ಪರ್ಯಂತ ಸಾಧನೆ ಮಾಡಿ,
ಗಳಿಸಿದ ಹಣ ನಮ್ಮೊಂದಿಗೆ ಬರುವುದಿಲ್ಲ. ಆದರೆ ಭಗವಂತನ ಜ್ಞಾನ ಅಥವಾ ಭಗವಂತನನ್ನು
ತಿಳಿಯುವ ಇಚ್ಛೆ, ನಮ್ಮ ಮುಂದಿನ ಜನ್ಮದ ಮೆಟ್ಟಿಲಾಗಿ ನಮ್ಮೊಂದಿಗೆ ಬರುತ್ತದೆ. ನಾವು
ಮಾಡಿದ ಯಾವ ಕರ್ಮವಿರಲಿ, ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದಾಗಿರಲಿ, ಅದು
ಮೋಘವಾಗದೆ, ಮುಂದಿನ ಜನ್ಮದಲ್ಲಿ ಫಲಿಸಿಯೇ ತೀರುವಂತೆ ನೋಡಿಕೊಳ್ಳುವ ಭಗವಂತ ಅಮೋಘಃ
155) ಶುಚಿಃ
ಶುಚಿಃ ಎಂದರೆ "Ever Pure", ದೋಷದ ಸ್ಪರ್ಶವೇ ಇಲ್ಲದೆ, ನಿರ್ಮಲವಾಗಿರುವ ಬೆಳಕಿನ ಪುಂಜ. ಭಗವಂತ ಬೆಂಕಿಯಂತೆ.
ಬೆಂಕಿಗೆ ಏನನ್ನೇ ಹಾಕಿ, ಅದು ಕೊಳೆಯಾಗುವುದಿಲ್ಲ. ಆದರೆ ನೀರು, ಗಾಳಿ
ಕೊಳೆಯಾಗುತ್ತದೆ. ಬೆಂಕಿಗೆ ಹಾಕಿದ ಕೊಳೆ ಕೂಡ ಶುಚಿಯಾಗುತ್ತದೆ. ಭಗವಂತ ಕೂಡ
ಅಗ್ನಿಯಂತೆ ಶುಚಿ. ಆತ ಸ್ವಯಂ ಬೆಳಕು ಹಾಗೂ ಎಲ್ಲರಿಗೂ ಬೆಳಕನ್ನು ಕೊಡುವವ.
ಅಧರ್ಮಿಗಳಿಗೆ 'ಶೋಚ' ಅಥವಾ 'ದುಃಖ' ಕೊಡುವವನೂ ಅವನೇ. ಇಂತಹ ಭಗವಂತ ಶುಚಿಃ..
156) ಊರ್ಜಿತಃ
ಭಗವಂತ ಎಲ್ಲವುದರಲ್ಲೂ ಪೂರ್ಣತೆ ಪಡೆದ, ಅನಂತವಾದ, ಅತ್ಯಂತ ಬಲಶಾಲಿ. ಆದ್ದರಿಂದ ಆತ ಊರ್ಜಿತಃ
157) ಅತೀಂದ್ರಃ
ಅತೀಂದ್ರ ಎಂದರೆ ಇಂದ್ರನನ್ನು ಮೀರಿನಿಂತವನು ಹಾಗೂ ಬ್ರಹ್ಮ- ವಾಯುವನ್ನೂ ಮೀರಿ
ನಿಂತವನು. ಇಂದ್ರ ಎಂದರೆ ಸರ್ವಸಮರ್ಥ. ಜಗತ್ತಿನಲ್ಲಿ ನಾವು ಯಾವುದನ್ನು ಸರ್ವಸಮರ್ಥ
ಎಂದು ತಿಳಿದಿದ್ದೇವೋ, ಆ ಎಲ್ಲಾ ಶಕ್ತಿಗಳನ್ನು ಮೀರಿನಿಂತ ಶಕ್ತಿಯಾದ ಭಗವಂತ
ಅತೀಂದ್ರ. ಇಂದ್ರ ಎಂದರೆ ದೇವೇಂದ್ರ ಕೂಡಾ ಹೌದು. ಭಗವಂತ ದೇವೇಂದ್ರನನ್ನು ಮೀರಿ ನಿಂತ
ಶಕ್ತಿ ಎಂದು ನಿರೂಪಿಸುವ ಕಥೆ, ಶ್ರೀ ಕೃಷ್ಣ ನಮಗೆ ಗೋವರ್ಧನ ಪರ್ವತ ಎತ್ತಿ
ತೋರಿಸಿಕೊಟ್ಟಿದ್ದಾನೆ. ಈ ರೀತಿ ಇಂದ್ರನನ್ನು, ಪ್ರಾಣ-ವಾಯುವನ್ನು, ಬ್ರಹ್ಮಾದಿ
ದೇವತೆಗಳನ್ನು ಮೀರಿನಿಂತ, ಓಂಕಾರ ನಾಮಕ ಭಗವಂತ ಅತೀಂದ್ರಃ .
158) ಸಂಗ್ರಹಃ
ನಮ್ಮ ಮನಸ್ಸಿನ ಶಕ್ತಿ ಸೀಮಿತ. ನಮಗೆ ಕೇವಲ ಸತ್ಯವನ್ನು ಮಾತ್ರ ಗ್ರಹಿಸುವ ಶಕ್ತಿ
ಇಲ್ಲ. ಕೆಲವೊಮ್ಮೆ ನಾವು ಅಸತ್ಯವನ್ನು ಸತ್ಯವನ್ನಾಗಿ ಗ್ರಹಿಸುತ್ತೇವೆ.
ಆದರೆ ಯಾವುದೇ ವಿಷಯವನ್ನು ನಿಶ್ಚಿತವಾಗಿ, ತದ್ವತ್ತಾಗಿ,
ವಿಪರೀತ ಜ್ಞಾನದ ಸ್ಪರ್ಶವಿಲ್ಲದೆ, ಯಥಾರ್ತವಾಗಿ ಗ್ರಹಿಸಬಲ್ಲ ಭಗವಂತ ಸಂಗ್ರಹಃ ನಮಗೆ
ಗ್ರಹಣ ಶಕ್ತಿಯನ್ನು ದಯಪಾಲಿಸಿದ, ನಾವು ಜಾರಿ ಬಿದ್ದಾಗ, ಕೈಹಿಡಿದು ನಮ್ಮನ್ನು
ಮೇಲಕ್ಕೆತ್ತಿ, ಆತ್ಮೀಯವಾಗಿ ಸ್ವೀಕರಿಸಿ, ಅಜ್ಞಾನವನ್ನು ತೊಲಗಿಸಿ, ಜ್ಞಾನವನ್ನು ಕೊಡುವ
ಭಗವಂತ ಸಂಗ್ರಹಃ . ಪ್ರಳಯ ಕಾಲದಲ್ಲಿ ಎಲ್ಲಾ ಜೀವರನ್ನು ತನ್ನ ಉದರದಲ್ಲಿ ಸಂಗ್ರಹಿಸಿ,
ಸೃಷ್ಟಿ ಕಾಲದಲ್ಲಿ ಪುನಃ ಆಯಾ ಜೀವಗಳ ಕರ್ಮಾನುಸಾರವಾಗಿ ಮರುಸೃಷ್ಟಿ ಮಾಡುವ ಭಗವಂತ
ಸಂಗ್ರಹಃ.
159) ಸರ್ಗಃ
ಸರ್ಗ ಎಂದರೆ ಎಲ್ಲವನ್ನು ಸೃಷ್ಟಿಮಾಡುವ ಶಕ್ತಿ. ಸೃಷ್ಟಿ ಎಂದರೆ
ಸ್ವರೂಪೋತ್ಪತಿ. ಆಕಾಶದ ಸೃಷ್ಟಿ ಎಂದರೆ ಏನೂ ಇಲ್ಲದ ಆಕಾಶದಲ್ಲಿ ಎಲ್ಲವನ್ನು
ತುಂಬಿ ಹೊಸ ರೂಪ ಕೊಡುವುದು. ಕಾಲದ ಸೃಷ್ಟಿ ಎಂದರೆ,
ಕಾಲ ಎನ್ನುವ ಅಖಂಡವಾದದ್ದನ್ನು ಸೂರ್ಯ ಚಂದ್ರರ ಸೃಷ್ಟಿ ಮುಖೇನ,
ಅನೇಕ ಭಾಗಗಳನ್ನಾಗಿ ಮಾಡಿ ಹೊಸ ರೂಪ ಕೊಡುವುದು. ಹೀಗೆ ಇಡೀ ವಿಶ್ವದ ಸೃಷ್ಟಿಕರ್ತ ಭಗವಂತ
ಸರ್ಗಃ
160) ಧೃತಾತ್ಮಾ
ಧೃತಾತ್ಮಾ ಎಂದರೆ ಎಲ್ಲವನ್ನು ಧರಿಸಿದವನು ಎಂದರ್ಥ. ಆತ ಬಿಂಬ ರೂಪನಾಗಿ,
ಅನೇಕರೂಪಿಯಾಗಿ, ನಮ್ಮೊಳಗೇ ಇದ್ದಾನೆ. ಈ ದೇಹದ ಪಂಚ ಕೋಶಗಳಲ್ಲಿ, ಪಂಚ
ಜ್ಞಾನೇಂದ್ರಿಯಗಳಲ್ಲಿ, ಪಂಚ ಕರ್ಮೇಂದ್ರಿಯಗಳಲ್ಲಿ, ಪಂಚ ರೂಪನಾಗಿ ಭಗವಂತನಿದ್ದಾನೆ.
ಸಪ್ತ ಧಾತುಗಳಲ್ಲಿ ಸಪ್ತರೂಪನಾಗಿ, 360 ಅಸ್ಥಿಗಳಲ್ಲಿ , 72,000 ನಾಡಿಗಳಲ್ಲಿ,
ಅನಂತ ರೂಪನಾಗಿ ವ್ಯಾಪಿಸಿದ್ದಾನೆ. ಪ್ರತಿಯೊಂದು ಮಾನವ ಶರೀರದಲ್ಲೂ ಭಗವಂತನ ಅನಂತ
ರೂಪವಡಗಿದೆ. ಆದ್ದರಿಂದ ಇಂತಹ ದೇವಾಲಯವನ್ನು ಛಿದ್ರಗೊಳಿಸುವ ಆತ್ಮಹತ್ಯೆ ಮಹಾ ಪಾಪ.
ಜಗತ್ತಿನ ಇತರ ಜೀವ ಜಂತುಗಳಲ್ಲಿ ಭಗವಂತನಿದ್ದರೂ ಕೂಡಾ, ಪೂರ್ಣತೆ ಪಡೆಯದ ಇತರ
ಜೀವಗಳಿಗಿಂತ, ಮನುಷ್ಯನಲ್ಲಿ ಆತನ ಅಭಿವ್ಯಕ್ತ ಅತೀ ಹೆಚ್ಚು. ಈ ರೀತಿ ನಮ್ಮೊಳಗಿದ್ದು
ಎಲ್ಲಾ ದೇವತೆಗಳನ್ನು ಧಾರಣೆ ಮಾಡಿ, ಎಲ್ಲಾ ಕಡೆ ತುಂಬಿರುವ ಆ ಭಗವಂತ ಧೃತಾತ್ಮಾ.
161) ನಿಯಮಃ
ಭಗವಂತನನ್ನು ತಿಳಿಯಬೇಕಾದರೆ ನಾವು ನಮ್ಮಲ್ಲಿ ಐದು ನಿಯಮಗಳನ್ನು
ಅಳವಡಿಸಿಕೊಳ್ಳಬೇಕು. ಅವುಗಳೆಂದರೆ: ಶೌಚ, ತಪಃ, ತೃಪ್ತಿಃ, ಸ್ವಾಧ್ಯಾಯ ಮತ್ತು
ಪುರುಷಾರ್ಚನ.
೧)ಶೌಚ : ಕೊಳಕು ತುಂಬಿದ ಮೈ, ಕೊಳಕು ತುಂಬಿದ ಮನಸ್ಸಿಗೆ ಎಂದೂ ಭಗವಂತ
ಗೋಚರಿಸುವುದಿಲ್ಲ. ನಮ್ಮ ದೇಹ-ಮನಸ್ಸು-ಮನೆ ಎಲ್ಲವೂ ಸ್ವಚ್ಛವಾಗಿರಬೇಕು. ನಾವು ನಮ್ಮ
ತಲೆ ಮೇಲೆ ಒಂದು ಕೊಡ ನೀರು ಹಾಕಿ ಕೊಂಡಾಗ ಮಡಿಯಾಗುವುದಿಲ್ಲ . ಭಗವಂತನ ನೆನಪಿಗೆ
ಪೋಷಕವಾದ ನಡೆ "ಮಡಿ". ನಿಜವಾದ ಮಡಿ ಎಂದರೆ ಏನೆಂದು ಈಗ ನೋಡೋಣ.
||ಅಥಃ ಪ್ರಾತಃ ಸಂಧ್ಯಾ|| ಅಪವಿತ್ರಃ ಪವಿತ್ರೋವಾ ಸರ್ವಾವಸ್ಥಾಂ ಗತೋಪಿವಾ |ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||
ಅಂದರೆ ನೀನು ಯಾವುದೇ ಸ್ಥಿತಿಯಲ್ಲಿರು, ಕೆಂದಾವರೆಯ ಅರಳಿದ ಎಸಳಿನಂತೆ,
ನಸುಗೆಂಪಾಗಿ, ಪ್ರೀತಿಯ ಕಾರುಣ್ಯದ ರಸಪೂರವನ್ನು ಹರಿಸುತ್ತಿರುವ, ಅರಳುಗಣ್ಣಿನ
ಭಗವಂತನನ್ನು ನೆನೆಸಿಕೂ. ಆತನ ರಸಧಾರೆ ನಿನ್ನ ಮೇಲೆ ಬೀಳುತ್ತಿದೆ ಎಂದು ಯೋಚಿಸು. ಆಗ
ನೀನು ಮಡಿಯಾಗುತ್ತೀಯ. ಈ ಸ್ಥಿತಿಯಲ್ಲಿ ನೀನು ಮೈಲಿಗೆಯಾಗಲು ಸಾಧ್ಯವಿಲ್ಲ. ನಿನ್ನನ್ನು
ಮುಟ್ಟಿದವರೂ ಕೂಡ ನಿನ್ನಿಂದ ಮಡಿಯಾಗುತ್ತಾರೆ! ನೀನು ಧರಿಸಿರುವ ಬಟ್ಟೆಯಾಗಲಿ, ಇತರ
ಯಾವುದೇ ವಸ್ತು ನಿನ್ನನ್ನು ಮೈಲಿಗೆ ಮಾಡಲಾರದು. ಭಗವಂತನ ಚಿಂತನೆ, ಭಗವಂತನ
ಪ್ರಜ್ಞೆಯನ್ನು ಜಾಗೃತಗೊಳಿಸುವ ನೆಡೆಯೇ 'ಮಡಿ'. ಭಗವಂತನಿಂದ ದೂರ ಸರಿಸುವ ಅಜ್ಞಾನವೇ
ಮೈಲಿಗೆ. ಇತರರನ್ನು ಮೈತ್ರಿಭಾವದಿಂದ ಕಾಣುವುದು. ಸಕಲವೂ ಪರಮಾತ್ಮನಸ್ವರೂಪವೇ ಎಂದು
ಭಾವಿಸುವುದು ಶೌಚ. ಈ ಮನಃಸ್ಥಿತಿಯಿಂದ ನಿಜವಾದ ಸುಖ ದೊರೆಯುವುದು.
೨) ತಪಃ : ನಮ್ಮ ದೇಹ ಮತ್ತು ಮನಸ್ಸಿನ ಖಯಾಲಿಗಳಿಗೆ ಒಳಗಾಗದೆ, ನಮ್ಮ ಇಷ್ಟಕ್ಕೆ
ತಕ್ಕಂತೆ ನಮ್ಮ ದೇಹ ಮನಸ್ಸನ್ನು ಮಣಿಸುವ ಕ್ರಿಯೆ ತಪಸ್ಸು. ಇವುಗಳ ಆಚರಣೆಯಿಂದ
ಅಶುದ್ಧಿ ನಾಶವಾಗಿ ಅಂತಃಕರಣವು ಶುದ್ಧವಾಗುತ್ತದೆ.
೩) ತೃಪ್ತಿಃ : ಇದ್ದದರಲ್ಲಿ ತೃಪ್ತಿಪಟ್ಟು, ಹರಿಯ ಚರಣದ ಅರಿವಿನಿಂದ ನಮ್ಮ ಪಾಲಿನ ಕರ್ಮ ನಾವು ಮಾಡುವುದು.
೪) ಸ್ವಾಧ್ಯಾಯ: ಅಂದರೆ ನಿರಂತರ ಅಧ್ಯಯನ. ವೈದಿಕಮಂತ್ರಗಳ ಅರ್ಥಾನುಸಂಧಾನದಿಂದ
ಸಿದ್ಧಿ ದೊರೆಯುತ್ತದೆ. ಮಂತ್ರರಹಸ್ಯ ಅರಿಯಲು ಸದ್ಗುರುವಿನ ಆಶ್ರಯ ಅವಶ್ಯ.
(ಸ್ವಾಧ್ಯಾಯಾದಿಷ್ಟದೇವತಾ ಸಂಪ್ರಯೋಗಃ).
೫) ಪುರುಷಾರ್ಚನ: ಬದುಕಿನ ಪ್ರತಿಯೊಂದು ಕ್ರಿಯೆಯೂ ಭಗವಂತನ ಆರಾಧನೆ, ಹರಿಯ ಪೂಜೆ
ಎನ್ನುವ ಎಚ್ಚರ, ಸಕಲಕ್ರಿಯಾದಿಗಳ ಫಲವನ್ನು ಅಪೇಕ್ಷಿಸದೇ ಈಶ್ವರನಲ್ಲಿ ಅರ್ಪಣೆ
ಮಾಡುವುದು ಪುರುಷಾರ್ಚನ
"ಕಾಮತೋಕಾಮತೋವಾಪಿ ಯತ್ಕರೋಮಿ ಶುಭಾಶುಭಂ |
ತತ್ಸರ್ವಂ ತ್ವಯಿ ವಿನ್ಯಸ್ಯ ತ್ವತ್ಪ್ರಯುಕ್ತಃ ಕರೋಮ್ಯಹಂ ||"
ಅಂದರೆ, ಆಸೆಯಿಂದಲೋ ಆಥವಾ ಆಸೆ ಇಲ್ಲದೆಯೋ ಯಾವ ಶುಭಾಶುಭ ಕರ್ಮಗಳನ್ನು
ಮಾಡುತ್ತೇವೆಯೋ ಅವೆಲ್ಲವನ್ನೂ ಅವನಲ್ಲಿ ಅರ್ಪಿಸಿ ಅವನ ಪ್ರಯುಕ್ತವೇ ಅಂದರೆ
ಭಗವಂತನಿಗಾಗಿಯೇ ನಾನು ಎಲ್ಲಾ ಕರ್ಮಗಳನ್ನೂ ಮಾಡುತ್ತೇನೆ ಎಂದು ಈಶ್ವರನಲ್ಲಿ ಕಾಯಾ,
ವಾಚಾ, ಮನಸಾ ಅರ್ಪಣೆ ಮಾಡುವುದು.
ಈ ರೀತಿ ಮೇಲಿನ ಐದು ನಿಯಮಗಳಿಂದ ತಿಳಿಯಲ್ಪಡುವವನು, ಹಾಗೂ ನಮ್ಮ ಅಭಿವೃದ್ಧಿಗಾಗಿ ಈ ಐದು ನಿಯಮಗಳನ್ನು ನಿಯಮಿಸಿದವನು ನಿಯಮಃ
162) ಯಮಃ
ಯಮಃ ಎಂದರೆ ಯಮನೊಳಗಿದ್ದು, ಪಾಪಿಗಳಿಗೆ ಶಿಕ್ಷೆ ಕೊಡುವವ, ಎಲ್ಲರನ್ನು
ನಿಯಂತ್ರಿಸುವವ ಎನ್ನುವುದು ಸಾಮಾನ್ಯ ಅರ್ಥ. ಯಮಃ
ಅನ್ನುವುದಕ್ಕೆ "ಯಮಗಳಿಂದ ವೇದ್ಯನಾದವನು" ಎನ್ನುವ ವಿಶೇಷ ಅರ್ಥವಿದೆ. ನಮ್ಮ
ಅಭಿವೃದ್ಧಿಗೊಸ್ಕರ, ಸಮಾಜದ ಸ್ವಾಸ್ಥ್ಯಕ್ಕೋಸ್ಕರ ನಾವು ಬಿಡಬೇಕಾದ ಐದು
ದುರ್ಗುಣಗಳನ್ನು ಯಮಗಳು ಎನ್ನುತ್ತಾರೆ. ಅವುಗಳೆಂದರೆ ೧) ಹಿಂಸೆ , ೨) ಸುಳ್ಳು
ಹೇಳುವುದು , ೩) ಕಳ್ಳತನ ಮಾಡುವುದು , ೪) ಅನಗತ್ಯ ಇನ್ನೊಬ್ಬರ ಮುಂದೆ ಕೈ ಚಾಚುವುದು
ಮತ್ತು ೫) ಅತಿ ಕಾಮುಕತೆ.
ಸಮಾಜಜೀವಿಯಾಗಿ ನಾವು ಅನುಸರಿಸಬೇಕಾದ ಐದು ನೀತಿ ಸಂಹಿತೆಗಳೆಂದರೆ: ೧) ಅಹಿಂಸಾ, ೨) ಸತ್ಯ, ೩) ಅಸ್ತೇಯ, ೪) ಬ್ರಹ್ಮಚರ್ಯ ಮತ್ತು ೫) ಅಪರಿಗ್ರಹ.
೧) ಅಹಿಂಸ: ಇನ್ನೊಬ್ಬರಿಗೆ ನೋವುಂಟುಮಾಡದಂತೆ ಬದುಕುವುದು.
೨) ಸತ್ಯ : ಸ್ವಾರ್ಥಕ್ಕೋಸ್ಕರ ಇನ್ನೊಬ್ಬರಿಗೆ ಸುಳ್ಳು ಹೇಳದೇ, ಪ್ರಾಮಾಣಿಕನಾಗಿ ಬದುಕುವುದು. ಆದರೆ ಇನ್ನೊಬ್ಬರ ಮನ ನೋಯಿಸುವ ಸತ್ಯ ನುಡಿಯಬಾರದು
೩) ಅಸ್ತೇಯ : ಕಳ್ಳತನ ಮಾಡದೇ ಇರುವುದು ನಮ್ಮ ನೀತಿಯಾಗಿರಬೇಕು.
೪) ಬ್ರಹ್ಮಚರ್ಯ: ಅತಿ ಕಾಮುಕನಾಗದೇ ಬದುಕುವುದು. ಇಲ್ಲಿ ಬ್ರಹ್ಮಚರ್ಯ ಎಂದರೆ
ಮಧುವೆಯಾಗದೇ ಇರುವುದು ಎನ್ನುವ ಅರ್ಥವಲ್ಲ. ಸಂಸಾರಿಯಾಗಿದ್ದು ಕೂಡಾ ಬ್ರಹ್ಮಚರ್ಯ
ಪಾಲಿಸಬಹುದು. ಆದರೆ ಕಾಮುಕನಾಗಿರಬಾರದು.
೫) ಅಪರಿಗ್ರಹ : ಎಂದರೆ ಈ ಜಡ ಶರೀರಕ್ಕೆ ಬೇಕಾದ ಭೋಗವಸ್ತುಗಳನ್ನು ಬಯಸದಿರುವುದು.
ನಮಗೆ ಬೇಕಾದ್ದನ್ನು ಇನ್ನೊಬ್ಬರಲ್ಲಿ ಒತ್ತಾಯ ಪೂರ್ವಕವಾಗಿ ಬಯಸದೇ, ಇನ್ನೊಬ್ಬರು
ಕೊಟ್ಟಿದ್ದರಲ್ಲಿ ತೃಪ್ತಿ ಪಡುವುದು.
ಈ ರೀತಿ ಐದು ಯಮಗಳೆಂಬ ನೀತಿ ಸಂಹಿತೆಯನ್ನು ಸೃಷ್ಟಿಸಿದ ಭಗವಂತ ಯಮಃ
To be continued. ....
About Me
- Madhwa Vallabha
- Hari Sarvottama Vayu Jeevottama
A very warm welcome to the blog of Madhwa Brahmins community.
We, Madhwa Brahmins are followers of Jagadguru Sriman Madhwacharya. We originally hail from places in Karnataka and the neighboring states of Maharashtra, Andhra Pradesh, Tamil Nadu and Kerala. Our main dialects are Kannada, Tulu, Marathi, Telugu and Konkani.
A brief background of Jagadguru Sri Madhwacharya:
prathamO hanumAn nAma dviteeyO bheema Eva cha |
pUrNaprajna tRuteeyastu bhagavat kAryasAdhakaH ||
As the above shloka from khila vAyustuti explains, Sri Madhwacharya (also known by the names Poornaprajna and Anandateertha) is the third incarnation of Lord MukhyaprAna Vaayu, after Lord Hanuman and Lord Bheemasena. He is the chief proponent of TattvavAda, popularly known as Dvaita. He was born on Vijayadashami day of 1238 CE at Paajaka Kshetra, a small village near Udupi. He is the 22nd commentator on the Brahma sutras of Lord Sri Veda Vyasa.
Kindly note that this blog contains important topics discussed in our Orkut community and some articles on tattvavAda philosophy. All the topics can be found in the BLOG ARCHIVE (right side)
30 December, 2011
Subscribe to:
Posts (Atom)